ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಮೇ 21, 2013

ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - ೧


     ಅವನೊಬ್ಬ ಗ್ರಾಮಲೆಕ್ಕಿಗ, ಹೆಸರು ಖಲಂದರ್ ಎಂದಿಟ್ಟುಕೊಳ್ಳೋಣ. ಪ್ರತಿ ತಿಂಗಳೂ ತಾನು ವಸೂಲು ಮಾಡಿದ ಕಂದಾಯ, ಸರ್ಕಾರೀ ಬಾಕಿ, ಇತ್ಯಾದಿಗಳ ಖಾತೆ, ಖಿರ್ದಿ ಬರೆದು ಸಂಬಂಧಿಸಿದ ಲೆಕ್ಕ ಶೀರ್ಷಿಕೆಗಳಿಗೆ ಜಮಾ ಮಾಡಲು ಬ್ಯಾಂಕ್ ಚಲನ್ನುಗಳನ್ನು ಬರೆದು ಶಿರಸ್ತೇದಾರರಿಂದ ಮೇಲುಸಹಿ ಮಾಡಿಸಿಕೊಳ್ಳುತ್ತಿದ್ದ. ಎಲ್ಲರನ್ನೂ ಚೆನ್ನಾಗಿ ಮಾತನಾಡಿಸುತ್ತಿದ್ದ ಅವನು ಧಾರಾಳಿಯೂ ಆಗಿದ್ದರಿಂದ ಎಲ್ಲರಿಗೂ ಅವನು ಆಪ್ತನೆನಿಸಿದ್ದ. ಹಣ ಬ್ಯಾಂಕಿಗೆ ಜಮಾ ಆದಮೇಲೆ ತಾಲ್ಲೂಕು ಕಛೇರಿಯ ಡಿಸಿಬಿ (ಡಿಮ್ಯಾಂಡ್-ಕಲೆಕ್ಷನ್-ಬ್ಯಾಲೆನ್ಸ್ = ಬೇಡಿಕೆ-ವಸೂಲಿ-ಶಿಲ್ಕು) ವಹಿಯಲ್ಲಿ ವಿವರ ಬರೆಯುತ್ತಿದ್ದ. ಕಛೇರಿಯ ಗುಮಾಸ್ತರು ಅದನ್ನು ಖಜಾನೆಯಿಂದ ಬರುವ ಶೆಡ್ಯೂಲುಗಳೊಂದಿಗೆ ತಾಳೆ ನೋಡಬೇಕಾದುದು ಕ್ರಮವಾದರೂ, ಖಜಾನೆಯಿಂದ ಶೆಡ್ಯೂಲುಗಳು ತಿಂಗಳುಗಳು ತಡವಾಗಿ ಬರುತ್ತಿದ್ದುದರಿಂದ ತಾಳೆ ನೋಡುವ ಕೆಲಸ ಸಾಮಾನ್ಯವಾಗಿ ಆಗುತ್ತಿರಲಿಲ್ಲ. ದಫ್ತರ್ ತನಿಖೆ ಮಾಡುವಾಗಲೋ, ಲೆಕ್ಕ ಪರಿಶೋಧನೆ ಮಾಡುವಾಗಲೋ ವ್ಯತ್ಯಾಸವಿದ್ದರೆ ಪರಿಶೀಲಿಸಿ ನೋಡುತ್ತಾರೆ. ಸಾಮಾನ್ಯವಾಗಿ ಯಾವುದೋ ಲೆಕ್ಕ ಶೀರ್ಷಿಕೆಗೆ ಹೋಗಬೇಕಾದ ಹಣ ಇನ್ನು ಯಾವುದೋ ಶೀರ್ಷಿಕೆಗೆ ಜಮಾ ಆಗಿ ವ್ಯತ್ಯಾಸವಾಗುತ್ತಿರುತ್ತದೆ. ಕಂದಾಯ ಲೆಕ್ಕ ಪರಿಶೀಲಕರು ಎಲ್ಲಾ ಗ್ರಾಮಲೆಕ್ಕಿಗರುಗಳ ಲೆಕ್ಕವನ್ನು ಪರಿಶೀಲಿಸುವುದಿಲ್ಲ. ಪರಿಶೀಲನಾ ಅವಧಿಯಲ್ಲಿ ಲಭ್ಯವಿರುವವರ ಲೆಕ್ಕಗಳನ್ನು ಮಾತ್ರ ಪರಿಶೀಲಿಸುತ್ತಾರೆ. ಜಾಣ ಖಲಂದರ್ ಆ ಕಛೇರಿಯಲ್ಲಿ ೪-೫ ವರ್ಷಗಳಿಂದ ಕೆಲಸ ಮಾಡಿದ್ದರೂ ಆ ಅವಧಿಯಲ್ಲಿ ಒಮ್ಮೆಯೂ ಅವನ ಲೆಕ್ಕ ಯಾವುದಾದರೂ ಕಾರಣದಿಂದ ತನಿಖೆಯಾಗಿರಲೇ ಇಲ್ಲ. ಹೀಗೆ ಒಮ್ಮೆ ಪರಿಶೀಲಿಸಿದಾಗ ಖಲಂದರನ ಮಿತ್ರ ಗ್ರಾಮಲೆಕ್ಕಿಗ ರಮೇಶನ ಒಂದು ತಿಂಗಳ ಕಂದಾಯದ ಹಣ ಖಜಾನೆಯ ಲೆಕ್ಕದಲ್ಲಿ ಜಮಾ ಆಗದೆ ಇರುವುದು ಕಂಡುಬಂದಿತು. ಖಿರ್ದಿಯಲ್ಲಿ ಮಾತ್ರ ಹಣ ಬ್ಯಾಂಕಿಗೆ ಸಂದಾಯವಾದ ಕುರಿತು ಬ್ಯಾಂಕಿನ 'ಕ್ಯಾಶ್ ರಿಸೀವ್ಡ್' ಸೀಲು ಇತ್ತು. ಅನುಮಾನದಿಂದ ಬ್ಯಾಂಕಿನಲ್ಲಿ ವಿಚಾರಿಸಿದಾಗ ಆ ಮೊಬಲಗು ಬ್ಯಾಂಕಿಗೆ ಜಮಾ ಆಗಿಲ್ಲದುದು ಖಚಿತವಾಗಿತ್ತು. ರಮೇಶನಿಗೆ ನೋಟೀಸು ಕೊಟ್ಟು ವಿಚಾರಿಸಿದಾಗ ತಾನು ಒಂದು ವಾರ ರಜೆಯಲ್ಲಿದ್ದುದರಿಂದ ಹಣವನ್ನು ಮಿತ್ರ ಖಲಂದರ್ ಮೂಲಕ ಬ್ಯಾಂಕಿಗೆ ಕಟ್ಟಿಸಿದ್ದಾಗಿ ತಿಳಿಸಿದ್ದ. ಶಿರಸ್ತೇದಾರರಿಗೆ ಅನುಮಾನ ಬಂದು ಖಲಂದರನ ಖಾತೆ-ಖಿರ್ದಿಗಳನ್ನು ಪಡೆದು ಪರಿಶೀಲಿಸಿದಾಗ ಖಲಂದರ್ ಕಛೇರಿಗೆ ಬಂದ ಮೊದಲ ಎರಡು ತಿಂಗಳ ಹಣ ಹೊರತುಪಡಿಸಿ ನಂತರದ ಯಾವುದೇ ತಿಂಗಳ ಹಣ ಸರ್ಕಾರಕ್ಕೆ ಜಮಾ ಅಗಿರದೇ ಇದ್ದುದು ಗೊತ್ತಾಯಿತು. ಅವನೇ ಬ್ಯಾಂಕಿನ ಖೋಟಾ ಸೀಲು ಮಾಡಿಸಿಕೊಂಡು ಹಣ ಜಮಾ ಆದ ಬಗ್ಗೆ ಖಿರ್ದಿಯಲ್ಲಿ ಒತ್ತುತ್ತಿದ್ದ. ದೊಡ್ಡ ಮೊತ್ತದ ಹಣ ಲಪಟಾವಣೆಯಾಗಿತ್ತು. ಮಿತ್ರ ರಮೇಶನ ಹಣವನ್ನೂ ಬ್ಯಾಂಕಿಗೆ ಜಮಾ ಮಾಡದೇ ತನ್ನ ಖೋಟಾ ಸೀಲು ಒತ್ತಿದ್ದರಿಂದ ಈ ಹಗರಣ ಬೆಳಕಿಗೆ ಬರುವಂತಾಯಿತು. ಜಿಲ್ಲಾಧಿಕಾರಿಯವರಿಗೆ ವರದಿ ಹೋಯಿತು. ಗ್ರಾಮಲೆಕ್ಕಿಗ, ಆ ಐದು ವರ್ಷಗಳಲ್ಲಿ ಕೆಲಸ ಮಾಡಿದ್ದ ಡಿಸಿಬಿ ಗುಮಾಸ್ತರುಗಳು, ರೆವಿನ್ಯೂ ಇನ್ಸ್ ಪೆಕ್ಟರುಗಳು, ಶಿರಸ್ತೇದಾರರುಗಳ ಮೇಲೆ ಇಲಾಖಾ ವಿಚಾರಣೆ ನಡೆಸಲಾಯಿತು. ಸುಮಾರು ೨-೩ ವರ್ಷಗಳ ಕಾಲ ವಿಚಾರಣೆ ನಡೆದು ಆರೋಪಿಗಳು ತಪ್ಪಿತಸ್ಥರೆಂದು ತೀರ್ಮಾನಿಸಿದರು. ಗ್ರಾಮಲೆಕ್ಕಿಗನನ್ನು ಸೇವೆಯಿಂದ ವಜಾ ಮಾಡಲಾಯಿತು. ಗುಮಾಸ್ತರುಗಳ, ರೆವಿನ್ಯೂ ಇನ್ಸ್ ಪೆಕ್ಟರುಗಳ ಎರಡೆರಡು ವಾರ್ಷಿಕ ಇಂಕ್ರಿಮೆಂಟುಗಳನ್ನು, ಶಿರಸ್ತೇದಾರರ ೪ ವಾರ್ಷಿಕ ಇಂಕ್ರಿಮೆಂಟುಗಳನ್ನು ತಡೆಹಿಡಿದು ಆದೇಶವಾಯಿತು. ಅವರುಗಳ ಬಡ್ತಿಗೂ ಇದರಿಂದ ತೊಂದರೆಯಾಯಿತು. 
     ವಜಾಗೊಂಡ ಗ್ರಾಮಲೆಕ್ಕಿಗ ಸುಮ್ಮನೇ ಕೂರಲಿಲ್ಲ. ತನ್ನದೇ ಆದ ಒಂದು ಪೆಪ್ಪರಮೆಂಟ್ ತಯಾರಿಕಾ ಘಟಕ ಸ್ಥಾಪಿಸಿದ. ಅದೇ ಸಮಯಕ್ಕೆ ತನ್ನನ್ನು ವಜಾ ಮಾಡಿದ ಜಿಲ್ಲಾಧಿಕಾರಿಯವರ ಆದೇಶವನ್ನು ಪ್ರಶ್ನಿಸಿ ಉಚ್ಛನ್ಯಾಯಾಲಯದಲ್ಲಿ ಮೇಲುಮನವಿಯನ್ನೂ ಸಲ್ಲಿಸಿದ. ಪೆಪ್ಪರಮೆಂಟ್ ತಯಾರಿಕೆ ಮತ್ತು ಮಾರಾಟದಿಂದ ಒಳ್ಳೆಯ ಲಾಭ ಮಾಡಿದ ಅವನು ದೊಡ್ಡ ಬಂಗಲೆಯಂತಹ ಮನೆ ಕಟ್ಟಿಕೊಂಡು ಕಾರಿನಲ್ಲಿ ಸೂಟು ಬೂಟು ಧರಿಸಿ ಓಡಾಡತೊಡಗಿದ. ಉಚ್ಛನ್ಯಾಯಾಲಯದಲ್ಲಿ ೬-೭ ವರ್ಷಗಳು ವಿಚಾರಣೆ ನಡೆದು ಆ ಗ್ರಾಮಲೆಕ್ಕಿಗ ನಿರ್ದೋಷಿಯೆಂದು ತೀರ್ಮಾನವಾಗಿತ್ತು. ಇಲಾಖಾ ವಿಚಾರಣೆ ಸರಿಯಾಗಿ ನಡೆಸಿರಲಿಲ್ಲವೆಂದೂ, ಬ್ಯಾಂಕಿನವರನ್ನು ವಿಚಾರಣೆ ನಡೆಸಿಯೇ ಇಲ್ಲವೆಂದೂ, ತನ್ನ ಮುಗ್ಧತೆಯನ್ನು ಬ್ಯಾಂಕಿನವರು ದುರುಪಯೋಗಪಡಿಸಿಕೊಂಡಿದ್ದರೆಂದೂ ಅವನು ಮುಂದಿಟ್ಟ ವಾದವನ್ನು ಒಪ್ಪಿದ ನ್ಯಾಯಾಲಯ, ಸರ್ಕಾರ ಆರೋಪಗಳನ್ನು ಸಾಬೀತುಗೊಳಿಸುವಲ್ಲಿ ವಿಫಲವಾಗಿದೆಯೆಂದು, ಸರಿಯಾಗಿ ವಿಚಾರಣೆ ನಡೆಸಿಲ್ಲವೆಂದು ಹಾಗೂ ಅವನನ್ನು ಮರಳಿ ಸೇವೆಗೆ ತೆಗೆದುಕೊಂಡು ಹಿಂದಿನ ಪೂರ್ಣ ಅವಧಿಯ ವೇತನವನ್ನು ಪಾವತಿಸಲು