ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಜೂನ್ 29, 2014

ಸಹಸ್ರಮಾನದ ವ್ಯಕ್ತಿ - ಪಾಲಮ್ ಕಲ್ಯಾಣಸುಂದರಮ್

     ಅವರೊಬ್ಬರು ಗ್ರಂಥಪಾಲಕರಾಗಿದ್ದರು. ಸಾಕಷ್ಟು ಸಂಬಳವೂ ಬರುತ್ತಿತ್ತು. ಆದರೆ ಅವರು ತಮ್ಮ ವೈಯಕ್ತಿಕ ಖರ್ಚು-ವೆಚ್ಚಗಳಿಗಾಗಿ ಸಣ್ಣ-ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಒಮ್ಮೊಮ್ಮೆ ಹೋಟೆಲ್ಲಿನಲ್ಲಿ ಮಾಣಿಯಾಗಿಯೂ ಕೆಲಸ ಮಾಡಿ ಸಿಗುವ ಸ್ವಲ್ಪ ಹಣದಿಂದ ತೃಪ್ತರಾಗುತ್ತಿದ್ದರು. ಇದನ್ನು ನಂಬಲು ಕಷ್ಟವೆನಿಸಿದರೂ ನಂಬಲೇಬೇಕಾದ ಸತ್ಯವಾಗಿದೆ. ಕೈತುಂಬ ಸಂಬಳ ಬರುವ ಕೆಲಸವಿದ್ದರೂ ಅವರು ಏಕೆ ಈ ಸಣ್ಣ-ಪುಟ್ಟ ಕೆಲಸ ಮಾಡುತ್ತಿದ್ದರು? ಏಕೆಂದರೆ ಅವರು ತಮಗೆ ಬರುತ್ತಿದ್ದ ಪೂರ್ಣ ಸಂಬಳವನ್ನು ದೀನ ದಲಿತರ ಸೇವೆಯ ಸಲುವಾಗಿ ಖರ್ಚು ಮಾಡುತ್ತಿದ್ದರು, ಬಿಡಿಗಾಸನ್ನೂ ತಮಗಾಗಿ ಉಳಿಸಿಕೊಳ್ಳುತ್ತಿರಲಿಲ್ಲ. ಬ್ರಹ್ಮಚಾರಿಯಾಗಿದ್ದ ಇವರು ತಮ್ಮ ಒಬ್ಬರ ಖರ್ಚು ವೆಚ್ಚಕ್ಕೆ ಅಗತ್ಯವಾದಷ್ಟು ಹಣಕ್ಕಾಗಿ ಮಾತ್ರ ಇಂತಹ ಸಣ್ಣ ಕೆಲಸಗಳನ್ನು ಆಶ್ರಯಿಸುತ್ತಿದ್ದರು. ವಿಶ್ವಸಂಸ್ಥೆ ಈ ವ್ಯಕ್ತಿಯನ್ನು '೨೦ನೆಯ ಶತಮಾನದ ಪ್ರಮುಖ ವ್ಯಕ್ತಿಗಳಲ್ಲೊಬ್ಬರು' ಎಂದು ಪರಿಗಣಿಸಿದೆ. ಅಮೆರಿಕಾ ಇವರನ್ನು 'ಸಹಸ್ರಮಾನದ ಪುರುಷ'ನೆಂದು ಗೌರವಿಸಿದೆ. ಭಾರತ ಸರ್ಕಾರ ಇವರನ್ನು ೧೯೯೦ರಲ್ಲಿ 'ಭಾರತದ ಅತ್ಯುತ್ತಮ ಗ್ರಂಥಪಾಲಕ'ರೆಂದು ಸನ್ಮಾನಿಸಿದೆ. ಇವರನ್ನು 'ಪ್ರಪಂಚದ ಅತ್ಯುಚ್ಛ ಹತ್ತು ಗ್ರಂಥಪಾಲಕರುಗಳಲ್ಲೊಬ್ಬರು' ಎಂದು ಗುರುತಿಸಲಾಗಿದೆ. ಕೇಂಬ್ರಿಡ್ಜಿನ ಇಂಟರ್ ನ್ಯಾಶನಲ್ ಬಯೋಗ್ರಾಫಿಕಲ್ ಸೆಂಟರ್ ಇವರನ್ನು 'ಪ್ರಪಂಚದ ಅತ್ಯುನ್ನತ (noblest) ಉದಾತ್ತರಲ್ಲೊಬ್ಬರು' ಎಂದು ಅಭಿದಾನವಿತ್ತು ಗೌರವಿಸಿದೆ. ರೋಟರಿ ಇಂಟರ್‌ನ್ಯಾಷನಲ್ ೨೦೧೧ರಲ್ಲಿ ಅವರನ್ನು ಜೀವಮಾನದ ಸಾಧನೆಗಾಗಿ ಸನ್ಮಾನಿಸಿದೆ. ಅವರೇ ಪಾಲಮ್ ಕಲ್ಯಾಣ ಸುಂದರಮ್. 
     ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಶೀವೈಕುಂಠಮ್‌ನಲ್ಲಿನ ಕಲಾಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಮಾಡುತ್ತಿದ್ದ ಕೆಲಸದಿಂದ ಬರುತ್ತಿದ್ದ ಸಂಬಳದ ಹಣವನ್ನು ಪೂರ್ಣವಾಗಿ ದೀನದಲಿತರ ಸೇವೆಗಾಗಿ ಖರ್ಚು ಮಾಡಿದ ವ್ಯಕ್ತಿ ಬಹುಷಃ ಇವರೊಬ್ಬರೇ ಇರಬೇಕು. ಪ್ರಶಸ್ತಿ, ಬಹುಮಾನ, ಗೌರವಗಳಿಗಾಗಿ ಹಂಬಲಿಸುವ, ಲಾಬಿ ನಡೆಸುವ ಗಣ್ಯರೆನಿಸಿಕೊಂಡ ಹಲವರನ್ನು ಕಾಣುತ್ತಿರುತ್ತೇವೆ. ಅಪಮಾರ್ಗದಿಂದ ಪಡೆದ ಮತ್ತು ಕೊಟ್ಟ ಪ್ರಶಸ್ತಿಗಳು ವಿವಾದದ ಬಿರುಗಾಳಿಯೆಬ್ಬಿಸುತ್ತದೆ. ಪ್ರಶಸ್ತಿಯ ಮೌಲ್ಯವೇ ಕುಸಿಯುತ್ತದೆ. ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದು ಕೋಟಿಗಟ್ಟಲೆ ಸರ್ಕಾರಿ ಹಣವನ್ನು ಲೂಟಿ ಹೊಡೆಯುವುದನ್ನೇ ಕಾಯಕವಾಗಿಸಿಕೊಂಡಿದ್ದ 'ಜನಸೇವೆ' ಮಾಡುವ ಖದೀಮರನ್ನೂ ಕಂಡಿದ್ದೇವೆ. ಆದರೆ, ಈ ವಿಚಿತ್ರ ವ್ಯಕ್ತಿಯನ್ನು ನೋಡಿ. ಇವರು ತಮಗೆ 'ಸಹಸ್ರಮಾನದ ಪುರುಷ'ರೆಂಬ ಗೌರವದ ಜೊತೆಗೆ ಬಂದ ೩೦ ಕೋಟಿ ರೂ. ಹಣವನ್ನೂ ಸಹ ಬಿಡುಗಾಸೂ ಉಳಿಸಿಕೊಳ್ಳದೆ ಎಂದಿನಂತೆ ಸಮಾಜಕ್ಕೇ ಧಾರೆಯೆರೆದುಬಿಟ್ಟ ಈ ಪುಣ್ಯಾತ್ಮ. ಇಂತಹವರಿಂದ ಪ್ರಶಸ್ತಿಗಳಿಗೂ ಗೌರವ ಬರುತ್ತದೆ. ಇವರಿಗೆ ಇವರೇ ಸಾಟಿ, ಅನ್ಯರಿಲ್ಲ. ಸೂಪರ್ ಸ್ಟಾರ್ ರಜನಿಕಾಂತ್ ಇವರನ್ನು ತಮ್ಮ ದತ್ತು ತಂದೆಯನ್ನಾಗಿಸಿಕೊಂಡಿದ್ದಾರೆ.
     ಕಲ್ಯಾಣ ಸುಂದರಮ್ ಅವರು ಸಮಾಜಸೇವೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡುದಕ್ಕೆ ಕಾರಣವಾದ ಘಟನೆ ಸ್ವಾರಸ್ಯಕರವಾಗಿದೆ. ಅದು ಭಾರತ-ಚೀನಾ ಯುದ್ಧ ನಡೆಯುತ್ತಿದ್ದ ಸಂದರ್ಭ. ಇಡೀ ದೇಶವೇ ಒಂದಾಗಿ ಎದ್ದು ನಿಂತಿದ್ದ ಸಮಯ. ಜನರು ನಾಮುಂದು-ತಾಮುಂದು ಎಂಬಂತೆ ತಮ್ಮ ತನು-ಮನ-ಧನಗಳನ್ನು ಅರ್ಪಿಸುತ್ತಿದ್ದ ಸಮಯ. ಆಗ ರಾಜಕಾರಣಿಗಳ ನೈತಿಕತೆ ಇಷ್ಟೊಂದು ಪಾತಾಳ ಕಂಡಿರಲಿಲ್ಲ. ರಾಜಕಾರಣಿಗಳನ್ನು ಜನರು ನಂಬುತ್ತಿದ್ದ ಕಾಲ. ಅವರುಗಳಲ್ಲೂ ನಂಬಿಕೆ ಉಳಿಸಿಕೊಂಡಿದ್ದವರಿದ್ದರು. ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಕಾಮರಾಜರು ಜನರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾಗ ಕಲ್ಯಾಣಸುಂದರಮ್ ಆಗಿನ್ನೂ ಕಾಲೇಜು ವಿದ್ಯಾರ್ಥಿಯಾಗಿದ್ದರು. ದೇಶಭಕ್ತಿ ಪ್ರೇರಿತ ಹುಡುಗ ತನ್ನ ಕೊರಳಲ್ಲಿದ್ದ ಚಿನ್ನದ ಸರವನ್ನೇ ತೆಗೆದು ಕಾಮರಾಜರಿಗೆ ಯುದ್ಧ ಸಂತ್ರಸ್ತರ ನಿಧಿಗೆ ಅರ್ಪಿಸಿದ. ನಂತರದಲ್ಲಿ ಆನಂದವಿಕಟನ್ ಪತ್ರಿಕೆ ಸಂಪಾದಕರಾಗಿದ್ದ ಬಾಲಸುಬ್ರಹ್ಮಣ್ಯಮ್‌ರವರನ್ನು ಕಂಡು ತಾನು ಕೊರಳಲ್ಲಿದ್ದ ಚಿನ್ನದ ಸರವನ್ನು ಸಂತ್ರಸ್ತರ ನಿಧಿಗೆ ಕೊಟ್ಟುದನ್ನು ಪತ್ರಿಕೆಯಲ್ಲಿ ಪ್ರಕಟಿಸಲು ಕೋರಿದ. ಆಗ ಬಾಲಸುಬ್ರಹ್ಮಣ್ಯಮ್ ಅವರು, "ನೀನು ಸ್ವತಃ ದುಡಿದು ದಾನ ಮಾಡಿದಾಗ ಹೇಳು, ಪ್ರಕಟಿಸುವೆ" ಎಂದು ನಿಷ್ಠುರವಾಗಿ ಹೇಳಿ ಆ ಹುಡುಗನನ್ನು ವಾಪಸ್ ಕಳಿಸಿದರು. ಇದು ಪವಾಡವನ್ನೇ ಮಾಡಿತು. ಅವನ ಬಾಳಿನ ದಿಕ್ಕನ್ನೇ ಬದಲಿಸಿತು. ಆ ಹುಡುಗ ಅದನ್ನು ಸವಾಲಾಗಿ ಸ್ವೀಕರಿಸಿದ, ದಿಟ್ಟ ನಿರ್ಧಾರ ಮಾಡಿದ. ಅದೇ ಮುಂದೆ ಅವನನ್ನು ಗ್ರಂಥಪಾಲಕನಾಗಿ ಕೆಲಸಕ್ಕೆ ಸೇರಿದ ನಂತರ ಬಂದ ಪ್ರತಿ ತಿಂಗಳ ಪೂರ್ಣ ಹಣವನ್ನು ಸಮಾಜೋಪಯೋಗಿ ಕಾರ್ಯಕ್ಕೆ ವಿನಿಯೋಗಿಸುವಂತೆ ಮಾಡಿದ್ದು. ಸುಮಾರು ೩೦ ವರ್ಷಗಳ ಕಾಲ ಸಲ್ಲಿಸಿದ ಸೇವೆಯಲ್ಲಿ ಗಳಿಸಿದ ಎಲ್ಲಾ ಹಣವೂ ಸಮಾಜಕ್ಕೆ ಅರ್ಪಿಸಿದ ಆ ಪುಣ್ಯಾತ್ಮ.  ಇಂತಹ ಅಸಾಮಾನ್ಯ ವ್ಯಕ್ತಿ ಸಾಮಾನ್ಯನಾಗೇ ಉಳಿದುದು ವಿವರಣೆಗೆ ನಿಲುಕದ ಸಂಗತಿ. ೧೯೯೦ರಲ್ಲಿ ಪೆನ್ಶನ್ ಮತ್ತು ನಿವೃತ್ತಿ ಸಂಬಂಧದ ಹಣ ಸುಮಾರು ೧೦ ಲಕ್ಷ ರೂ.ಗಳು ಬಂದಾಗ ಆ ಎಲ್ಲಾ ಹಣವನ್ನೂ ತಿರುನಲ್ವೇಲಿಯ ಕಲೆಕ್ಟರರ ನಿಧಿಗೆ ಕೊಟ್ಟು ನಿರಾಳರಾದ ಅವರನ್ನು, ಕಲೆಕ್ಟರರು ಅವರ ವಿರೋಧವನ್ನೂ ಲೆಕ್ಕಿಸದೆ ಸನ್ಮಾನಿಸಿದ್ದರು. ತಿರುನಲ್ವೇಲಿಯ ವೈದ್ಯಕೀಯ ಕಾಲೇಜಿಗೆ ಸತ್ತ ನಂತರದಲ್ಲಿ ತಮ್ಮ ಕಣ್ಣು ಮತ್ತು ದೇಹದಾನ ಪಡೆಯಲು ಅನುಮತಿಸಿ ಬರೆದುಕೊಟ್ಟಿರುವವರಿವರು. ಪಾಲಮ್ ಎಂಬ ಹೆಸರಿನ ಸಮಾಜ ಕಲ್ಯಾಣ ಸಂಸ್ಥೆ ಸ್ಥಾಪಿಸಿರುವ ಅವರು ಅದರ ಮೂಲಕ ಸಮಾಜಸೇವೆ ಮಾಡುತ್ತಿದ್ದಾರೆ. ಈ ಸಂಸ್ಥೆ ದಾನಿಗಳು ಮತ್ತು ಫಲಾನುಭವಿಗಳ ನಡುವಿನ ಕೊಂಡಿಯಂತೆ ಕೆಲಸ ಮಾಡುತ್ತಿದ್ದು, ದಾನಿಗಳು ಕೊಡುವ ವಸ್ತುಗಳು ಮತ್ತು ಹಣ ಯೋಗ್ಯರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ತಮಿಳುನಾಡು, ಆಂಧ್ರಪ್ರದೇಶ ಮತ್ತು ಒರಿಸ್ಸಾದ ಚಂಡಮಾರುತ ಸಂತ್ರಸ್ತರಿಗೆ, ಮಹಾರಾಷ್ಟ್ರ ಮತ್ತು ಗುಜರಾತಿನ ಭೂಕಂಪ ಪೀಡಿತರಿಗೆ ಈ ಸಂಸ್ಥೆ ಸಹಾಯಹಸ್ತ ಚಾಚಿದೆ. 
