ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜೂನ್ 25, 2013

ಅರ್ಜೆಂಟು ಅಂದ್ರೆ ಆರು ತಿಂಗಳಲ್ಲ, ಇನ್ನೂ ಜಾಸ್ತಿ!!


     ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಕಛೇರಿಯ ಕಾರ್ಯವೈಖರಿ ಸುಧಾರಣೆಯಾಗಲಿ ಎಂದು ಆಶಿಸಿ 'ಕಾರ್ಯದಕ್ಷತಾ ಸುಧಾರಣಾ ಯಜ್ಞ' ನಡೆಸಿದ್ದು, ಈ ರೀತಿಯ ಸಾತ್ವಿಕ ಪ್ರತಿಭಟನೆ ದೊಡ್ಡ ಸುದ್ದಿಯಾಗಿ ಪತ್ರಿಕೆಗಳಲ್ಲಿ, ವಿವಿಧ ದೃಷ್ಯ ಮಾಧ್ಯಮಗಳಲ್ಲಿ ಪ್ರಚುರಗೊಂಡಿತ್ತು. ಇಂತಹದಕ್ಕೆಲ್ಲಾ ಅವರು ಜಗ್ಗುವವರಲ್ಲ. ಆ ಕಛೇರಿಯ ಕಾರ್ಯವೈಖರಿಯ ಒಂದು ಸಣ್ಣ ಪರಿಚಯ ಇಲ್ಲಿದೆ.
     ಸೇವಾಜ್ಯೇಷ್ಠತೆಯಲ್ಲಿ ನನಗಿಂತ ಕಿರಿಯರಾಗಿದ್ದ ಕೆಲವರು ನನಗಿಂತ ಹೆಚ್ಚು ವೇತನ ಪಡೆಯುತ್ತಿದ್ದ ಬಗ್ಗೆ ಅವರ ಗಮನ ಸೆಳೆದು ಕಳೆದ ೧೬ ವರ್ಷಗಳಿಂದ ಪತ್ರ ವ್ಯವಹಾರಗಳನ್ನು ಮಾಡಿದ್ದು, ಉಚ್ಛ ನ್ಯಾಯಾಲಯ ಮತ್ತು ಕರ್ನಾಟಕ ಅಪೆಲೇಟ್ ಟ್ರಿಬ್ಯೂನಲ್ಲಿನ ಆದೇಶಗಳನ್ನೂ ಹಾಜರು ಪಡಿಸಿದ್ದರೂ ಆ ಕಛೇರಿ ಮರು ಉತ್ತರ ಬರೆಯುವ ಸೌಜನ್ಯ ತೋರಿಸಲಿಲ್ಲ. ಹೀಗಾಗಿ ನಾನು ಮಾಹಿತಿ ಹಕ್ಕು ಕಾಯದೆಯ ಪ್ರಕಾರ ೨೩-೦೫-೨೦೧೦ರಲ್ಲಿ ಅರ್ಜಿ ಸಲ್ಲಿಸಿ "ಶ್ರೀ. . ಮತ್ತು ಶ್ರೀ. .ರವರು ಸೇವಾಜ್ಯೇಷ್ಠತೆಯಲ್ಲಿ ನನಗಿಂತ ಯಾವುದೇ ಹಂತದಲ್ಲಿ ಹಿರಿಯರಾಗಿದ್ದರೇ" ಎಂಬ ಮಾಹಿತಿ ಕೊಡಲು ಕೋರಿದ್ದೆ. ಮಾಹಿತಿ ಹಕ್ಕು ಕಾಯದೆಯ ಪ್ರಕಾರ ಅರ್ಜಿ ಸಲ್ಲಿಸಿದ ೩೦ ದಿನಗಳ ಒಳಗೆ ಪೂರ್ಣ ಮಾಹಿತಿ ಒದಗಿಸಬೇಕು. ಈ ಪ್ರಸಂಗದಲ್ಲಿ ೩೬ ದಿನಗಳ ನಂತರ ಮಾಹಿತಿ ಒದಗಿಸಲು ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಾಗಿದೆಯೆಂದೂ, ಮಾಹಿತಿ ಸ್ವೀಕೃತವಾದ ನಂತರ ಕ್ರಮ ಕೈಗೊಳ್ಳಲಾಗುವುದೆಂದು ಉತ್ತರಿಸಿದ್ದರು. ಈ ಮಾಹಿತಿ ಕೋರಿದ ೨ವರ್ಷ ೪ ತಿಂಗಳುಗಳ ನಂತರದಲ್ಲಿ ದಿನಾಂಕ ೨೧-೦೯-೧೦೧೨ರಲ್ಲಿ ಅವರು ಉತ್ತರಿಸಿದ್ದೇನೆಂದರೆ:
 ". . . ಅರ್ಜಿಗೆ ಸಂಬಂಧಿಸಿದಂತೆ, ಕಡತ ಸಂ. ಆರ್ ಡಿ ೩೭೪ ಎಎಸ್ ಡಿ ೨೦೧೦ರಲ್ಲಿ ವ್ಯವಹರಿಸಿದ್ದು, ಸದರಿ ಕಡತವನ್ನು 'ಡಿ' ವರ್ಗದಲ್ಲಿ ಮುಕ್ತಾಯಗೊಳಿಸಿ ನಾಶಪಡಿಸಲಾಗಿದೆ ಹಾಗೂ ಉಲ್ಲೇಖಿತ ಕೇಂದ್ರ ಸರ್ಕಾರದ ಅಧಿಕೃತ ಜ್ಞಾಪನದಲ್ಲಿ ತಿಳಿಸಿರುವಂತೆ ಅರ್ಜಿದಾರರು ಯಾವುದೇ ಪ್ರಶ್ನೆಗಳನ್ನು ಕೇಳುವಂತಿಲ್ಲ ಮತ್ತು ಸಾರ್ವಜನಿಕ ಮಾಹಿತಿ ಅದಿಕಾರಿಯು ಸದರಿ ಪ್ರಶ್ನೆಗಳಿಗೆ ಉತ್ತರ ಒದಗಿಸುವ ಅವಶ್ಯಕತೆರುವುದಿಲ್ಲ . ."
       ಹಾಗಾದರೆ, ಈ ಕಛೇರಿಯಿಂದ ನಾನು ಬಯಸಿದ್ದ ಮಾಹಿತಿಯನ್ನು ಹೇಗೆ ಪಡೆಯಬೇಕು? ಇಂತಹ ಉತ್ತರ ಕೊಡಲು ಅಲ್ಲಿನ ಶಿಖಾಮಣಿಗಳಿಗೆ ಎರಡೂವರೆ ವರ್ಷಗಳು ಬೇಕಾದವೇ? ಕೆಲಸ ಮಾಡುವುದಕ್ಕಿಂತ, ತಪ್ಪಿಸಿಕೊಳ್ಳುವ ಚಾಣಾಕ್ಷತೆಯನ್ನು ಇಲ್ಲಿ ಅವರು ತೋರ್ಪಡಿಸಿದ್ದರು. 


     ಇದೇ ಇಲಾಖೆಯೇ ಪ್ರಕಟಿಸಿದ ತಹಸೀಲ್ದಾರ್ ಗ್ರೇಡ್ -೧ರ ಸೇವಾಜ್ಯೇಷ್ಠತೆಯಲ್ಲಿ ನನ್ನ ಅರ್ಹತಾ ದಿನಾಂಕವನ್ನು ೧೯-೦೮-೨೦೦೫ ಎಂದು ನಿಗದಿಸಿದ್ದರು. [ವಾಸ್ತವವಾಗಿ ಆ ದಿನಾಂಕ ಇನ್ನೂ ಕೆಲವು ವರ್ಷಗಳ ಹಿಂದೆಯೇ ಆಗಬೇಕಿತ್ತು, ಇರಲಿ.] ಅವರೇ ಪ್ರಕಟ ಪಡಿಸಿದ ದಿನಾಂಕಕ್ಕೆ ಅನುಗುಣವಾಗಿ ನನ್ನ ವೇತನವನ್ನು ಪುನರ್ನಿಗದಿಗೊಳಿಸಲು ಕೋರಿದ್ದು, ಅದು ಇನ್ನೂ ಆಗುವ ಹಂತದಲ್ಲಿಯೇ ಇದೆ. ಮಹಾಲೇಖಾಪಾಲಕರು ಪ್ರಧಾನ ಕಾರ್ಯದರ್ಶಿಗಳಿಗೆ ೨೧-೦೭-೨೦೧೧ರಲ್ಲಿ ಈ ಕುರಿತು ಪತ್ರ ಬರೆದಿದ್ದು, ಆ ಪತ್ರಕ್ಕೆ ಇನ್ನೂ ಉತ್ತರಿಸುವ ಸೌಜನ್ಯ ತೊರಿಸಿದಂತಿಲ್ಲ. "ಮಹಾಲೇಖಾಪಾಲಕರಿಗೆ ಉತ್ತರ ಏಕೆ ಸಲ್ಲಿಸಿಲ್ಲ, ಪ್ರಕರಣ ಇತ್ಯರ್ಥಗೊಳಿಸಲು ಎಷ್ಟು ಸಮಯ ಬೇಕಾಗಬಹುದು" ಎಂಬ ಮಾಹಿತಿ ಕೋರಿ, ಮಾಹಿತಿ ಹಕ್ಕು ಕಾಯದೆ ಪ್ರಕಾರ ೨೩-೦೬-೨೦೧೨ರಲ್ಲಿ ಅರ್ಜಿ ಸಲ್ಲಿಸಿದ್ದೆ. ಆರು ತಿಂಗಳ ನಂತರದಲ್ಲಿ ದಿನಾಂಕ ೧೯-೧೨-೨೦೧೨ರಲ್ಲಿ "ತಮ್ಮ ವೇತನ ಪುನರ್ ನಿಗದಿ ಬಗ್ಗೆ ವ್ಯವಹರಿಸಲಾಗುತ್ತಿದ್ದು, ಶೀಘ್ರದಲ್ಲಿ ಈ ಬಗ್ಗೆ ಮಹಾಲೇಖಾಪಾಲಕರಿಗೆ ಮಾಹಿತಿ ಒದಗಿಸಲಾಗುವುದೆಂದು ತಿಳಿಸಲಾಗಿದೆ" ಎಂಬ ಉತ್ತರ ಬಂತು. ಇದು ಆಗಿ ಮತ್ತೂ ಆರು ತಿಂಗಳುಗಳ ಮೇಲಾಯಿತು. ಇನ್ನೂ ಆ ಕಡತವನ್ನು ಇಟ್ಟುಕೊಂಡವರು ನಿದ್ರಿಸುತ್ತಿದ್ದಾರೆ.


     ಕರ್ನಾಟಕ  ರಾಜ್ಯದ ಮಹಾಲೇಖಾಪಾಲಕರು ಕೇಳಿದ ಮಾಹಿತಿಗೆ ಎರಡು ವರ್ಷಗಳ ನಂತರದಲ್ಲೂ ಉತ್ತರಿಸದಿರುವ ಕಂದಾಯ ಇಲಾಖೆಯ ರಾಜ್ಯದ ಅತ್ಯುನ್ನತ ಕಛೇರಿಯ ಕಾರ್ಯದಕ್ಷತೆಯನ್ನು ಯಾವ ಪದಗಳಿಂದ ಬಣ್ಣಿಸಬಹುದು? "ಆಹಾ, ನಿಮ್ಮಯ ಕೆಲಸದ ಮಹಿಮೆಯು ಬಣ್ಣಿಸಲಸದಳವು" ಎಂದು ಹಾಡುವ ಮನಸ್ಸಾಗಿದೆ!! ಕೇಳುವ ಮನಸ್ಸು ಯಾರಿಗಿದೆಯೋ ಗೊತ್ತಿಲ್ಲ!!

ಸೋಮವಾರ, ಜೂನ್ 24, 2013

ಅರ್ಥವಿಲ್ಲದ ಇಲಾಖಾ ವಿಚಾರಣೆಗಳು - ೩: ಹೀಗೂ ಉಂಟು!

     ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳ ಕುರಿತು ಇನ್ನೂ ಒಂದೆರಡು ಉದಾಹರಣೆಗಳನ್ನು ಇಲ್ಲಿ ಉಲ್ಲೇಖಿಸಿ, ಮುಂದಿನ ಲೇಖನದಲ್ಲಿ ಇಲಾಖಾ ವಿಚಾರಣೆಗಳು ಅರ್ಥಪೂರ್ಣವಾಗಲು ಇರುವ ಅಡೆ ತಡೆಗಳು, ಅವುಗಳನ್ನು ನಿವಾರಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಬರೆಯುವೆ. ಆದರೆ ಜಡ್ಡುಗಟ್ಟಿದ ವ್ಯವಸ್ಥೆಯಲ್ಲಿ ಬದಲಾವಣೆಗಳು ಅಷ್ಟು ಸುಲಭವಲ್ಲವೆಂಬುದು ಅನುಭವವೇದ್ಯ. 
     ಅವನೂ ಒಬ್ಬ ಗ್ರಾಮಲೆಕ್ಕಿಗ, ಹೆಸರು ಫರ್ನಾಂಡಿಸ್ ಎಂದಿಟ್ಟುಕೊಳ್ಳೋಣ. ಇದು ೩೦ ವರ್ಷಗಳ ಹಿಂದಿನ ಘಟನೆ. ಬ್ಯಾಂಕಿನ ನಕಲಿ ಸೀಲು ಮಾಡಿಟ್ಟುಕೊಂಡು ಹಣ ಗುಳುಂ ಮಾಡಿಯೂ ದಕ್ಕಿಸಿಕೊಂಡಿದ್ದ ಒಬ್ಬನ ಕಥೆ ಹಿಂದೆಯೇ ಹೇಳಿರುವೆ. ಇವನು ಅಷ್ಟು ಪ್ರಚಂಡನಲ್ಲವಾದರೂ ಅವನ ತಮ್ಮನೆನ್ನಬಹುದು. ಇವನು ಮಾಡುತ್ತಿದ್ದುದೇನೆಂದರೆ, ವಸೂಲಾದ ಸರ್ಕಾರಿ ಬಾಕಿಗಳನ್ನು ಬೇರೆ ಬೇರೆ ಶೀರ್ಷಿಕೆಗಳಲ್ಲಿ ಬೇರೆ ಬೇರೆ ಚಲನ್ನುಗಳಲ್ಲಿ ಬರೆದು ಬ್ಯಾಂಕಿಗೆ ಜಮ ಮಾಡಬೇಕಿದ್ದು, ಇವನು ವಸೂಲಾದ ನೀರು ತೆರಿಗೆ, ನಿರ್ವಹಣಾಕರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಹಣ ಜಮಾ ಮಾಡುತ್ತಿದ್ದ. ಈ ಬಾಬಿನಲ್ಲಿ ಬರುತ್ತಿದ್ದ ಹಣ ಜಾಸ್ತಿ ಇದ್ದುದರಿಂದ ಹೀಗೆ ಮಾಡುತ್ತಿದ್ದನೇನೋ! ಈ ಕೆಲಸ ಸುಮಾರು ೪ ವರ್ಷಗಳವರೆಗೆ ನಡೆದಿದ್ದರೂ ಯಾರೊಬ್ಬರ ಗಮನಕ್ಕೆ ಬಂದಿರಲಿಲ್ಲವೆಂದರೆ ಆಶ್ಚರ್ಯವೇ ಸರಿ. ನಂತರದಲ್ಲಿ ಗ್ರಹಚಾರವಶಾತ್ ಒಬ್ಬರು ಉಪತಹಸೀಲ್ದಾರರು ಅವನ ದಫ್ತರ್ ತನಿಖೆ ಮಾಡಿದಾಗ ಈ ವಿಷಯ ಹೊರಬಿದ್ದಿತ್ತು. ತಕ್ಷಣದಲ್ಲಿ ಅವರು ಗ್ರಾಮಲೆಕ್ಕಿಗ ಆ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿದ್ದ ದಿನದಿಂದಲೂ ಪರಿಶೀಲಿಸಿದಾಗ ಸುಮಾರು ೬೦ ಸಾವಿರ ರೂ. ದುರುಪಯೋಗವಾಗಿದ್ದು ಗೊತ್ತಾಯಿತು. ೩೦ ವರ್ಷಗಳ ಹಿಂದಿನ ೬೦ ಸಾವಿರವೆಂದರೆ ಈಗಿನ ಬೆಲೆ ಎಷ್ಟು ಎಂಬುದನ್ನು ನಿಮ್ಮ ಊಹೆಗೇ ಬಿಡುವೆ. ವಿಷಯ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಯಿತು. ಗ್ರಾಮಲೆಕ್ಕಿಗನನ್ನು ಅಮಾನತ್ತಿನಲ್ಲಿ ಇರಿಸಿದರು. ಈ ಹಂತದಲ್ಲಿ ಅವನಿಂದ ದುರುಪಯೋಗವಾದ ಹಣವನ್ನು ಕಟ್ಟಿಸಲು ಪ್ರಯತ್ನಿಸಲಾಯಿತು. ಕ್ರಿಮಿನಲ್ ಮೊಕದ್ದಮೆ ಹೂಡುವ ಭಯ ತೋರಿಸಿದ್ದಾಯಿತು. ಆದರೆ, ಕಟ್ಟಲು ಅವನಲ್ಲಿ ಬಿಡಿಗಾಸೂ ಇರಲಿಲ್ಲ. ಸಿಕ್ಕ ಹಣವನ್ನೆಲ್ಲಾ  ಬಾಂಬೆ, ಮದರಾಸುಗಳಿಗೆ ಹೋಗಿ ಹೆಣ್ಣು, ಹೆಂಡಗಳಿಗೆ ಸುರಿದುಬಿಟ್ಟಿದ್ದ ಅವನು ಅಕ್ಷರಶಃ ಪಾಪರ್ ಆಗಿದ್ದ. ಸಂಬಳ ಬಿಟ್ಟರೆ ಬೇರೆ ಗತಿಯಿರಲಿಲ್ಲ. ಉಪತಹಸೀಲ್ದಾರ್, ರೆವಿನ್ಯೂ ಇನ್ಸಪೆಕ್ಟರ್ ಜೊತೆಗೂಡಿ ಬೇರೊಂದು ತಾಲ್ಲೂಕಿನಲ್ಲಿದ್ದ ಫರ್ನಾಂಡಿಸನ ತಂದೆಯನ್ನು ಕಂಡು, ಹಣ ಕಟ್ಟದಿದ್ದರೆ ಮಗ ಜೈಲಿಗೆ ಹೋಗುತ್ತಾನೆಂದು ತಿಳಿಸಿದಾಗ ಮನೆಯ ಮರ್ಯಾದೆಗೆ ಅಂಜಿದ ಆ ಬಡಪಾಯಿ ರೈತ ತನ್ನ ಹೆಸರಿನಲ್ಲಿದ್ದ ಜೀವನಾಧಾರವಾಗಿದ್ದ ಎರಡೂವರೆ ಎಕರೆ ಜಮೀನಿನಲ್ಲಿ ಎರಡು ಎಕರೆ ಜಮೀನು ಮಾರಿ, ಮಗ ನುಂಗಿ ಹಾಕಿದ್ದ ಹಣವನ್ನು ಸರ್ಕಾರಕ್ಕೆ ಕಟ್ಟಿದ. ಎಂತಹ ಅಪ್ಪನಿಗೆ ಎಂತಹ ಮಗ!
     ಜಿಲ್ಲಾಧಿಕಾರಿಯವರಿಂದ ಇಲಾಖಾ ವಿಚಾರಣೆ ಏಕೆ ಮಾಡಬಾರದೆಂದು ಸಂಬಂಧಿಸಿದ ಗ್ರಾಮಲೆಕ್ಕಿಗ, ಅವನ ಲೆಕ್ಕಪತ್ರಗಳನ್ನು ಸರಿಯಾಗಿ ಪರಿಶೀಲಿಸದಿದ್ದ ರೆವಿನ್ಯೂ ಇನ್ಸ್ ಪೆಕ್ಟರುಗಳು, ಗುಮಾಸ್ತರುಗಳು, ಉಪತಹಸೀಲ್ದಾರರುಗಳು ಸೇರಿದಂತೆ ೧೩ ನೌಕರರುಗಳಿಗೆ ನೋಟೀಸುಗಳು ಜಾರಿಯಾದವು. ಒಬ್ಬ ಚಾಣಾಕ್ಷ ಉಪತಹಸೀಲ್ದಾರ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸುವಾಗ ತನ್ನ ಹೆಸರಿನ ಬದಲಿಗೆ ನನ್ನ ಹೆಸರನ್ನು ಸೇರಿಸಿದ್ದರಿಂದ ನನಗೂ ನೋಟೀಸು ಬಂದಿತ್ತು. ವಾಸ್ತವಾಂಶ ತಿಳಿಸಿ ನಾನು ಉತ್ತರಿಸಿದ್ದೆ. ಫರ್ನಾಂಡಿಸ್ ಜಿಲ್ಲಾಧಿಕಾರಿಯವರ ಕಛೇರಿಯ ಹಿರಿಯ ಆಧಿಕಾರಿಗೆ ಐದು ಸಾವಿರ ರೂ. ನೈವೇದ್ಯ ಅರ್ಪಿಸಿ ಕೈಮುಗಿದು ಬಚಾವು ಮಾಡಲು ಕೋರಿಕೊಂಡ. ಆ ಅಧಿಕಾರಿಯ ಸಲಹೆಯಂತೆ ತಹಸೀಲ್ದಾರರು ಸರ್ಕಾರಕ್ಕೆ ಬರಬೇಕಾಗಿದ್ದ ಹಣ ಪೂರ್ಣವಾಗಿ ಬಂದಿರುವುದರಿಂದ ನೌಕರರಿಗೆ ಎಚ್ಚರಿಕೆ ನೀಡಿ ಪ್ರಕರಣ ಮುಗಿಸಬಹುದೆಂದು ಪತ್ರ ಬರೆದರು. ವಿಷಯ ಮುಗಿದೇಹೋಯಿತು. ವಿಚಾರಣೆ ನಡೆಯಲೇ ಇಲ್ಲ. ಒಂದು ವೇಳೆ ವಿಚಾರಣೆ ನಡೆದಿದ್ದರೆ, ತಾತ್ಕಾಲಿಕವಾಗಿಯಾದರೂ ಹಣ ದುರುಪಯೋಗವಾಗಿದ್ದುದು ರುಜುವಾತಾಗಿ ಫರ್ನಾಂಡಿಸ್ ನೌಕರಿ ಕಳೆದುಕೊಳ್ಳುತ್ತಿದ್ದ!
     ಇಲಾಖಾ ವಿಚಾರಣೆ ನಡೆಯದಿರಲು ನಾನೇ ಕಾರಣನಾಗಿದ್ದ ಪ್ರಸಂಗವೊಂದನ್ನು ಇಲ್ಲಿ ಉಲ್ಲೇಖಿಸುವೆ. ಇದೂ ಸಹ ದಶಕಗಳ ಹಿಂದಿನ ಕಥೆ. ನನ್ನ ಕ್ರಮ ಸರಿಯಾಗಿತ್ತೇ ಅಥವಾ ತಪ್ಪೇ ಎಂದು ನೀವೇ ನಿರ್ಧರಿಸಿ. ತಿಮ್ಮೇನಹಳ್ಳಿ ವೃತ್ತದ ಗ್ರಾಮಲೆಕ್ಕಿಗ - ಹೆಸರು ರಾಮೇಗೌಡ ಎಂದಿರಲಿ, ನಿವೃತ್ತಿಗೆ ೩ ವರ್ಷಗಳಿದ್ದವು - ಒಳ್ಳೆಯ ಕೆಲಸಗಾರನೇನೂ ಆಗಿರಲಿಲ್ಲ. ಸರ್ಕಾರಿ ಬಾಕಿ ವಸೂಲಿಯಲ್ಲಿ ಇತರ ಎಲ್ಲಾ ಗ್ರಾಮಲೆಕ್ಕಿಗರುಗಳಿಗಿಂತಲೂ ತೀರಾ ಹಿಂದಿರುತ್ತಿದ್ದ ಈತ ಈ ಕಾರಣಕ್ಕಾಗಿ ಪ್ರತಿ ಸಿಬ್ಬಂದಿ ಸಭೆಯಲ್ಲೂ ನನ್ನಿಂದ ಬೈಸಿಕೊಳ್ಳುತ್ತಿದ್ದ. ಸರ್ಕಾರಿ ಬಾಕಿ ವಸೂಲಿಗೆ ಆದ್ಯತೆ ಕೊಟ್ಟಿದ್ದ ನಾನು ಒಂದು ಅಲಿಖಿತ ನಿಯಮ ಪಾಲಿಸುತ್ತಿದ್ದೆ. ಜನರು ತಮ್ಮ ಕೆಲಸಗಳಿಗೆ ಬಂದ ಸಂದರ್ಭದಲ್ಲಿ ಅವರು ಸರ್ಕಾರಿ ಬಾಕಿ ಪಾವತಿಸಿರುವುದನ್ನು ಖಚಿತಪಡಿಸಿಕೊಂಡು, ಪಾವತಿಸಿರದಿದ್ದಲ್ಲಿ ಪಾವತಿಸಿದ ನಂತರ ಅವರ ಕೆಲಸ ಮಾಡಿಕೊಡುತ್ತಿದ್ದೆ. ಹೀಗಾಗಿ ಜನರಿಗೂ ಅದು ಅಭ್ಯಾಸವಾಗಿ ಕಛೇರಿಗೆ ಬರುವಾಗ ಕಂದಾಯ, ಇತ್ಯಾದಿ ಪಾವತಿಸಿದ ರಸೀದಿಗಳನ್ನು ತೆಗೆದುಕೊಂಡು ಬರುತ್ತಿದ್ದರು. ಒಮ್ಮೆ ತಿಮ್ಮೇನಹಳ್ಳಿಯ ಒಬ್ಬ ರೈತ ಖಾತೆ ಬದಲಾವಣೆಗೆ ಬಂದಿದ್ದವನು ತಾನು ಕಟ್ಟಿದ್ದ ರೂ. ೨೫೦೦ ರೂ. ರಸೀದಿ ನನಗೆ ತೋರಿಸಿದ್ದ. ನನಗೆ ಆಶ್ಚರ್ಯವಾಯಿತು. ಏಕೆಂದರೆ ರಾಮೇಗೌಡ ಹಿಂದಿನ ತಿಂಗಳು ಸರ್ಕಾರಕ್ಕೆ ಕಟ್ಟಿದ್ದ ವಸೂಲು ಮಾಡಿದ ಒಟ್ಟು ಮೊಬಲಗೇ ರೂ. ೯೫೦ ಆಗಿತ್ತು. ಆ ರಸೀದಿಯನ್ನು ಸ್ವೀಕೃತಿ ಪತ್ರ ನೀಡಿ ಆ ರೈತನಿಂದ ಪಡೆದು ಅವನ ಕೆಲಸ ಮಾಡಿಕೊಟ್ಟು, ರಾಮೇಗೌಡನ ಮೂಲ ರಸೀದಿ ತರಿಸಿ ಪರಿಶೀಲಿಸಿದೆ. ಮೂಲ ರಸೀದಿಯಲ್ಲಿ ಆ ರೈತನ ಹೆಸರಿನಲ್ಲಿ ಇದ್ದ ಮೊಬಲಗು ೧೫೦ ಮಾತ್ರ ಆಗಿತ್ತು. ತಕ್ಷಣ ಅವನು ವಸೂಲಿ ಮಾಡಿದ ಇತರ ರೈತರುಗಳ ರಸೀದಿಗಳನ್ನೂ ಪಡೆದು ಪರಿಶೀಲಿಸಿದಾಗ ರೈತರ ಹೆಸರಿನಲ್ಲಿ ಇದ್ದ ಮತ್ತು ಮೂಲ ರಸೀದಿಯಲ್ಲಿ ಇದ್ದ ಮೊಬಲಗುಗಳು ಬೇರೆಯೇ ಆಗಿದ್ದವು. ರಸೀದಿ ಹಾಕುವಾಗ ಡಬಲ್ ಸೈಡ್ ಕಾರ್ಬನ್ ಉಪಯೋಗಿಸಿ ರಸೀದಿ ಬರೆದು ಎರಡನೆಯ ಪ್ರತಿಯನ್ನು ರೈತರಿಗೆ ಕೊಡಬೇಕಿತ್ತು. ಮೂಲ ರಸೀದಿಯ ಹಿಂಭಾಗದಲ್ಲಿ ಸಹ ಕಾರ್ಬನ್ ಅಚ್ಚು ದಾಖಲಾಗಿ ತಿದ್ದುವಿಕೆಗೆ ಅವಕಾಶವಾಗದಿರಲಿ ಎಂಬುದು ಅದರ ಉದ್ದೇಶವಿತ್ತು. ರೈತರಿಗೆ ಎರಡನೆಯ ಪ್ರತಿಯನ್ನು ಮಾತ್ರ ಪ್ರತ್ಯೇಕ ಬರೆದುಕೊಟ್ಟು, ನಂತರ ಡಬಲ್ ಸೈಡ್ ಕಾರ್ಬನ್ ಉಪಯೋಗಿಸಿ ಮೂಲ ರಸೀದಿಯನ್ನು ಕಡಿಮೆ ಮೊಬಲಗಿಗೆ ಪ್ರತ್ಯೇಕವಾಗಿ ಬರೆದು ರಾಮೇಗೌಡ ಚಾಣಾಕ್ಷತನ ತೋರಿದ್ದ. ಇದು ಗೊತ್ತಾಗಿ ಆತನ ಎಲ್ಲಾ ಕಡತಗಳು, ಖಾತೆ, ಖಿರ್ದಿಗಳನ್ನು ವಶಪಡಿಸಿಕೊಂಡೆ. 
     ಅಂದು ರಾತ್ರಿ ಸುಮಾರು ಎಂಟು ಗಂಟೆಯ ಹೊತ್ತಿಗೆ ನನ್ನ ಮನೆಗೆ ಬಂದ ರಾಮೇಗೌಡ ನನ್ನ ಕಾಲು ಹಿಡಿದುಕೊಂಡು ಜೋರಾಗಿ ಅಳತೊಡಗಿದ. ಮನೆಯಲ್ಲಿದ್ದ ನನ್ನ ಪತ್ನಿ ಮತ್ತು ಪುಟ್ಟ ಮಕ್ಕಳು ಗಾಬರಿಯಾಗಿದ್ದರು. ಅವನನ್ನು ಬಲವಂತವಾಗಿ ಕುರ್ಚಿಯಲ್ಲಿ ಕೂರಿಸಿ "ಏನು ಹೇಳಬೇಕೋ ಸರಿಯಾಗಿ ಹೇಳು, ನಾಟಕ ಬೇಡ" ಎಂದು ಗದರಿಸಿದೆ. ಅವನು, "ಸಾರ್, ನನ್ನ ಸರ್ವಿಸಿನಲ್ಲೇ ಇಂಥಾ ಕೆಲಸ ಮಾಡಿರಲಿಲ್ಲ. ವಿಧಿಯಿಲ್ಲದೆ ಈಗ ಹೀಗೆ ಮಾಡಿದೆ. ಎರಡು ತಿಂಗಳಿನಿಂದ ಮಾತ್ರ ಈರೀತಿ ಮಾಡಿದೀನಿ ಸಾರ್. ನನ್ನ ಅಳಿಯ ದೀಪಾವಳಿ ಹಬ್ಬಕ್ಕೆ ಮನೆಗೆ ಬಂದವನು ಉಡುಗೊರೆಯಾಗಿ ಮಾವ ಸ್ಕೂಟರ್ ತೆಗೆಸಿಕೊಡಲಿ ಅಂತ ಮಗಳ ಮೂಲಕ ಬಲವಂತ ಮಾಡಿದ್ದ ಸಾರ್. ನನ್ನ ಹತ್ತಿರ ಹಣ ಇರಲಿಲ್ಲ. ೧೮೦೦೦ ರೂ. ಸಾಲ ಮಾಡಿ ಸ್ಕೂಟರ್ ತೆಗೆದುಕೊಟ್ಟೆ. ಅದಕ್ಕೋಸ್ಕರ ಹೀಗೆ ಮಾಡಿದೆ. ಕ್ರಮೇಣ ಹೊಂದಿಸಿ ಸರಿ ಮಾಡ್ತೀನಿ ಸಾರ್. ನೀವು ಡಿ.ಸಿ.ಗೆ ಬರೆದರೆ ನನ್ನ ನೌಕರಿ ಹೋಗುತ್ತೆ. ನನಗೆ ಇರೋದು ಒಂದೆರಡು ವರ್ಷ ಸರ್ವೀಸು ಅಷ್ಟೆ. ನಾನು ಮುಳುಗಿ ಹೋಗ್ತೀನಿ. ಅದೂ ಅಲ್ಲದೆ ಮರ್ಯಾದೆ ಪ್ರಶ್ನೆ ಸಾರ್. ತಲೆ ಎತ್ತಿ ನಡೆಯೋಕ್ಕೆ ಆಗಲ್ಲ. ನೀವು ಕೈಬಿಟ್ಟರೆ ನಾನು ಖಂಡಿತಾ ನೇಣು ಹಾಕಿಕೊಂಡು ಸಾಯ್ತೀನಿ, ಫಾಲಿಡಾಲ್ ಕುಡೀತೀನಿ. ಇದು ನಿಮ್ಮಾಣೆ ಸತ್ಯ ಸಾರ್" ಅಂದಾಗ ನನಗೆ ಏನು ಹೇಳಬೇಕೋ ತೋಚಲಿಲ್ಲ. "ಆಯ್ತು, ಎರಡು ದಿನ ಯೋಚಿಸಿ ನಿನಗೆ ಹೇಳಿಯೇ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ" ಎಂದು ಭರವಸೆ ಕೊಟ್ಟ ಮೇಲೆಯೇ ಅವನು ಕಣ್ಣು ಒರೆಸಿಕೊಂಡು ಹೋದದ್ದು. ನನ್ನ ಪತ್ನಿ 'ಅವನಿಗೆ ತೊಂದರೆ ಮಾಡಬೇಡಿ' ಅಂದರೆ, ನನ್ನ ಪುಟ್ಟ ಮಕ್ಕಳು ನನ್ನನ್ನು ಕೆಟ್ಟವನೆಂಬಂತೆ ನೋಡಿದ್ದರು. ಅಂದು ರಾತ್ರಿಯೆಲ್ಲಾ ಯೋಚಿಸಿ ಒಂದು ನಿರ್ಧಾರಕ್ಕೆ ಬಂದೆ.
     ಮರುದಿನ ಮಧ್ಯಾಹ್ನ ರಾಮೇಗೌಡನನ್ನೂ ಕರೆದುಕೊಂಡು ಹೋಗಿ ಪ್ರವಾಸಿ ಮಂದಿರದ ಕೊಠಡಿಯಲ್ಲಿ ಕುಳಿತು, ಅವನಿಂದಲೇ ಖಾತೆ, ಖಿರ್ದಿಗಳನ್ನು ಪರಿಶೀಲಿಸಿ ಅವನ ವೃತ್ತದ ಎಲ್ಲಾ ರೈತರುಗಳಿಂದ ವಸೂಲು ಮಾಡಲು ಬಾಕಿಯಿರುವ ಮೊಬಲಗನ್ನು ಲೆಕ್ಕ ಹಾಕಿಸಿದೆ. ಅವುಗಳಲ್ಲಿ ಮೂಲ ರಸೀದಿಯಲ್ಲಿ ಬರೆದ ಮೊಬಲಗುಗಳನ್ನು ಮಾತ್ರ ವಸೂಲಾದಂತೆ ತೋರಿಸಿದ್ದು, ಉಳಿದ ವಸೂಲು ಮಾಡಬೇಕಾದ ಮೊಬಲಗು ರೂ. ೪೨೦೦೦ ಆಗಿತ್ತು. ಪ್ರತಿ ಬಾಕಿ ಮೊಬಲಗಿಗೂ ರಸೀದಿಗಳನ್ನು ಹಾಕಿ, ಪೂರ್ಣ ರೂ. ೪೨೦೦೦ ಮೊಬಲಗನ್ನು ಸರ್ಕಾರಕ್ಕೆ ಜಮಾ ಮಾಡಿದರೆ ಮಾತ್ರ ಬಿಡುವುದಾಗಿ ಅವನಿಗೆ ತಿಳಿಸಿದೆ. "ಸಾರ್, ನಾನು ಉಪಯೋಗಿಸಿಕೊಂಡದ್ದು ರೂ. ೧೫೦೦೦ ಮಾತ್ರ. ನನಗೆ ಬರೆ ಹಾಕಬೇಡಿ ಸಾರ್" ಅಂತ ಗೋಗರೆದ. "ನೋಡು, ನೀನು ಕಳೆದುಕೊಳ್ಳುವುದು ಏನೂ ಇಲ್ಲ. ಈಗಾಗಲೇ ವಸೂಲು ಮಾಡಿರುವವರಿಂದ ನೀನು ವಸೂಲು ಮಾಡುವ ಅಗತ್ಯ ಬರುವುದಿಲ್ಲ. ವಸೂಲು ಮಾಡಿರದಿದ್ದವರಿಂದ ರಸೀದಿ ಕೊಟ್ಟು ಹಣ ಪಡೆದುಕೋ. ಹೇಗೂ ನಿನಗೆ ವಸೂಲು ಮಾಡಲು ಈ ತಿಂಗಳಿನಲ್ಲಿ ಇನ್ನೂ ಹತ್ತು ದಿವಸ ಸಮಯ ಇದೆ. ಅವರಿಂದ ಹಣ ಬರಲಿ, ಬಿಡಲಿ. ಈ ತಿಂಗಳಂತೂ ನೀನು ಪೂರ್ತಾ ಹಣ ಕಟ್ಟಲೇಬೇಕು. ಕೊಡದಿದ್ದವರಿಂದ ನಿಧಾನವಾಗಿಯಾದರೂ ನೀನು ಹಣ ಕಟ್ಟಿರುವುದರಿಂದ ವಸೂಲು ಮಾಡಿಕೊಂಡೇ ಮಾಡಿಕೊಳ್ಳುತ್ತೀಯ. ನಿನಗೆ ನಷ್ಟವೇನೂ ಆಗುವುದಿಲ್ಲ" ಎಂದೆ. ಅವನು ಎರಡು ತಿಂಗಳ ಕಾಲಾವಕಾಶ ಕೇಳಿದರೂ ನಾನು ಒಪ್ಪಲಿಲ್ಲ. ಆ ತಿಂಗಳು ಅವನು ಕಷ್ಟಪಟ್ಟು ರೂ.೨೫೦೦೦ ವಸೂಲು ಮಾಡಿ, ಉಳಿದ ರೂ. ೧೭೦೦೦ ಅನ್ನು ಸಾಲ ಮಾಡಿ ಪೂರ್ಣ ಬಾಕಿ ಮೊಬಲಗನ್ನು ಸರ್ಕಾರಕ್ಕೆ ಕಟ್ಟಿದ. ಆ ತಿಂಗಳ ಸಿಬ್ಬಂದಿ ಸಭೆಯಲ್ಲಿ ಸರ್ಕಾರಿ ಬಾಕಿಯನ್ನು ಪೂರ್ಣವಾಗಿ ವಸೂಲು ಮಾಡಿದ ಅವನನ್ನು ಅಭಿನಂದಿಸಿ ಹೂವಿನಹಾರ ತರಿಸಿ ಅವನ ಕೊರಳಿಗೆ ಹಾಕಿದಾಗ ಅವನು ತೋರಿದ್ದ  -ನಗಲೂ ಆಗದಿದ್ದ, ಅಳಲೂ ಆಗದಿದ್ದ- ವಿಚಿತ್ರ ಮುಖಭಾವ ಇನ್ನೂ ನೆನಪಿಗೆ ಬರುತ್ತಿದೆ. 'ರಾಮೇಗೌಡನಂತಹವರೇ ಪೂರ್ಣ ಸರ್ಕಾರಿ ಬಾಕಿ ವಸೂಲು ಮಾಡಿರುವಾಗ ನಿಮಗೇನಾಗಿದೆ' ಎಂದು ಇತರ ಸಿಬ್ಬಂದಿಗೂ ವಸೂಲಿ ಕಾರ್ಯ ಚುರುಕುಗೊಳಿಸಲು ಹುರಿದುಂಬಿಸಿದ್ದೆ. ರಾಮೇಗೌಡ ಮುಂದೆ ಪೂರ್ಣ ಸೇವೆ ಸಲ್ಲಿಸಿ ನಿವೃತ್ತನೂ ಆದ, ಕೆಲವು ವರ್ಷಗಳ ಹಿಂದೆ ದೈವಾಧೀನನೂ ಆದ. ನನ್ನ ಮತ್ತು ರಾಮೇಗೌಡನ ಮಧ್ಯೆ ಮಾತ್ರ ಇದ್ದ ಸತ್ಯ ಈಗ ಹೊರಗೆಡವಿ ನಿರಾಳನಾಗಿರುವೆ. 
ಹಿಂದಿನ ಲೇಖನಗಳಿಗೆ ಲಿಂಕ್:
1. ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - 1:  http://kavimana.blogspot.in/2013/05/blog-post_21.html
2. ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - 2: http://kavimana.blogspot.in/2013/05/blog-post_28.html