ಮತ್ತು ಅಗತ್ಯವೆನಿಸಿದರೆ ಹೊಸದಾಗಿ ಇಲಾಖಾ ವಿಚಾರಣೆ ನಡೆಸಬಹುದೆಂದೂ ತಿಳಿಸಿತ್ತು. ಕಾರಿನಲ್ಲಿ ಟ್ರಿಮ್ಮಾಗಿ ಬಂದ ಖಲಂದರನನ್ನು ಜಿಲ್ಲಾಧಿಕಾರಿಯವರು ಸೇವೆಗೆ ತೆಗೆದುಕೊಳ್ಳಲೇಬೇಕಾಯಿತು ಮತ್ತು ಹಳೆಯ ಎಂಟು ವರ್ಷಗಳ ಸಂಬಳವನ್ನು ಅವನು ಕೆಲಸ ಮಾಡಿರದಿದ್ದರೂ ಅವನಿಗೆ ಕೊಡಲೇಬೇಕಾಯಿತು. ಅವನೋ ನಂತರದಲ್ಲಿ, ತನ್ನ ಪರವಾಗಿ ಇನ್ನೊಬ್ಬನನ್ನು ನೇಮಿಸಿಕೊಂಡು ಅವನಿಗೆ ತನ್ನ ಅರ್ಧ ಸಂಬಳ ಕೊಟ್ಟು ಬರವಣಿಗೆ ಕೆಲಸ ಮಾಡಿಸುತ್ತಿದ್ದ. ಸಂಬಳ ತೆಗೆದುಕೊಳ್ಳಲು ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಅವನು ಕಛೇರಿಗೆ ಹೋಗುತ್ತಿದ್ದ. ಜಿಲ್ಲಾಧಿಕಾರಿಯವರು ಹೊಸದಾಗಿ ಇಲಾಖಾ ವಿಚಾರಣೆ ನಡೆಸುವ ಸಲುವಾಗಿ ಹೊಸದಾಗಿ ಆರೋಪ ಪಟ್ಟಿ ತಯಾರಿಸಲು ತಹಸೀಲ್ದಾರರಿಗೆ ಸೂಚಿಸಿದರು. ಹಳೆಯ ಕಡತಗಳನ್ನು ಪರಿಶೀಲಿಸಿ ಆರೋಪ ಪಟ್ಟಿ ತಯಾರಿಸಲು ನೋಡಿದರೆ ಸಂಬಂಧಿಸಿದ ಕಡತಗಳು, ದಾಖಲೆಗಳು ದೊರೆಯುವುದೇ ಕಷ್ಟವಾಗಿತ್ತು. ಹಿಂದಿನ ಇಲಾಖಾ ವಿಚಾರಣಾ ಕಡತದಿಂದಲೂ ಮುಖ್ಯವಾದ ಮೂಲ ದಾಖಲಾತಿಗಳೇ ಕಣ್ಮರೆಯಾಗಿದ್ದವು. ಅವರ ಮೇಲೆ ಇವರು, ಇವರ ಮೇಲೆ ಅವರು ತಪ್ಪು ಹೊರಿಸುತ್ತಲೇ, ಪತ್ರ ವ್ಯವಹಾರಗಳನ್ನು ಮಾಡುತ್ತಲೇ ವರ್ಷಗಳು ಉರುಳಿದವು. ಖಲಂದರನ ಆದರಾತಿಥ್ಯಗಳಿಗೆ ಮರುಳಾದವರು ಅವನ ಸಹಕಾರಕ್ಕೆ ನಿಂತಿದ್ದರು.  ಕ್ರಮೇಣ ಎಲ್ಲರಿಗೂ ವಿಷಯ ಮರೆತೇ ಹೋಯಿತು. ಅವನೂ ಪೂರ್ಣ ಸೇವೆ ಸಲ್ಲಿಸಿ ಸೇವಾನಿವೃತ್ತನೂ ಆದ, ಪಿಂಚಣಿಯನ್ನೂ ಪಡೆದ ಎಂಬಲ್ಲಿಗೆ ವ್ಯರ್ಥ ಇಲಾಖಾ ವಿಚಾರಣಾ ಪ್ರಸಂಗಗಳ ಈ ಅಧ್ಯಾಯ ಮುಗಿದುದು.

-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