     ತಿರುನಲ್ವೇಲಿ ಜಿಲ್ಲೆಯ ಮೇಲಕರಿವೇಲಾಂಕುಲಂನಲ್ಲಿ ೧೯೫೩ರ ಆಗಸ್ಟ್ ತಿಂಗಳಿನಲ್ಲಿ ಜನಿಸಿದ ಕಲ್ಯಾಣಸುಂದರಮ್ ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದು, ಅವರಿಗೆ ಬಡವರ ಸೇವೆ ಮಾಡಲು ಪ್ರೇರಿಸಿದ್ದು ಅವರ ತಾಯಿ. ಲೈಬ್ರರಿ ಸೈನ್ಸಿನಲ್ಲಿ ಚಿನ್ನದ ಪದಕ ಗಳಿಸಿದ್ದ ಅವರು ಕೆಲಸ ಮಾಡುತ್ತಿದ್ದ ಕ್ಷೇತ್ರದಲ್ಲೂ ಅನುಪಮ ಸೇವೆ ಸಲ್ಲಿಸಿದವರು. ಮದ್ರಾಸ್ ವಿಶ್ವವಿದ್ಯಾಲಯದ ಸಾಹಿತ್ಯ ಮತ್ತು ಇತಿಹಾಸ ವಿಷಯಗಳಲ್ಲಿ ಮಾಸ್ಟರ್ ಪದವಿ ಹೊಂದಿದ್ದಾರೆ. ಗ್ರಂಥಪಾಲನೆ ಮಾಡುವ ಕ್ರಮದ ಅಭಿವೃದ್ಧಿಗೆ ಮಾರ್ಗಸೂಚಿಗಳನ್ನು ತೋರಿದವರು. ಅವರು ಖಾದಿ ತೊಡಲು ಪ್ರಾರಂಭಿಸಿದ್ದಕ್ಕೂ ಹಿನ್ನೆಲೆಯಿದೆ.  ಗಾಂಧೀಜಿ ವಿಚಾರಗಳ ಕುರಿತು ಅವರು ಕಾಲೇಜಿನಲ್ಲಿ ತರಗತಿಗಳನ್ನು ತೆಗೆದುಕೊಳ್ಳಬೇಕಿತ್ತಂತೆ. ಗಾಂಧಿ ಕುರಿತು ಮಾತನಾಡುವಾಗ ಬೆಲೆ ಬಾಳುವ ಬಟ್ಟೆ ಧರಿಸಿ ಮಾತನಾಡುವುದು ಸರಿಕಾಣದೆ ಅವರು ಖಾದಿ ತೊಡಲು ಆರಂಭಿಸಿದರು. ಇತರರಿಗೆ ಏನಾದರೂ ಹೇಳಬೇಕಾದರೆ ಅದರಂತೆ ಮೊದಲು ನಡೆದು ಮಾದರಿಯೆನಿಸುವ ಸಾಧಕರ ಸಾಲಿನಲ್ಲಿ ಕಲ್ಯಾಣಸುಂದರಮ್ ಸೇರುತ್ತಾರೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಅವರು ಅಚ್ಚುಮೆಚ್ಚಿನವರಾಗಿದ್ದು, ಅವರಲ್ಲಿ ಅನೇಕರು ಪಾಲಮ್ ಸಂಸ್ಥೆಗೆ ಸೇರಿದ್ದಾರೆ. ರಾಷ್ಟ್ರೀಕೃತ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿ ಎಲ್ಲಾ ಸ್ತರದ ಜನರಿಗೆ ಅದರ ಉಪಯೋಗ ಕಲ್ಪಿಸುವ ಒಂದು ಗುರಿಯನ್ನೂ ಸಹ ಅವರ ಸಂಸ್ಥೆ ಹೊಂದಿದೆ. "ಕ್ರಿಯಾಸಿದ್ಧಿಃ ಸತ್ವೇಭವತಿ ಮಹತಾಂ ನೋಪಕರಣೇ."
     ಸರಳ ಜೀವನ, ಉನ್ನತ ಚಿಂತನೆಯ ಸಾಕಾರ ರೂಪ ಕಲ್ಯಾಣಸುಂದರಮ್. ಸಮಾಜಕ್ಕೆ ನಾವು ಏನನ್ನಾದರೂ ಕೊಡಬೇಕು. ಸಾಮಾಜಿಕ ಒಳಿತಿಗೆ ಪ್ರತಿಯೊಬ್ಬರೂ ತಮ್ಮ ಪಾಲಿನ ಕಾಣಿಕೆ ಕೊಟ್ಟರೆ ಬದಲಾವಣೆ ಸಾಧ್ಯವೆಂದು ನಂಬಿರುವ ಅವರು ಈ ವಿಷಯದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹೆಸರಿಗೆ ತಕ್ಕಂತೆ ಲೋಕಕಲ್ಯಾಣಕಾರಿಯಾಗಿರುವ, ಸುಂದರ ವಿಚಾರಗಳನ್ನು ಕಾರ್ಯರೂಪಕ್ಕಿಳಿಸಿರುವ ಕಲ್ಯಾಣಸುಂದರಮ್ ನಮ್ಮೆಲ್ಲರಿಗೆ ಆದರ್ಶವಾಗಲಿ. ಕೋಟಿ ಕೋಟಿ ಹಣ ಬಾಚುವ, ದೋಚುವ ರಾಜಕಾರಣಿಗಳು, ನುಂಗಣ್ಣರನ್ನು ವೈಭವೀಕರಿಸುವ ಜನರು ಮತ್ತು ಮಾಧ್ಯಮಗಳು ಇಂತಹವರ ಕಾರ್ಯಗಳ ಮೇಲೆ ಬೆಳಕು ಚೆಲ್ಲಲಿ. 'ರಾಷ್ಟ್ರಾಯ ಸ್ವಾಹಾ ರಾಷ್ಟ್ರಾಯ ಇದಂ ನ ಮಮ" - (ದೇಶಕ್ಕಾಗಿ ನನ್ನ ಸೇವೆ ಅರ್ಪಿತ, ಇದು ದೇಶಕ್ಕಾಗಿ, ನನಗಲ್ಲ) ಎಂಬ ನುಡಿಯ ಸಾರ್ಥಕ ರೂಪವಾದ ಈ ಸಹಸ್ಯಮಾನದ ಅಪರೂಪದ ವ್ಯಕ್ತಿತ್ವಕ್ಕೆ ನಮೋನಮಃ. 