ಮಂಗಳವಾರ, ಜೂನ್ 11, 2013

ಹೀಗೂ ಒಂದು ಪ್ರತಿಭಟನೆ ಮಾಡಿದೆ!


                             

      ಆತ್ಮೀಯರೇ, ನಿವೃತ್ತನಾದರೂ ನನ್ನ ಸರ್ಕಾರೀ ಸೇವಾಪುರಾಣ ಮುಗಿದಿಲ್ಲ. ನಾನು 37 ವರ್ಷಗಳ ಕಾಲ ಸೇವೆ ಸಲ್ಲಿಸಿ ಇನ್ನೂ ಎರಡು ವರ್ಷಗಳ ಸೇವಾವಧಿ ಉಳಿದಿದ್ದಂತೆ ಸ್ವ ಇಚ್ಛಾ ನಿವೃತ್ತಿ ಪಡೆದು ಸುಮಾರು ನಾಲ್ಕು ವರ್ಷಗಳಾಗುತ್ತಾ ಬಂದಿವೆ. ಆದರೂ ಸೇವೆಗೆ ಸಂಬಂಧಿಸಿದಂತೆ ನಮ್ಮ ಕಂದಾಯ ಇಲಾಖಾ ಪ್ರಧಾನ ಕಾರ್ಯದರ್ಶಿಗಳ ಕಛೇರಿಯಲ್ಲಿ ನನ್ನ ಎರಡು ನ್ಯಾಯಯುತ ಕೋರಿಕೆಗಳಿಗೆ ಮುಕ್ತಿ ಸಿಕ್ಕಿಲ್ಲ. 
        ಒಂದು: ನನಗಿಂತ ಸೇವಾಜೇಷ್ಠತೆಯಲ್ಲಿ ಕೆಳಗಿದ್ದ 6 ನೌಕರರಿಗೆ 25-09-1992ರಿಂದ ಜಾರಿಗೆ ಬರುವಂತೆ ತಹಸೀಲ್ದಾರ್ ಹುದ್ದೆಗೆ ಪೂರ್ವಾನ್ವಯವಾಗುವಂತೆ ಬಡ್ತಿ ಸಿಕ್ಕಿ ಬಾಕಿವೇತನವನ್ನೂ ಪಾವತಿಸಿದ್ದರೆ ನನಗೆ 19-08-2002ರಿಂದ ಜಾರಿಗೆ ಬರುವಂತೆ ಬಡ್ತಿ ನೀಡಿದ್ದಾರೆ. ಇದನ್ನು ಸರಿಪಡಿಸಲು ಹಾಗೂ ನನ್ನ ವೇತನವನ್ನು ಅವರ ವೇತನಕ್ಕೆ ಸಮಾಂತರದಲ್ಲಿ ನಿಗದಿಸಲು ಕೋರಿದ ಬೇಡಿಕೆ 15 ವರ್ಷಗಳಿಗೂ ಹೆಚ್ಚು ಕಾಲದಿಂದ ಇತ್ಯರ್ಥ ಪಡಿಸಿಲ್ಲ. ಉಚ್ಛ ನ್ಯಾಯಾಲಯ, ಅಪೆಲೇಟ್ ಟ್ರಿಬ್ಯೂನಲ್ ಗಳಲ್ಲಿ ನನ್ನ ಪರವಾಗಿ ಆದೇಶಗಳಾದರೂ ಗಣನೆಗೆ ತೆಗೆದುಕೊಳ್ಳದೆ ಇರುವುದಕ್ಕೆ ಇರುವ ಕಾರಣ ನನಗಂತೂ ಇಂದಿಗೂ ಗೊತ್ತಾಗಿಲ್ಲ. ಬಹುಷಃ ಲಂಚ ಕೊಡದೆ ಇರುವುದೇ ಇರಬಹುದು. ಮಾಹಿತಿ ಹಕ್ಕು ಕಾಯದೆ ಅನ್ವಯ ಕೇಳಿದ ಮಾಹಿತಿಗಳಿಗೂ ನನಗೆ ಸಿಕ್ಕಿದ್ದು ಅಪೂರ್ಣ ಮತ್ತು ಅಸ್ಪಷ್ಟ ಉತ್ತರ.
    ಎರಡು: ಕಂದಾಯ ಇಲಾಖಾ ಪ್ರಧಾನ ಕಛೇರಿಯಿಂದಲೇ ಪ್ರಕಟವಾದ ತಹಸೀಲ್ದಾರ್-ಗ್ರೇಡ್1ರಲ್ಲಿ ನನಗೆ ನೀಡಿದ ಅರ್ಹತಾ ದಿನಾಂಕಕ್ಕೆಅನುಗುಣವಾಗಿ ನನ್ನ ವೇತನ ನಿಗದಿಸಲು ಕೋರಿದ ಬೇಡಿಕೆ ಮೂರು ವರ್ಷಗಳಿಂದಲೂ ಈಡೇರಿಲ್ಲ. ಮಹಾಲೇಖಾಪಾಲಕರು ಈ ಬಗ್ಗೆ ವಿವರ ಕೇಳಿ ಬರೆದ ಪತ್ರಕ್ಕೆ ಉತ್ತರಿಸಲು ಎರಡು ವರ್ಷಗಳಾದರೂ ಅವರಿಗೆ ಪುರುಸೊತ್ತು ಸಿಕ್ಕಿಲ್ಲ.
     ಸ್ವತಃ ಹಲವಾರು ಸಲ ಹೋಗಿ ವಿಚಾರಿಸಿಯಾಯಿತು. ಲೋಕಾಯುಕ್ತರಿಗೆ, ಮುಖ್ಯ ಕಾರ್ಯದರ್ಶಿಯವರಿಗೆ ದೂರುಗಳನ್ನು ಸಲ್ಲಿಸಿದ್ದಾಯಿತು. ಉಪವಾಸ ಸತ್ಯಾಗ್ರಹ ಮಾಡುತ್ತೇನೆಂದು ತಿಳಿಸಿದ್ದಾಯಿತು. ಮಾಧ್ಯಮಗಳ ಗಮನಕ್ಕೆ ತರುವೆನೆಂದು ಹೇಳಿದ್ದಾಯಿತು. ಯಾವುದಕ್ಕೂ ಕುಗ್ಗದೆ, ಜಗ್ಗದೆ ಬಂಡೆಯಂತೆ ಬಕಧ್ಯಾನ ಮಾಡುತ್ತಾ ಕುಳಿತ ಅಲ್ಲಿನ ಸಿಬ್ಬಂದಿಯ ಗಟ್ಟಿತನಕ್ಕೆ ತಲೆದೂಗಲೇಬೇಕಾಯಿತು. ಬಾಹ್ಯ ಪ್ರಭಾವ ಬೀರದೆ ಸಹಜವಾಗಿ ಕೆಲಸ ಮಾಡಿಸಲು ನಡೆಸಿದ ನನ್ನ ಪ್ರಯತ್ನ ಫಲ ಕೊಡಲಿಲ್ಲ. 
     ಹೊಸ ರೀತಿಯಲ್ಲಿ ಪ್ರತಿಭಟಿಸಬೇಕೆಂಬ ನನ್ನ ಇಚ್ಛೆಗೆ ಹರಿಹರಪುರ ಶ್ರೀಧರ ಸ್ಪಂದಿಸಿದರು. ಇಬ್ಬರೂ ಕೂಡಿ "ಕಂದಾಯ ಇಲಾಖಾ ಪ್ರಧಾನ ಕಾರ್ಯದರ್ಶಿಗಳ ಕಛೇರಿಯ ಕಾರ್ಯದಕ್ಷತಾ ಸುಧಾರಣಾ ಯಜ್ಞ"ದ ರೂಪು ರೇಷೆ ಸಿದ್ದಪಡಿಸಿದೆವು. ಅಗ್ನಿಗೆ ಸಮಿತ್ತುಗಳನ್ನು ಅರ್ಪಿಸುವಾಗ 'ಇದಂ ನ ಮಮ' (ಇದು ನನಗಾಗಿ ಅಲ್ಲ) ಎಂದು ಉಚ್ಛರಿಸುತ್ತೇವೆ. ಆದ್ದರಿಂದ.  ಪ್ರಾರಂಭಕ್ಕೆ ಮುನ್ನ ಪ್ರಾಸ್ತಾವಿಕವಾಗಿ ಉದಾಹರಣೆಯಾಗಿ ನನ್ನ ಮೇಲಿನ ಅನುಭವಗಳನ್ನು ಉಲ್ಲೇಖಿಸಿದರೂ, ಈ ಯಜ್ಞದ ಸಂಕಲ್ಪದಲ್ಲಿ ನನ್ನ ವೈಯಕ್ತಿಕ ಬೇಡಿಕೆಗಳನ್ನು ಸೇರಿಸದೆ, "ಕಛೇರಿಯ ಕಾರ್ಯದಕ್ಷತೆ ಹೆಚ್ಚಲಿ, ಸೇವಾಕಾಯದೆ, ಕಾನೂನುಗಳನ್ನು ಗೌರವಿಸಲಿ, ಮಾಹಿತಿ ಹಕ್ಕು ಕಾಯದೆಯ ನೈಜ ಅನುಷ್ಠಾನ ಮಾಡುವಂತಾಗಲಿ, ವಿಳಂಬರಹಿತ, ಜನಪರ, ನಿಷ್ಪಕ್ಷಪಾತ ಕೆಲಸಗಳಾಗಲಿ" ಎಂಬ ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾದ ಸಂಕಲ್ಪಗಳನ್ನು ಮಾತ್ರ ಮಾಡಿ ಒಂದು ಯಜ್ಞವನ್ನು ಸುಮಾರು 50 ಹಿತೈಷಿಗಳ ಸಮ್ಮುಖದಲ್ಲಿ ಮಾಡಿಯೇಬಿಟ್ಟೆವು. ಯಜ್ಞಕ್ಕೆ ಸುತ್ತಲಿನ ಪರಿಸರ ಶುದ್ಧತೆಗೆ ಸಹಕಾರಿಯಾಗುವ ತಾನಾಗಿ ಒಣಗಿ ಬಿದ್ದ ಔಷಧಿಯುಕ್ತ ಸಮಿತ್ತುಗಳು ಮತ್ತು ಶುದ್ಧ ತುಪ್ಪವನ್ನು ಮಾತ್ರ ಬಳಸಿದ್ದು ಇದಕ್ಕಾಗಿ ತಗುಲಿದ ವೆಚ್ಚ 50 ರೂ.ಗಳಿಗೂ ಹೆಚ್ಚಲ್ಲ. ಯಜ್ಞದ ಫಲವೋ ಎಂಬಂತೆ ದೃಷ್ಟ ಹಾಗೂ ಪತ್ರಿಕಾ ಮಾಧ್ಯಮದವರಿಗೆ ವಿಷಯ ತಿಳಿದು ಅವರುಗಳು ನಮ್ಮ ಸಂದರ್ಶನವನ್ನೂ ಮಾಡಿದರು. ನಿನ್ನೆ ಮತ್ತು ಇಂದು ದೂರದರ್ಶನದ ಹಲವಾರು ಚಾನೆಲ್ಲುಗಳಲ್ಲಿ ಯಜ್ಞದ ದೃಷ್ಯಗಳು,  ಸುದ್ದಿಗಳು ಬಿತ್ತರಗೊಂಡವು. ಟಿವಿ 9ರಲ್ಲಿ ನನ್ನ ವಿಸ್ತೃತ ಸಂದರ್ಶನವನ್ನೂ ಮಾಡಿ ಸುದ್ದಿ ಪ್ರಚುರಪಡಿಸಿದರು. ಪತ್ರಿಕೆಗಳಲ್ಳೂ ವಿಷಯ ಜಾಹೀರಾಯಿತು. ಸರ್ಕಾರಕ್ಕೂ ಈ ಯಜ್ಞದ ವಿಡಿಯೋ ಕಳುಹಿಸಿರುವೆ. ಇನ್ನಾದರೂ ಸಂಬಂಧಿಸಿದವರು ಎಚ್ಚರಗೊಳ್ಳುವರೋ, ಇಲ್ಲವೋ ಎಂಬುದನ್ನು ನೋಡಬೇಕು.