-ಕ.ವೆಂ.ನಾಗರಾಜ್.
**************
11.6.2014ರ ಜನಹಿತದ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ.

ಮಂಗಳವಾರ, ಜೂನ್ 24, 2014

ಪಟ್ಟಭದ್ರ ಹಿತಾಸಕ್ತಿ ಮತ್ತು ಸರ್ಕಾರಿ ಸೇವೆ

     ಸರ್ಕಾರಿ ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ಮಿತಿ ಮೀರಿರುವುದರಿಂದ ಪಟ್ಟಭದ್ರ ಹಿತಾಸಕ್ತರ ಒಂದು ಪಡೆಯೇ ಆಡಳಿತವನ್ನು ನಿಯಂತ್ರಿಸುತ್ತಿದೆಯೇನೋ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಸ್ವಹಿತಾಸಕ್ತ ಪಟ್ಟಭದ್ರ ಅಧಿಕಾರಿಗಳೇ ಮೇಲುಗೈ ಸಾಧಿಸಿರುವುದೂ ಇದೆ. ಅಧಿಕಾರಿಗಳು ಮತ್ತು ರಾಜಕಾರಣಿಗಳ ಪಟ್ಟಭದ್ರ ಕೂಟಗಳೇ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಸಕ್ರಿಯವಾಗಿದ್ದು, ಪರಸ್ಪರರನ್ನು ಪೋಷಿಸುತ್ತಿವೆ. ಈ ಕೂಟ ಇತರ ಅಧಿಕಾರಿಗಳು, ನೌಕರರನ್ನು ನಿಯಂತ್ರಿಸುತ್ತದೆ. ಕೆಲವರು ಹಿರಿಯ ಅಧಿಕಾರಿಗಳಿಗೆ ತಾವು ಅಸಹಾಯಕರು ಎಂಬ ಭಾವನೆ ಬರುತ್ತಿದೆ. ಪ್ರಾಮಾಣಿಕ ಅಧಿಕಾರಿಗಳು ಅನೇಕ ರೀತಿಯ ಕಿರುಕುಳಕ್ಕೆ ಒಳಗಾಗುವುದನ್ನು ಕಾಣುತ್ತಿದ್ದೇವೆ. ಇದೇ ಈ ಭಾವನೆ ಮೂಡಲು ಪ್ರಮುಖ ಕಾರಣ. ಈ ಭಾವನೆಯ ಜಾಲದಿಂದ ಅವರುಗಳು ಹೊರಬರಬೇಕಿದೆ. ಅವರುಗಳು ಅಭದ್ರತೆಯ ಕಾರಣದಿಂದ ತಮಗಿರುವ ಅಧಿಕಾರವನ್ನು ಬಳಸುತ್ತಿಲ್ಲ. ಹೀಗಾಗಿ ಅಂತಿಮವಾಗಿ ಇದರ ಕೆಟ್ಟ ಪರಿಣಾಮಗಳನ್ನು ಅನುಭವಿಸುವವರು ಜನಸಾಮಾನ್ಯರೇ ಆಗುತ್ತಾರೆ. ಅಧಿಕಾರಿಗಳು ತಮಗೆ ಇರುವ ಅಧಿಕಾರವನ್ನು ಉಪಯೋಗಿಸಿ ಜನಪರವಾಗಿ ಕೆಲಸ ಮಾಡುವ ಮನಸ್ಸು ಮಾಡಿದರೆ ಅವರಿಗೆ ಅಡಚಣೆಗಳು ಬರಬಹುದು, ರಾಜಕೀಯವಾಗಿ ಕಿರಿಕಿರಿಗಳನ್ನು ಎದುರಿಸಬೇಕಾಗಿ ಬರಬಹುದು, ಹೆಚ್ಚೆಂದರೆ ಅವರನ್ನು ಉಪಯೋಗವಿಲ್ಲವೆಂದು ಭಾವಿಸಲಾಗುವ ಹುದ್ದೆಗೆ, ಬೇರೆ ಸ್ಥಳಕ್ಕೆ ವರ್ಗಾಯಿಸಬಹುದು. ಇವುಗಳನ್ನು ಎದುರಿಸಿ ನಿಲ್ಲುವವರ ಸಂಖ್ಯೆ ಹೆಚ್ಚಾಗಬೇಕು. ಆಗ ಮಾತ್ರ ಪರಿಸ್ಥಿತಿಯಲ್ಲಿ ಸುಧಾರಣೆ ನಿರೀಕ್ಷಿಸಬಹುದು. 