ಅವಧೂತ ಮುಕುಂದೂರು ಸ್ವಾಮಿಗಳು ಹೇಳಿದ 'ರಾಮಣ್ಯ'

     ಅವಧೂತ ಮುಕುಂದೂರು ಸ್ವಾಮಿಗಳು ಹಳ್ಳಿಯ ಜನರಿಗೆ ಅವರು ಆಡುವ ಭಾಷೆಯಲ್ಲಿಯೇ ಜೀವನಾದರ್ಶದ ವಿಚಾರಗಳನ್ನು ಅವರಿಗೆ ಅರ್ಥವಾಗುವಂತೆ ಹೇಳುತ್ತಿದ್ದರು. ದಿ.ಬೆಳಗೆರೆ ಕೃಷ್ಣಶಾಸ್ತ್ರಿಗಳು ಅವರ ಕುರಿತು ಬರೆದ ವೈಚಾರಿಕ ಕೃತಿ 'ಯೇಗ್ದಾಗೆಲ್ಲಾ ಐತೆ'ಯಲ್ಲಿ ಅವಧೂತರು ರಾಮಾಯಣದ ಕುರಿತು ವ್ಯಾಖ್ಯಾನಿಸಿದ ಕುರಿತು ತಿಳಿಸಿರುವುದು ಮನೋಜ್ಞವಾಗಿದೆ. ರಾಮಾಯಣ ಕುರಿತು ಒಬ್ಬರು, "ಅದರಲ್ಲೇನು ವಿಶೇಷ? ರಾವಣಾಸುರ ಸೀತೇನ ಕದ್ದ, ಕಪಿಸೈನ್ಯ ಕಟ್ಕೊಂಡು ಲಂಕಾ ಪಟ್ಣಕ್ಕೆ ಹೋಗಿ ಅವನನ್ನು ಕೊಂದು ರಾಮ ಸೀತಮ್ಮನ್ನ ತಂದ ಅಷ್ಟೇ ತಾನೆ?" ಎಂದಾಗ ಅವಧೂತರು, "ಅದು ಮ್ಯಾಗಳ ಕಥೆ ನೀನೇಳೋದು. ಆದರೆ ಒಳಗೈತಪ್ಪಾ ಅದರ ಸಕೀಲು. ಆ ಸಕೀಲು ಇಡಕಂಡ್ರೆ ನೋಡಪ್ಪ ಆ ಕತೇನೇ ಬೇರೆ." 
     "ಆ ಸಕೀಲನ್ನು ನಮಗೂ ತಿಳಿಯುವಂತೆ ಹೇಳಿ ಸ್ವಾಮಿ ನೋಡೋಣ" ಎಂದಾಗ ಅವರು, "ಅದು ಸಕೀಲು ಅಂದ್ರೆ ನೋಡೋದಲ್ಲ ಮಗ. ಅದನ್ನು ಇಡೀಬೇಕು. ಇಡಿದು ನಡೀಬೇಕು. ನಡೆದು ಪಡೀಬೇಕು. ಆಗ ಅದರ ಸವಿ, ಸೊಗಸು, ಸುಖ. ಅದಕ್ಕೇನಪ್ಪಾ ರಾಮಣ್ಯ ಅಂದ್ರೆ ಸಾಮನ್ಯ ಅಲ್ಲ. ಅದೊಂದು ಇನ್ನೊಂದು ಮಾತೈತೆ. ಅದೇನು ಮಹಾ ಬ್ರಹ್ಮವಿದ್ಯೆನೇನೋ ಅಂತಾರೆ. ಬ್ರಹ್ಮವಿದ್ಯೆ ಅಂದ್ರೆ ಸಾಮಾನ್ಯ ಅಲ್ಲ. ಅದು ಎಲ್ರಿಗೂ ಎಂಗಂದ್ರಂಗೆ ಸಿಗೋದಲ್ಲ. ಸಾಧಿಸಿ ತಿಳಿದವರಿಗೆ ಸಿಗತೈತೆ ಅದರ ರಾಸ್ಯ."
     "ನೋಡಪ್ಪಾ ದಸರತ ಅಂತ ಒಬ್ಬ. ಅಂಗಂದ್ರೇನು? ಕರ್ಮೇಂದ್ರಿಯಗಳು ಐದು. ಜ್ಞಾನೇಂದ್ರಿಯಗಳು ಐದು. ಇವು ಅತ್ತು ಸೇರಿಸಿ ರಥ ಮಾಡಿಕೊಂಡು ಹತ್ತಿ ಸವಾರಿ ಮಾಡಿದ ಅವನು, ಅಂದ್ರೆ ಇಂದ್ರಿಯಗಳನ್ನು ಸ್ವಾಧೀನ ಮಾಡಿಕೊಂಡವನು ಯಾರೇ ಆಗಿರಲಿ ಅವನು ದಸರತ. ಅಂತವನು ಯಾವಾಗಲೂ ಸಂತೋಸಾನೇ ಪಡೀತಾನೆ. ಆ ಸಂತೋಸಾನೇ ರಾಮ. ಅವನೇ ಆನಂದ, ರಾಮ ಅಂದ್ರೆ ಆನಂದ. ಅವನ ತಮ್ಮಗಳು ಲಕ್ಷ್ಮಣ, ಭರತ, ಸತೃಗ್ನ, ಆನಂದದ ಬೆಳಕು ಮನಾನಂದ, ಆತ್ಮಾನಂದ, ಬ್ರಹ್ಮಾನಂದ."
     "ಸೀತಮ್ಮನಿಗೆ ತಂದೆ ತಾಯಿ ಇಲ್ಲ. ಅಂಗೇ ತಾನಾಗೇ ಬಂದವಳು ಸೀತೆ. ಜ್ಞಾನಾಂಬಿಕೆ. ಜನಕ ರಾಜ ಯಗ್ನ ಮಾಡಿದ. ಸಾಧನೆ ಮಾಡಿದ. ಜ್ಞಾನಾಂಬಿಕೆ ಸಿಕ್ಕಿದಳು. ಜನಕರಾಜನು ರುಸೀನೂ ಆಗಿದ್ದ. ರಾಮ ಧನಸ್ಸು ಮುರಿದ. ಧನಸ್ಸು ಅಂದ್ರೆ ಶರೀರ. ಇದನ್ನು ಮುರಿದ್ರು, ಅಂದ್ರೆ ಸ್ಥೂಲ ಶರೀರ ದಾಟಿ ವೋಗಿ ಸೀತೆಯನ್ನು ಪಡೆದ. ಅಲ್ಲಿಗೆ ರಾಮ ಅಂದ್ರೆ ಆನಂದ, ಸೀತೆ ಅಂದ್ರೆ ಜ್ಞಾನ. ಎರಡೂ ಬಂದದ್ದು ಅಂದ್ರೆ ಜ್ಞಾನಾನಂದ ಅಂಬೋದು ಮೂಡಿಬಂತು."
     "ಇನ್ನು ಮಾಯಾಮೃಗ. ಅದು ಜಿಂಕೆ. ಬಂಗಾರದ ಜಿಂಕೆ. ಅಂದಮೇಲೆ ಇದ್ದ ಕಡೆ ಇರೋದಲ್ಲ. ಅದನ್ನ ಇಡ್ಕೊಂಡು ಬಾ ಅಂದ್ಲು ಸೀತಮ್ಮ. ರಾಮ ಕೊಂದೇಬಿಟ್ಟ. ಅಂದ್ರೆ ಈ ಜಗತ್ತಿನ ಐಶ್ವರ್ಯದ ಆಸೆ ಮಾಯೆ. ಅದನ್ನು ಕೊಂದೇಬಿಟ್ಟ. ಅಂದ್ರೆ ಜ್ಞಾನಾನಂದ ಇದ್ದಲ್ಲಿ ಮಾಯೆ ಸತ್ತುಹೋಗುತ್ತೆ ಅಂಬೋ ಮಾತು ಅದು."
     "ರಾವಣ ಅತ್ತು ತಲೆ. ಅದೇ ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳು. ದಸರತ ಅವನ್ನೇ ರತ ಊಡಿಕೊಂಡು ಸವಾರಿ ಮಾಡ್ದ. ಅಂದ್ರೆ ಅವನ್ನ ತಾನೇಳ್ದಂಗೆ ಕೇಳಾಂಗೆ ಸ್ವಾಧೀನ ಮಾಡಿಕೊಂಡಿದ್ದ. ಅದೇ ರಾವಣಾಸುರ ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳನ್ನು ತಲೆ ತುಂಬ ತುಂಬಿಕೊಂಡು ಅವನ್ನೇ ಒತ್ಕೊಂಡು ಓಡಾಡ್ತಿದ್ದ. ಅವು ಅವನ್ತಲೆ ಮೇಲೆ ಕುಂತು ಅವನ್ನ ಆಟ ಆಡಿಸ್ತಿದ್ವು. ಅಂದ್ರೆ ಇಂದ್ರಿಯಗಳಿಗೆ ದಾಸನಾಗಿದ್ದ. ಇವನಿಗೆ ಇಪ್ಪತ್ತು ಕೈಗಳು. ನಿಜ-ನಿಜ ಇಪ್ಪತ್ತು ಕೈಗಳು, ಸಪ್ತಧಾತುಗಳು, ಸಪ್ತ ವ್ಯಸನಗಳು, ಅರಿಷಡ್ವರ್ಗಗಳು. ಅಲ್ಲಿಗೆ ಇಪ್ಪತ್ತು ಕೈಗಳು ಆದವಲ್ಲಾ, ಅವುಗಳದೇ ಕಾರುಬಾರು. (ನಗುತ್ತಾ) ಎಂಗೈತೆ ನೋಡು."
     "ಅವನು ಸೀತಮ್ಮನನ್ನು ಬಯಸಿದ. ಅಂದರೆ ಜ್ಞಾನಾಂಬಿಕೆಯನ್ನು ಅಲ್ಲ. ಸಪ್ತ ಧಾತುಗಳು, ಸಪ್ತ ವ್ಯಸನಗಳು, ಅರಿಷಡ್ವರ್ಗಗಳನ್ನು ಒತ್ಕೊಂಡು ಮೆರೆಯೋರಿಗೆ ಜ್ಞಾನಾಂಬಿಕೆ ವಶವಾದಾಳೆ? ಅವಳು ಅಶೋಕವನದಾಗಿದ್ಲು. ಅವಳಿಗೆ ಶೋಕ ಎಲ್ಲೀದು?" ನಕ್ಕರು.
     "ನೋಡು ಸುಗ್ರೀವ ಅಂದ್ರೆ ಒಳ್ಳೆ ತಲೆ, ಅಂದ್ರೆ ಒಳ್ಳೆ ಯೋಚನೆಗಳು. ಜಾಂಬುವಂತ, ಅವನು ಬ್ರಮ್ಮನ ಮಗ, ಅಂದ್ರೆ ಬ್ರಮ್ಮಾನಂದ. ಇನ್ನು ಆಂಜನೇಯ ಒಳ್ಳೇ ದೃಷ್ಟಿ ಇರೋ ಇವರೆಲ್ಲಾ ಆನಂದ ಅಂಬೋ ರಾಮರ ಗುಂಪು. ರಾವಣ ಅಂಬೋ ಅಹಂಕಾರ, ಮಮಕಾರಗಳನ್ನು ಕತ್ತರಿಸಿ ಆಕಿಬಿಟ್ರೆ ಆಗ ಒಳ್ಳೆ ಮನಸ್ಸು, ಒಳ್ಳೇ ದೃಷ್ಟಿ ಬ್ರಮ್ಮಗ್ನಾನ, ಎಲ್ಲಾ ಒಂದಾದವು. ಅಂದ್ರೆ ಗ್ನಾನಾನಂದ ಸಿಕ್ಕಿತು."
     "ನೋಡಪ್ಪ ಸಾಧಿಸಿದರೆ (ತಮ್ಮ ಶರೀರವನ್ನು ತೋರಿಸಿ) ಎಲ್ಲಾ ಇದ್ರಾಗೆ ಐತೆ ರಾಮಾಯಣ. ಇದೇ ಅದರ ಸಕೀಲು."
     "ಅವನ್ನೋಡು, ವಾಲ್ಮೀಕಿ ರುಸಿ, ಅವನೇ ಅಂತೆ ಈ ಸಕೀಲೆಲ್ಲಾ ಇಂಗಡಿಸಿ ಕತೆ ಮಾಡಿ ಬರೆದೋನು. ಅವನಿನ್ಯಾರು? ವಾಲ್ಮೀಕಿ ಅಂದ್ರೆ ವುತ್ತ ಅಂತಾರೆ. ಈ ಶರೀರವೇ ವುತ್ತ. ಇದ್ರಾಗೆ ತಯಾರಾದ ಗ್ನಾನಾನಂದ ಪಡೆದೋನೆ ರುಸಿ. ಅವನೇ ವಾಲ್ಮೀಕಿ ರುಸಿ. ಅವನಿಗಲ್ದೆ ಇನ್ಯಾರಿಗೆ ಸಾಧ್ಯ ಆದಾತು ಈ ಒಳಗಿನ ಸಕೀಲೆಲ್ಲಾ ಸೇರಿಸಿ ಅನುಭವ ತಕ್ಕಂಡು ಅವನ್ನೇ ಇಂಗೆ ಕತೆ ಕಟ್ಟಿ ಏಳಾಕೆ? ಆನ ಪುರಾಣ ಓದಿ ವರಗೇ ತಿಳ್ಕಂಡು ವರಗೇ ಅದಕ್ಕೆ ತಕ್ಕಂತ ವರಗಿನ ಆಟ ಆಡ್ತಾರೆ."
*************** 