     ಇದು ಹಲವು ವರ್ಷಗಳ ಹಿಂದೆ ಪಕ್ಕದ ಜಿಲ್ಲೆಯಲ್ಲಿ ನಡೆದ ಘಟನೆ. ಸಹಾಯಕ ಕೃಷಿ ನಿರ್ದೇಶಕರೊಬ್ಬರು ಶಾಸಕರ ಆಜ್ಞಾನುವರ್ತಿಯಾಗಿದ್ದರು. ಅವರ ಇಷ್ಟಾನಿಷ್ಟಗಳನ್ನು ಅನುಸರಿಸಿ ಕೆಲಸ ಮಾಡುತ್ತಿದ್ದವರು. ಒಮ್ಮೆ ಶಾಸಕರು ಅವರಿಗೆ ಹಣದ ಬೇಡಿಕೆ ಇಟಿದ್ದಲ್ಲದೆ ಅದನ್ನು ಹೊಂದಿಸಲು ಮಾರ್ಗವನ್ನೂ ಸೂಚಿಸಿದ್ದರು. ನಡೆಯದ ಕಾಮಗಾರಿಗೆ ಸುಳ್ಳು ಬಿಲ್ಲು ತಯಾರಿಸಿ ಹಣ ಹೊಂದಿಸುವುದೇ ಅದು! ಅಧಿಕಾರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿಯೂ ಅಭಯ ಕೊಟ್ಟಿದ್ದರು. ಸರಿ, ಹಣ ಹೊಂದಾಣಿಕೆಯಾಯಿತು. ಅಭಯ ಕೊಟ್ಟಿದ್ದಂತೆ ಅವರಿಗೆ ಯಾರಿಂದಲೂ ತೊಂದರೆಯಾಗಲಿಲ್ಲ. ಆದರೆ, ನಿಜವಾದ ತೊಂದರೆ ಶಾಸಕರಿಂದಲೇ ಶುರುವಾಗಿತ್ತು. ಶಾಸಕರು ಆಗಾಗ್ಗೆ ಹಣಕ್ಕೆ ಹೇಳಿಕಳಿಸುತ್ತಿದ್ದರು. ಕೊಡದಿದ್ದರೆ ಸುಳ್ಳು ಬಿಲ್ಲಿನ ವಿಚಾರ ಹೊರತಂದು ಅಧಿಕಾರಿಯ ಕೆಲಸಕ್ಕೆ ಸಂಚಕಾರ ತರುವುದಾಗಿ ಬೆದರಿಸುತ್ತಿದ್ದರು. ಬರಬರುತ್ತಾ ಇದು ತುಂಬಾ ವಿಪರೀತಕ್ಕೆ ಇಟ್ಟುಕೊಂಡಾಗ ಆ ಅಧಿಕಾರಿ ಮೃತ್ಯುಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು. ವಿಷಯ ಎಲ್ಲಾ ಪತ್ರಿಕೆಗಳಲ್ಲಿ ಪ್ರಚುರವಾಗಿತ್ತು. ಮುಂದೇನಾಯಿತು? ಏನೂ ಆಗಲಿಲ್ಲ. ನಿಜವಾದ ಅಪರಾಧಿಗೆ ಶಿಕ್ಷೆಯಾಗಲೇ ಇಲ್ಲ. ಅಧಿಕಾರಿಯದೂ ತಪ್ಪಿರಲಿಲ್ಲ ಎಂದು ಹೇಳುವಂತಿಲ್ಲ. ಆ ತಪ್ಪಿಗಾಗಿ ಅವರು ಪ್ರಾಣವನ್ನೇ ತೆರಬೇಕಾಯಿತಷ್ಟೆ. ಜನಪ್ರತಿನಿಧಿಗಳಿಗೆ, ಮೇಲಾಧಿಕಾರಿಗಳಿಗೆ ಕಪ್ಪ-ಕಾಣಿಕೆಗಳನ್ನು ನಿಯಮಿತವಾಗಿ ಒಪ್ಪಿಸುವ ಅಧಿಕಾರಿಗಳ ಸಂಖ್ಯೆ ಕಡಿಮೆಯೇನಲ್ಲ. ಇವು ನೇರವಾಗಿ ತಲುಪುತ್ತದೆ, ಅಥವ ಪರೋಕ್ಷವಾಗಿ ತಲುಪುತ್ತದೆ. ಯಾವುದೋ ನಿಧಿಯ ಹೆಸರಿನಲ್ಲಿ, ಯಾವುದೋ ಸಭೆ-ಸಮಾರಂಭದ ವೆಚ್ಚಗಳ ಹೆಸರಿನಲ್ಲಿ ಈ ಸೇವೆ ಸಲ್ಲಿಸಲ್ಪಡುತ್ತದೆ. ಆ ಅಧಿಕಾರಿಗಳಾದರೋ, ತಮ್ಮ ಸ್ವಂತದ ಹಣ ಕೊಡುತ್ತಾರೆಯೇ? ಅವರು ಇನ್ನು ಯಾರ ತಲೆಗಳ ಮೇಲೋ ಕೈ ಇಡುತ್ತಾರೆ. ಸರ್ಕಾರಿ ಹಣದ ಸೋರಿಕೆ ಮತ್ತು ದುರುಪಯೋಗಗಳಲ್ಲಿ ಇದು ಪರ್ಯವಸಾನವಾಗುತ್ತದೆ.