ಶುಕ್ರವಾರ, ಜೂನ್ 7, 2013

ಕರುಣಿಸು ತಾಯೆ

     ಪೌರಾಣಿಕ ಕಥೆಯಂತೆ ದಕ್ಷಯಜ್ಞದಲ್ಲಿ ತನ್ನನ್ನೇ ದಹಿಸಿಕೊಂಡು ಶಿವಕಲೆಯನ್ನು ಸೇರಿದ್ದ ದಾಕ್ಷಾಯಿಣಿ ಮುಂದೆ ಪರ್ವತರಾಜನ ಪುತ್ರಿ ಪಾರ್ವತಿಯಾಗಿ ಜನಿಸಿ ಶಿವನನ್ನು ವರಿಸುತ್ತಾಳೆ. ಪರ್ವತರಾಜನ ಪತ್ನಿ ಮೇನಾದೇವಿಗೆ ಮೈನಾಕ, ವೃಷಭ, ಕ್ರೌಚರೆಂಬ ಪುತ್ರರಿದ್ದರು. ಆದರೆ ಸುಂದರ ಸದ್ಗುಣಯುತ ಮಗಳಿಲ್ಲದ ಕೊರತೆ ಅವಳನ್ನು ಕಾಡಿತ್ತು. ಪತಿಯ ಅನುಮತಿ ಪಡೆದು ಪರಶಿವೆಯನ್ನು ಕುರಿತು ತಪಸ್ಸು ಮಾಡಿದಾಗ ಒಲಿದ ಶಿವೆ ಮೇನಾದೇವಿಯ ಕೋರಿಕೆಯಂತೆ ಅವಳ ಮಗಳಾಗಿ ಜನಿಸಿಬರುವ ಆಶ್ವಾಸನೆ ಕೊಡುತ್ತಾಳೆ. ಶಿವೆ ಪ್ರತ್ಯಕ್ಷಳಾಗಿ ಮೇನಾದೇವಿಯ ಅಪೇಕ್ಷೆಯ ಕುರಿತು ಕೇಳಿದಾಗ ಆಕೆ ಸಲ್ಲಿಸಿದ ಕೋರಿಕೆ ಹೇಗಿತ್ತು ಎಂಬುದನ್ನು ೧೮ನೆಯ ಶತಮಾನದ ಲಿಂಗಣ್ಣಕವಿ ತನ್ನ 'ದಕ್ಷಾಧ್ವರ ವಿಜಯ' ಕೃತಿಯಲ್ಲಿ ವರ್ಣಿಸಿರುವುದು ಹೀಗೆ:

ರಾಗ || ತುಜಾವಂತಿ ||            ತಾಳ ||

ತಾಯೆ ಯೆನ್ನನು ಕರುಣದಿಂದ ಕಲ್ಯಾಣಿ
ತಾಯೆ ನೀನೆ ತನುಜೆಯಪ್ಪಂತು ವರವಿತ್ತು || ಪ ||

ಶರದಿಂದು ನಿಭವದನೆ | ಸರಸ ಸದ್ಗುಣಸದನೆ |
ಪರಶಿವೆ ಸುಕುಂದ ಕೋರಕ ಚಾರುರದನೆ |
ತರಣಿಶತಕೋಟಿ ಸಂಕಾಶೆ | ಸರ್ವಾವಾಸೆ |
ದುರಿತಾರ್ತಿ ದೂರೆ ಸಮ್ಮೋಹನಾಕಾರೆ || ೧ ||

ಭುವನ ಪಟ್ಟದ ರಾಣಿ | ಭುಜಗ ಸನ್ನಿಭ ವೇಣಿ |
ಭುವನೈಕ ವಿಖ್ಯಾತೆ | ಮೂಲೋಕ ಮಾತೆ |
ಅವಿರಳಾನಂತ ಶುಭಲೀಲೆ | ಗಾನ ವಿಲೋಲೆ |
ಸುವಿಮಲ ಚರಿತ್ರೆ | ಸರಸಿರುಹ ದಳ ನೇತ್ರೆ || ೨ || 

ಕರುಣವಾರಿಧಿ ನೀನು ಕಡು ದೈನ್ಯಯುತಳಾನು |
ನೆರೆ ಬೇಡಿಕೊಂಬೆನನುಮಾನವಿನ್ನೇನು |   
ಮರೆಯ ಮಾತೇಕೆ ಶಂಕರಿ ಮುನ್ನ ನೀನೆನ್ನ
ಪೊರೆವುದುದ್ಧರಿಸಿ | ಬಿನ್ನಪವನವಧರಿಸಿ || ೩ ||   
***********
ಚಿತ್ರ ಕೃಪೆ:  www.tattoopins.com (ರಾಯಲ್ಟಿ ಮುಕ್ತ ಚಿತ್ರ)  

ಬುಧವಾರ, ಜೂನ್ 5, 2013

ಪರಮೇಶಿ


    ಮಗ ದೂಕಿದ ರಭಸಕ್ಕೆ ಬೋರಣ್ಣ ಮುಖ ಅಡಿಯಾಗಿ ಬಿದ್ದ. ಮೂಗು ಒಡೆದು ರಕ್ತ ಚಿಮ್ಮಿತ್ತು. ಹೆಗಲಲ್ಲಿದ್ದ ಟವೆಲಿನಿಂದ ರಕ್ತ ಸುರಿಯದಂತೆ ಒತ್ತಿ ಹಿಡಿದುಕೊಂಡ ಬೋರಣ್ಣನನ್ನು ದುರುಗುಟ್ಟಿಕೊಂಡು ನೋಡಿದ ಪರಮೇಶಿ ಅಪ್ಪನ ಮುರುಕುಲು ಟ್ರಂಕು ಕೊಡವಿ ಅದರಲ್ಲಿದ್ದ ೨೦೦ ರೂಪಾಯಿ ಎತ್ತಿಕೊಂಡು ಹೊರಟ. ಪರಮೇಶಿಯ ಹೆಂಡತಿ ನಾಗಿಗೆ ಇದೆಲ್ಲಾ ಮಾಮೂಲು. ಅವಳು ಗೊಣಗಾಡಿಕೊಂಡು ಕಸ ಗುಡಿಸುವುದನ್ನು ಮುಂದುವರೆಸಿದಳು. ಮನೆಯ ಕಟ್ಟೆಯ ಮೇಲೆ ತಲೆಯ ಮೇಲೆ ಕೈ ಹೊತ್ತು ಕುಳಿತ ಬೋರಣ್ಣ, 'ಎಂಥಾ ಮಗ ಹಿಂಗಾಗ್ಬುಟ್ನಲ್ಲಾ' ಅಂತ ಕೊರಗುತ್ತಿದ್ದ. ಪರಮೇಶಿ ಮೊದಲು ಹೀಗಿರಲಿಲ್ಲ. ಅಪ್ಪನ ಜೊತೆ ಜೊತೆಗೆ ಇದ್ದ ಒಂದೂವರೆ ಎಕರೆ ಹೊಲದಲ್ಲಿ ಕಷ್ಟಪಟ್ಟು ಗೇಮೆ ಮಾಡುತ್ತಿದ್ದ. ಬರುವ ಆದಾಯ ಹೊಟ್ಟೆ ಬಟ್ಟೆಗೆ ಸಾಕಾಗುತ್ತಿತ್ತು. ಗೆಳೆಯರ ಸಾವಾಸದಿಂದ ಕುಡಿಯುವ ಚಟಕ್ಕೆ ಬಿದ್ದ ಮೇಲೆ ಪರಮೇಶಿಗೆ ಹಣ ಸಾಲದಾಗುತ್ತಿತ್ತು. ಅಪ್ಪನಿಗೆ ಬರುತ್ತಿದ್ದ ಸಂಧ್ಯಾ ಸುರಕ್ಷದ ಪಿಂಚಣಿ ಹಣದ ಮೇಲೂ ಅವನ ಕಣ್ಣು ಬೀಳುತ್ತಿತ್ತು. ಈಗ ಆಗಿದ್ದೂ ಅದೇ. 
     ಪರಮೇಶಿಯ ಇಸ್ಪೀಟು ಗೆಳೆಯರು ಕೊಟ್ಟಿದ್ದ ಸಲಹೆ ಅವನಿಗೆ ಚೆನ್ನಾಗಿ ಕಂಡಿತ್ತು. ಅಪ್ಪನಿಗೆ ೬೦ ವರ್ಷ ಆಗಿರದಿದ್ದರೂ ಸರ್ಕಾರೀ ಡಾಕ್ಟರರಿಗೆ ಲಂಚ ಕೊಟ್ಟು ೬೫ ವರ್ಷ ಅಂತ ಸರ್ಟಿಫಿಕೇಟು ಮಾಡಿಸಿದ. ಜಮೀನು ಇದ್ದರೆ ಪಿಂಚಣಿ ಬರಲ್ಲ ಅಂತ ವಿಲೇಜ್ ಅಕೌಂಟೆಂಟ್ ಹೇಳುತ್ತಿದ್ದುದನ್ನು ಕೇಳಿದ್ದ ಅವನು ಅಪ್ಪನನ್ನು ಪುಸಲಾಯಿಸಿ, ಅವನಿಗೆ ಇಷ್ಟವಿಲ್ಲದಿದ್ದರೂ ಪಿಂಚಣಿ ಆಸೆ ತೋರಿಸಿ ಜಮೀನನ್ನು ತನ್ನ ಹೆಸರಿಗೆ ಬರೆಸಿಕೊಂಡ. ಮಕ್ಕಳು ತನ್ನನ್ನು ನೋಡಿಕೊಳ್ಳುತ್ತಿಲ್ಲವೆಂದು ಅಪ್ಪನಿಂದ ಅಫಿಡವಿಟ್ಟು ಮಾಡಿಸಿದ. ಅಪ್ಪನ ಕೈಯಲ್ಲಿದ್ದ ಉಂಗುರ ಮತ್ತು ಕೊರಳಲ್ಲಿದ್ದ ಒಂದೆಳೆ ಬಂಗಾರದ ಸರ ಲಂಚಕ್ಕಾಗಿ ಖರ್ಚಾದರೂ ಪಿಂಚಣಿ ಆದೇಶ ಬಂದಾಗ ಬೋರಣ್ಣ ಖುಷಿ ಪಟ್ಟಿದ್ದ. ಹೇಗೋ ಜೀವನಕ್ಕೆ ಹಗುರವಾಯ್ತು ಅಂದುಕೊಂಡಿದ್ದ. ಆ ಹಣವನ್ನೂ ಪರಮೇಶಿ ಈರೀತಿ ಕಿತ್ತುಕೊಂಡು ಹೋಗತೊಡಗಿದಾಗ ಅವನಿಗೆ ಕೊರಗುವುದೊಂದೇ ಉಳಿದಿದ್ದ ದಾರಿಯಾಗಿತ್ತು.
     ಹಲವು ದಿನಗಳ ನಂತರ ಪರಮೇಶಿಗೆ ಇನ್ನೊಂದು ಐಡಿಯಾ ಹೊಳೆಯಿತು. ಹೆಂಡತಿಯ ಊರು ದುಮ್ಮೇನಹಳ್ಳಿಯ ವಿಳಾಸದಲ್ಲಿ ಅಪ್ಪನಿಗೆ 'ರುದ್ದಾಪಿ' (ವೃದ್ಧಾಪ್ಯ ವೇತನ) ಮಾಡಿಸಲು ಆರು ತಿಂಗಳು ಅಲೆದಾಡಿದ. ಅಂತೂ ಅದೂ ಸಿಕ್ಕಿತು. ಆ ಹಳ್ಳಿಯ ಹತ್ತಿರದ ಬ್ಯಾಂಕಿನಲ್ಲಿ ಅಕೌಂಟು ತೆಗೆದು ಹಣ ಅಲ್ಲೇ ಜಮಾ ಆಗುವಂತೆ ಆಯಿತು. ಅಪ್ಪನೊಡನೆ ಆದ ಒಪ್ಪಂದದಂತೆ ಆ ಹಣ ಪರಮೇಶಿಯ ಪಾಲಾಗುತ್ತಿತ್ತು. ಕುಡಿತ, ಇಸ್ಪೀಟಿನ ಚಟಕ್ಕೆ ಬಿದ್ದ ಅವನು ಮಾಡಿದ ಸಾಲಕ್ಕೆ ಪಿತ್ರಾರ್ಜಿತವಾಗಿದ್ದ ಜಮೀನು ಸಾಲಗಾರರ ಸ್ವತ್ತಾಗಲು ತಡವಾಗಲಿಲ್ಲ. ನಾಗಿ ಕೂಲಿ ಕೆಲಸ ಮಾಡಿಕೊಂಡು ಬರುತ್ತಿದ್ದರಿಂದ ಮನೆಯ ಕಡೆ ಯೋಚನೆ ಮಾಡುವುದನ್ನೇ ಪರಮೇಶಿ ಬಿಟ್ಟಿದ್ದ. ಹಗಲಿನಲ್ಲಿ ಗೆಳೆಯರೊಡನೆ ಪಾಳು ಮನೆಯ ಜಗಲಿಯಲ್ಲಿ ಇಸ್ಪೀಟಾಟ, ಸಂಜೆ ಹೊತ್ತು ಕುಡಿಯುವುದಕ್ಕೆ ಅಂದಿನ ಖರ್ಚು ಹೇಗಾದರೂ ನಿಭಾಯಿಸಿದರೆ ಅವನಿಗೆ ತೃಪ್ತಿಯಾಗುತ್ತಿತ್ತು. ಎಡವಟ್ಟಾದಾಗ ನಾಗಿಯ ಹತ್ತಿರಾನೋ, ಅಪ್ಪನ ಹತ್ತಿರಾನೋ ಕುಡಿಯುವುದಕ್ಕೆ ಹಣ ಕಿತ್ತುಕೊಳ್ಳುತ್ತಿದ್ದ. ಕೊಡದಿದ್ದರೆ ನಾಲ್ಕು ಬಾರಿಸುತ್ತಲೂ ಇದ್ದ. ಇನ್ನು ಮುಂದೆ ಅಗ್ಗದ ದರದಲ್ಲಿ ಹೆಂಡ ಕೊಡ್ತಾರಂತೆ, ರೂಪಾಯಿಗೆ ಒಂದು ಕೆಜಿ ಅಕ್ಕಿಯಂತೆ, ೩೦ ಕೆಜಿ ಕೊಡ್ತಾರಂತೆ ಅಂತ ಸುದ್ದಿ ಕೇಳಿದ ದಿನ ಪರಮೇಶಿ ಗೆಳೆಯರೊಡನೆ ಖುಷಿಗೆ ಹೆಚ್ಚಾಗೇ ಕುಡಿದು ಸಂಭ್ರಮ ಪಟ್ಟಿದ್ದ. ಹೇಗೂ ಅಪ್ಪನ ಹೆಸರಿನಲ್ಲಿ ಒಂದು ಕಾರ್ಡು ಮತ್ತು ತನ್ನ ಹೆಸರಿನಲ್ಲಿ ಒಂದು ಕಾರ್ಡು ಇರುವುದರಿಂದ ೬೦ ಕೆಜಿ ಅಕ್ಕಿ ಸಿಗುತ್ತೆ. ೧೫ ಕೆಜಿ ಮನೆಗೆ ಸಾಕಾಗುತ್ತೆ, ಉಳಿದ ೪೫ ಕೆಜಿ ಅಕ್ಕಿಯನ್ನು ಮಾರಿದರೆ ಎಷ್ಟು ಸಿಗಬಹುದು ಎಂದು ಅವನ ಮನಸ್ಸು ಲೆಕ್ಕ ಹಾಕುತ್ತಿತ್ತು.
     ಕೆಲಸ ಮಾಡಲು ಒಗ್ಗದ ಸೋಂಬೇರಿ ಪರಮೇಶಿ ಗೆಳೆಯರ ಬಳಗ ಸಾಯಂಕಾಲದ ಖರ್ಚಿಗೆ ಹೇಗಾದರೂ ದುಡ್ಡು ಹೊಂದಿಸೋಕೆ ಮನೆಹಾಳು ಐಡಿಯಾಗಳನ್ನೇ ಮಾಡುತ್ತಿತ್ತು. ಅದರಿಂದ ಹಾಗೂ ಹೀಗೂ ಕಾಸು ಹೊಂದಾಣಿಕೆಯಾಗುತ್ತಿತ್ತು. ಊರಿನಲ್ಲಿ ಸಣ್ಣ ಪುಟ್ಟ ಕಳ್ಳತನ ಆದರೂ ಜನ ಇವರನ್ನೇ ಅನುಮಾನಿಸುತ್ತಿದ್ದರು. ದಪ್ಪ ಚರ್ಮದ ಇವರಿಗೆ ಅದರಿಂದ ಏನೂ ಅನ್ನಿಸುತ್ತಿರಲಿಲ್ಲ. ದಿನಗಳು ಹೀಗೇ ಸಾಗುತ್ತಿದ್ದವು. ಒಮ್ಮೆ ಇವರು ಮಾಮೂಲು ಕಟ್ಟೆ ಮೇಲೆ ಬೀಡಿ ಸೇದುತ್ತಾ ಕುಳಿತಿದ್ದಾಗ ತಿಮ್ಮೇಗೌಡ ತನ್ನ ಹೆಂಡತಿಯೊಂದಿಗೆ ಬ್ಯಾಗು ಹಿಡಿದು ಪೇಟೆ ಬಸ್ಸು ಹತ್ತಿದ್ದನ್ನು ಕಂಡರು. ಇವರುಗಳು ಕಣ್ಣಿನಲ್ಲೇ ಮಾತನಾಡಿಕೊಂಡರು. ಸದ್ದಿಲ್ಲದೆ ತಿಮ್ಮೇಗೌಡನ ಮನೆಯ ಕಡೆಗೆ ಹೊರಟರು. ಹಳ್ಳಿಯ ಹೆಚ್ಚಿನವರು ಜಮೀನು, ಕೂಲಿ ಕೆಲಸಗಳಿಗೆ ಹೋಗಿ ಮುದುಕರು, ಮೋಟರು ಮಾತ್ರ ಕೆಮ್ಮುತ್ತಾ, ನರಳುತ್ತಾ ಮನೆಗಳಲ್ಲಿ ಉಳಿದಿದ್ದ ಹೊತ್ತು ಅದು. ಹೊಂಚು ಹಾಕಿ ತಿಮ್ಮೇಗೌಡನ ಮನೆಗೆ ಹೋದ ಅವರು ತಿಮ್ಮೇಗೌಡನ ಮಗಳು ಇವರು ಯಾಕೆ ಬಂದರು ಎಂದು ಅಂದುಕೊಳ್ಳುವ ಹೊತ್ತಿಗೆ ಇವರ ಹಿಡಿತಕ್ಕೆ ಸಿಕ್ಕಿಬಿದ್ದಿದ್ದಳು. ಬಾಯಿ ಮುಚ್ಚಿದ್ದರಿಂದ ಕೊಸರಾಡಲು ಮಾತ್ರ ಅವಳಿಗೆ ಸಾಧ್ಯವಾಗಿದ್ದುದು. ಕೆಲವೇ ನಿಮಿಷಗಳಲ್ಲಿ ಎಲ್ಲಾ ಮುಗಿಯಿತು. ಬಾಯಿಯೊಡನೆ ಮೂಗೂ ಮುಚ್ಚಿದ್ದರಿಂದ ಅವಳ ಆಯಸ್ಸೂ ಮುಗಿದಿತ್ತು. ಅವಳು ಸತ್ತಿದ್ದನ್ನು ಕಂಡು ಗಾಬರಿಯಾದ ಗೆಳೆಯರು ಸ್ವಲ್ಪ ಹೊತ್ತಿನಲ್ಲೇ ಸಾವರಿಸಿಕೊಂಡು ಅವಳನ್ನು ಅಡಿಗೆ ಕೋಣೆಗೆ ಎಳೆದುಹಾಕಿ, ಮೈಮೇಲೆ ಸೀಮೆ ಎಣ್ಣೆ ಸುರಿದು, ಗ್ಯಾಸ್ ಸ್ಟೌವಿನ ಗ್ಯಾಸ್ ಹೊರಬಿಟ್ಟು ಅಡಿಗೆಮನೆಯ ಬಾಗಿಲು, ಕಿಟಕಿಗಳನ್ನು ಹಾಕಿ ಯಾರಿಗೂ ಕಾಣದಂತೆ ಒಬ್ಬೊಬ್ಬರಾಗಿ ಹೊರಬಂದರು. ಬಂದವರೇ ಅರ್ಧ ಘಂಟೆಯ ನಂತರದಲ್ಲಿ ಮನೆಯ ಹಿಂಭಾಗದಿಂದ ಬೆಂಕಿ ಕಡ್ಡಿ ಗೀರಿ ಅಡಿಗೆ ಮನೆಯ ಕಿಟಕಿಯ ಒಳಗೆ ಹಾಕಲು ಪರಮೇಶಿಯನ್ನು ಪುಸಲಾಯಿಸಿದರು. ಪರಮೇಶಿ ಅಡಿಗೆ ಮನೆ ಕಿಟಕಿ ತೆರೆದು ಕಡ್ಡಿ ಗೀರುತ್ತಿದ್ದಂತೆಯೇ ಭುಗಿಲೆದ್ದ ಜ್ವಾಲೆ ಅವನ ಮುಖದ ಮೇಲೇ ಅಪ್ಪಳಿಸಿತ್ತು. ಗ್ಯಾಸ್ ಸಿಲಿಂಡರ್ ಸಿಡಿದು ೧೭ ವರ್ಷದ ರುಕ್ಮಿಣಿ ಮತ್ತು ಮನೆಯ ಹಿಂಭಾಗದಲ್ಲಿ ಹೋಗುತ್ತಿದ್ದ ಪರಮೇಶ ಎಂಬ ವ್ಯಕ್ತಿಯ ದುರ್ಮರಣ ಎಂದು ಮರುದಿನ ಪತ್ರಿಕೆಗಳಲ್ಲಿ ಸುದ್ದಿ ಬಂದಿತ್ತು. 