     ನೇಮಕಾತಿಯಿಂದ ಪ್ರಾರಂಭವಾಗುವ ಭ್ರಷ್ಠಾಚಾರದ ಹಾವಳಿ, ಸೂಕ್ತ ಇಲಾಖೆಯ ಆಯ್ಕೆ, ಬಯಸಿದ ಹುದ್ದೆಗೆ ಆಯ್ಕೆ, ಬಯಸಿದ ಸ್ಥಳಕ್ಕೆ ನೇಮಕ, ವರ್ಗಾವಣೆ, ಇತ್ಯಾದಿ ಹಲವು ಸಂಗತಿಗಳಲ್ಲಿ ವ್ಯಾಪಿಸಿದೆ. ಒಬ್ಬರು ಅಧಿಕಾರಿ ತಾನು ಪಡೆಯುತ್ತಿದ್ದ ಅಕ್ರಮ ಸಂಭಾವನೆಗೆ ಸಮರ್ಥನೆ ನೀಡುತ್ತಿದ್ದುದು ಹೀಗೆ: "ನಾನು ಇಷ್ಟು ಲಕ್ಷ ಹಣ ಕೊಟ್ಟು ಈ ಹುದ್ದೆಗೆ ಬಂದಿದ್ದೇನೆ. ಅದನ್ನು ವಸೂಲು ಮಾಡಿಕೊಳ್ಳಬೇಡವೇ?" ವರ್ಗಾವಣೆ ಅನ್ನುವುದು ಹಣ ಮಾಡುವ ಒಂದು ದೊಡ್ಡ ದಂಧೆಯಾಗಿಬಿಟ್ಟಿರುವುದು ಬಹಿರಂಗ ಸತ್ಯ. ಬಯಸಿದ ಸ್ಥಳ, ಹುದ್ದೆಗಳಿಗೆ ವರ್ಗಾವಣೆ ಹಣ ಕೊಟ್ಟರೆ ಸಲೀಸಾಗಿ ಆಗುತ್ತದೆ. ಇಂತಹ ಹುದ್ದೆಗೆ ಇಷ್ಟು ಎಂದು ದರ ನಿಗದಿಯಾಗಿರುತ್ತದೆ. ಪ್ರಭಾವ ಇದ್ದಲ್ಲಿ ಸ್ವಲ್ಪ ರಿಯಾಯಿತಿಯೂ ಇರುತ್ತದೆ! ಹಣ ಕೊಡದವರು ಬೇಡದ ಸ್ಥಳಗಳಿಗೆ ಮತ್ತು ಅಕಾಲಿಕ ವರ್ಗಾವಣೆಗಳಿಗೆ ಒಳಪಡಬೇಕಾಗುತ್ತದೆ ಎಂಬುದು ಸುಳ್ಳಲ್ಲ. ನನ್ನ ಸೇವಾವಧಿಯಲ್ಲಿ ನಾನು ೨೬ ವರ್ಗಾವಣೆಗಳನ್ನು ಕಂಡವನು. ಇವುಗಳಲ್ಲಿ ರಾಜಕೀಯ ಪ್ರೇರಿತ ವರ್ಗಾವಣೆಗಳದೇ ಸಿಂಹಪಾಲು. ಒಮ್ಮೆಯಂತೂ ಬಂದ ಒಂದೆರಡೇ ತಿಂಗಳಿನಲ್ಲಿ ವರ್ಗ ಮಾಡಲಾಗಿತ್ತು. ಒಂದು ತಮಾಷೆಯ ಪ್ರಸಂಗ ಹಂಚಿಕೊಳ್ಳಬೇಕೆನಿಸುತ್ತಿದೆ. ನಾನು ಮಂಗಳೂರಿನ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ನಗರ ಆಸ್ತಿಮಿತಿ ತಹಸೀಲ್ದಾರ್ ಆಗಿದ್ದಾಗ ಕಂದಾಯ ಆಯುಕ್ತರ ಕಾರ್ಯಾಲಯದಿಂದ ಸಿಬ್ಬಂದಿಯೊಬ್ಬರು ನನಗೆ ದೂರವಾಣಿ ಮೂಲಕ ನನ್ನನ್ನು ಹಾಸನ ಜಿಲ್ಲಾಧಿಕಾರಿಯವರ ಕಛೇರಿಗೆ ವರ್ಗಾಯಿಸಲು ಅನುಕೂಲಿಸುವುದಾಗಿಯೂ ೨ ಲಕ್ಷ ರೂ. ಕೊಟ್ಟರೆ ಕೆಲಸ ಆಗುತ್ತದೆಯೆಂದೂ ತಿಳಿಸಿದ್ದರು. ನಾನು, 'ನನಗೇ ಕೇವಲ ಇಪ್ಪತ್ತೈದು ಸಾವಿರ ರೂ. ಕೊಟ್ಟು ಎಲ್ಲಿಗಾದರೂ ವರ್ಗಾಯಿಸಿ, ನಾನು ಈಗಿರುವ ಹುದ್ದೆಯನ್ನೂ ಹೆಚ್ಚು ಹಣ ಕೊಡುವ ಇನ್ನು ಯಾರಿಗಾದರೂ ಮಾರಿಕೊಳ್ಳಬಹುದೆಂದು' ಹಾಸ್ಯ ಮಾಡಿದ್ದೆ. ಆ ಸಂದರ್ಭದಲ್ಲಿ ನನಗೆ ಎತ್ತಂಗಡಿಯಾಗಿ ಬೇರೊಂದು ಸ್ಥಳಕ್ಕೆ ವರ್ಗಾವಣೆಯಾದಾಗ ನನ್ನ ಜಾಗಕ್ಕೆ ಬಂದಿದ್ದವರು ದಕ್ಷಿಣೆ ಕೊಟ್ಟು ಬಂದಿದ್ದರೆಂದು ನನಗೆ ತಿಳಿಯಿತು. ಹೇಗಿದ್ದರೂ ನನ್ನನ್ನು ವರ್ಗಾಯಿಸಬೇಕಿತ್ತು, ನನ್ನಿಂದಲೂ ಏನಾದರೂ ಗಿಟ್ಟಬಹುದೆಂದು ಭಾವಿಸಿ ನನಗೆ ಹಾಸನಕ್ಕೆ ವರ್ಗಾಯಿಸುವ 'ಆಫರ್' ಕೊಟ್ಟಿದ್ದರು! ವ್ಯವಸ್ಥೆ ಹೀಗಿರುವಾಗ ಭ್ರಷ್ಠತೆಯ ಬೇರುಗಳು ಗಟ್ಟಿಯಾಗುತ್ತಾ ಹೋಗದೆ ಮತ್ತೇನಾದೀತು! ಸ್ಥಳೀಯ ರಾಜಕೀಯ ನಾಯಕರುಗಳಿಗೆ ಅನುಕೂಲವಾಗಲೆಂದು ಹಲವಾರು ಹುದ್ದೆಗಳಿಗೆ ಅಧಿಕಾರಿಗಳನ್ನೇ ನೇಮಿಸದೆ ಕೈಕೆಳಗಿನ ಅಧಿಕಾರಿಗಳನ್ನೇ ಹೆಚ್ಚಿನ ಪ್ರಭಾರೆಯಲ್ಲಿರಿಸಿ ವರ್ಷಗಟ್ಟಲೆ ಇದೇ ಸ್ಥಿತಿ ಇರುವಂತೆ ನೋಡಿಕೊಂಡಿದ್ದುದು ಪಟ್ಟಭದ್ರರ ಕೂಟ ಎಷ್ಟು ಬಲವಾಗಿದೆ ಎಂಬುದನ್ನು ತೋರಿಸುತ್ತದೆ. 