-ಕ.ವೆಂ.ನಾಗರಾಜ್.

ಸೋಮವಾರ, ಜೂನ್ 3, 2013

ಬೆಳಕಿಗೆ ಬಂದ ಕವಿ ವೆಂಕಣ್ಣನ ಕೀರ್ತನೆಗಳು

     ೧೮ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಕೆಳದಿ ಕವಿ ವೆಂಕಣ್ಣ, ಐತಿಹಾಸಿಕ ಕಾವ್ಯ 'ಕೆಳದಿ ನೃಪ ವಿಜಯ'ದ ಕರ್ತೃ ಕವಿಲಿಂಗಣ್ಣನ ಮಗ. ವೆಂಕಣ್ಣನ ಹೆಸರು ಇನ್ನೂ ಉಳಿದಿರುವುದು ಆತ ರಚಿಸಿದ ಕೃತಿಗಳಿಂದ ಎಂಬುದು ಗಮನಾರ್ಹ. ಈತ ರಚಿಸಿದ ೧೦೨೪ ನಾಮಾವಳಿಗಳಿರುವ 'ಗಣ ಸಹಸ್ರನಾಮ', ನೀತಿ ಬೋಧಕ 'ಪಾರ್ವತಿ ವಲ್ಲಭ ಶತಕ', ನೃಸಿಂಹಾವತಾರದ ವೈಭವ ತೋರುವ 'ನರಹರಿ ವಿಜಯ' ಮತ್ತು ಕೆಳದಿ ರಾಮೇಶ್ವರನ ಕುರಿತು ರಚಿಸಿದ ಭಕ್ತಿ ಗೀತೆಗಳು, ಮುಂತಾದ ಕೃತಿಗಳು ಅವುಗಳಲ್ಲಿ ಅಡಗಿರುವ ಭಾವ, ಭಕ್ತಿ, ಕಾವ್ಯಾತ್ಮಕ ಮೌಲ್ಯಗಳಿಂದಾಗಿ ಉಳಿದಿವೆ. ಗಣ ಸಹಸ್ರನಾಮದಲ್ಲಿ ವೆಂಕಣ್ಣ ತನ್ನ ಪರಿಚಯವನ್ನು 'ಧರಣಿದೇವ ಲಲಾಮನೆನಿಸಿದ ವರ ಕೆಳದಿ ಲಿಂಗಾರ್ಯ ತನುಭವ ಗರುವ ವೆಂಕಪ'ನೆಂದು ಮಾಡಿಕೊಂಡಿದ್ದಾನೆ.
     ಕೆಳದಿ ರಾಮೇಶ್ವರ ಮತ್ತು ಕೊಲ್ಲೂರು ಮೂಕಾಂಬಿಕೆಯನ್ನು ಪ್ರಮುಖವಾಗಿ ಭಕ್ತಿಭಾವದಿಂದ ಸ್ತುತಿಸುವ ಕೀರ್ತನೆಗಳು ಲಭ್ಯವಿದೆ. ತಾಳೆಗರಿಗಳಲ್ಲಿ ರಚಿಸಿರುವ ಈ ರಚನೆಗಳನ್ನು ಸಂಪಾದಿಸಿ ಡಾ. ಕೆಳದಿ ಗುಂಡಾಜೋಯಿಸರು 'ಕೆಳದಿ ವೆಂಕಣ್ಣ ಕವಿಯ ಕೀರ್ತನೆಗಳು' ಎಂಬ ಹೆಸರಿನಲ್ಲಿ ವೆಂಕಣ್ಣನ ೫೦ ಕೀರ್ತನೆಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದು, ಬೆಂಗಳೂರು ವಿಶ್ವವಿದ್ಯಾಲಯದಿಂದ ೧೯೭೭ರಲ್ಲಿ ಪ್ರಕಟಣೆಯಾಗಿದೆ. ವೆಂಕಣ್ಣನ ರಚನೆಗಳನ್ನು ಸಂಗೀತಗಾರರು ಬಳಸಿ ಹಾಡಲು ತಕ್ಕವಾಗಿವೆ. 
     ಇತ್ತೀಚೆಗೆ ವೆಂಕಣ್ಣನ ಕೀರ್ತನೆಗಳನ್ನು ಪ್ರಸಿದ್ಧ ಗಾಯಕರಾದ ಶ್ರೀ ಗರ್ತಿಕೆರೆ ರಾಘಣ್ಣ, ಶ್ರೀಮತಿ ವಸುಧಾಶರ್ಮ, ಶ್ರೀ ರಾಘವೇಂದ್ರ ಬಿಜಾಡಿ, ಕು. ಪಲ್ಲವಿಕೃಷ್ಣ ಮತ್ತು ಶ್ರೀ ರಾಜೇಂದ್ರ ಬಾಳೆಹಳ್ಳಿ ಇವರುಗಳಿಂದ ಹಾಡಿಸಿ ಧ್ವನಿ ದಾಖಲಿಸಿ 'ಶಿವ ಮಂತ್ರವ ಜಪಿಸೋ' ಎಂಬ ಹೆಸರಿನಲ್ಲಿ ಸಿ.ಡಿ. ರೂಪದಲ್ಲಿ ಹೊರತರಲಾಯಿತು. ಶ್ರೀ ಶ್ರೀಕಾಂತ ಕಾಳಮಂಜಿಯವರು ಸಂಗೀತ ನಿರ್ದೇಶನ ಮಾಡಿದ್ದು, ಶ್ರೀ ಪ್ರಕಾಶ ಹೆಗಡೆ (ಕೊಳಲು), ಭಾರ್ಗವ ಹೆಗಡೆ ಸೀಗೆಹಳ್ಳಿ (ಸಿತಾರ), ಕವಿ ಬಿ.ಎಸ್.ಆರ್. ದೀಪಕ್ (ವಯಲಿನ್) ವಾದ್ಯ ಸಹಕಾರ ನೀಡಿದ್ದಾರೆ. ಎರಡು ಶತಮಾನಗಳ ನಂತರದಲ್ಲಿ ಕೆಳದಿ ಕವಿ ವೆಂಕಣ್ಣನ ರಚನೆಗಳು ಪ್ರಚಾರಕ್ಕೆ ಬರುತ್ತಿರುವುದು ಸಂತಸದ ಸಂಗತಿಯಾಗಿದೆ. ಸಿ.ಡಿ. ಬಿಡುಗಡೆಗೆ ಶ್ರಮಿಸಿದ ಡಾ. ಕೆಳದಿ ಗುಂಡಾಜೋಯಿಸ್ ಮತ್ತು ಡಾ. ವೆಂಕಟೇಶ ಜೋಯಿಸ್ ಅಭಿನಂದನಾರ್ಹರು. ಕೆಳದಿಯ ಶ್ರೀ ಸರಸ್ವತಿ ಸೇವಾ ಸಮಿತಿ ಆಶ್ರಯದಲ್ಲಿ ಶ್ರೀ ಚಿಪ್ಪಳ್ಳಿ ಗೋಪಾಲ ಕೃಷ್ಣರ ಅಧ್ಯಕ್ಷತೆಯಲ್ಲಿ ಕೆಳದಿಯಲ್ಲಿ ನಡೆದ ಸಮಾರಂಭದಲ್ಲಿ ಸಾಗರದ ಮಾಜಿ ಶಾಸಕ  ಶ್ರೀ ಎಲ್.ಟಿ. ತಿಮ್ಮಪ್ಪ ಹೆಗಡೆಯವರು ಸಿ.ಡಿ. ಬಿಡುಗಡೆ ಮಾಡಿದರು. ಸಮಾರಂಭದ ಕೆಲವು ದೃಷ್ಯಗಳಿವು.




-ಕ.ವೆಂ.ನಾಗರಾಜ್.
*************
      ಕೆಳದಿ ವೆಂಕಣ್ಣ ಕವಿಯ ಒಂದು ಭಕ್ತಿ ಸ್ತುತಿ:
ರಾಗ|| ಮಧ್ಯಮಾವತಿ      ತಾಳ || ಆದಿ ||
ಶಿವಮಂತ್ರವ ಜಪಿಸೋ | ಮೂಢ |
ಶಿವಮಂತ್ರವ ಜಪಿಸೋ
ಶಿವನೇ ನೀನಾಗುವೆಯೆಂದು ನಂಬುತ || ಪಲ್ಲವಿ ||

ಸ್ನಾನ ಬೇಡ ಸಂಧ್ಯಾಕರ್ಮವು ಬೇಡ
ಧ್ಯಾನ ಬೇಡ ಧಾರಣೆ ಬೇಡ
ಮೌನ ಬೇಡ ಮಣಿಮಾಲಿಕೆ ಬೇಡ
ಧ್ಯಾನ ಬೇಡ ಪಶುವಧೆಗಳು ಬೇಡ || ೧ ||

ದೇಶಕಾಲ ಪಾತ್ರವ ನೋಡಬೇಡ
ಕಾಷಾಯಾಂಬರ ಧಾರಣೆ ಬೇಡ
ಭಾಸುರ ಜಡೆಯನು ಬೆಳೆಸಲು ಬೇಡ
ಈ ಶರೀರವನೆ ದಂಡಿಸಬೇಡ || ೨ ||

ಕಾಲನ ದೂತರು ಎಳೆಯುವ ಮುನ್ನ
ನಾಲಿಗೆ ತನ್ನಾಧೀನವಾಗಿರುವಾಗ
ಏಳುಕೋಟಿ ಮಂತ್ರಕೆ ಮಣಿಯಾದ ವಿ
ಶಾಲ ಕೆಳದಿ ರಾಮೇಶ್ವರನೆ ಗತಿಯೆಂದು|| ೩ ||
*******