     ಅವರು ಒಬ್ಬರು ಪ್ರಾಮಾಣಿಕ ಹಿರಿಯ ಅಧಿಕಾರಿ, ಶಿಕ್ಷಣ ಇಲಾಖೆಯಲ್ಲಿ ಕಮಿಷನರ್ ಆಗಿದ್ದರು. ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ಮಧ್ಯಾಹ್ನದ ಊಟ, ಉಚಿತ ಪಠ್ಯ ಪುಸ್ತಕಗಳ ವಿತರಣೆ, ಮುಂತಾದ ಯೋಜನೆಗಳ ಯಶಸ್ಸಿಗೆ, ಸಮರ್ಪಕ ಜಾರಿಗೆ ಎಲ್ಲಾ ಶ್ರಮ ಹಾಕಿದ್ದವರು. ಮುಖ್ಯಮಂತ್ರಿಗಳೇ ಅವರನ್ನು ಬಹಿರಂಗ ವೇದಿಕೆಯಲ್ಲಿ ಉತ್ತಮ ಮತ್ತು ದಕ್ಷ ಅಧಿಕಾರಿ ಎಂದು ಶ್ಲಾಘಿಸಿದ್ದರು. ಹಾಗಿರುವಾಗ ಅವರನ್ನು ಇದ್ದಕ್ಕಿದ್ದಂತೆ ವರ್ಗಾವಣೆ ಮಾಡಿದ್ದರು. ಕಾರಣವಿಲ್ಲದೆ ಮಾಡಿದ ವರ್ಗಾವಣೆಯಿಂದ ನೊಂದ ಅವರು ಕೆಲಸಕ್ಕೇ ರಾಜಿನಾಮೆ ನೀಡಿದರು. ಆಗ ಮಂತ್ರಿಯೊಬ್ಬರು, "ದಯವಿಟ್ಟು ರಾಜಿನಾಮೆ ಹಿಂತೆಗೆದುಕೊಳ್ಳಿ. ಜನ ಇದಕ್ಕೆ ನಮ್ಮನ್ನೇ ಕಾರಣವೆಂದು ದೂರುತ್ತಾರೆ" ಎಂದಾಗ ಅಧಿಕಾರಿ ತಮ್ಮ ವರ್ಗಾವಣೆಯ ಕಾರಣ ಕೇಳಿದರು. 'ಮುಖ್ಯಮಂತ್ರಿಯವರನ್ನೇ ವಿಚಾರಿಸಿ' ಎಂದು ಮಂತ್ರಿ ಮಹೋದಯರು ಹೇಳಿದರು. ಮುಖ್ಯಮಂತ್ರಿಯವರನ್ನೇ 'ಒಳ್ಳೆಯ ಅಧಿಕಾರಿ ಎಂದು ಹೊಗಳಿದವರೇ ಇದ್ದಕ್ಕಿದ್ದಂತೆ ವರ್ಗಾಯಿಸಿದ ಕಾರಣವಾದರೂ ಏನು?' ಎಂದು ವಿಚಾರಿಸಿದರು. ಮುಖ್ಯಮಂತ್ರಿಯವರು ತೇಲಿಸಿ ಮಾತನಾಡಿದರೂ ಕೊನೆಗೆ 'ಆ ಮಂತ್ರಿಯವರ ಕೋರಿಕೆಯಂತೆ ವರ್ಗಾವಣೆ ಮಾಡುವುದಿಲ್ಲ' ಎಂಬ ಕಾರಣಕ್ಕಾಗಿ ಅಧಿಕಾರಿಯನ್ನೇ ವರ್ಗ ಮಾಡಿದ ಸತ್ಯ ಹೊರಬಿದ್ದಿತ್ತು. 'ಉತ್ತರ ಕರ್ನಾಟಕದಲ್ಲಿ ಶೇ. ೨೫ರಷ್ಟು ಹುದ್ದೆಗಳು ಖಾಲಿ ಇವೆ. ಅವರನ್ನು ಮಂತ್ರಿಯವರ ಇಚ್ಛೆಯಂತೆ ಮತ್ತೆ ಬೇರೆಡೆಗೆ ವರ್ಗಾಯಿಸಿದರೆ ಅಲ್ಲಿನ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುವುದಿಲ್ಲವೆ?' ಎಂದ ಅಧಿಕಾರಿಗೆ ಮುಖ್ಯಮಂತ್ರಿಯವರು ಕೊಟ್ಟಿದ್ದ ಉತ್ತರವಿದು: "ನೀವು ಹೇಳುವುದೆಲ್ಲಾ ಸರಿ. ಅದಕ್ಕೆಲ್ಲಾ ರಾಜಕೀಯ ಕಾರಣಗಳೂ ಇರುತ್ತವೆ. ನೀವು ಮಾತ್ರ ರಾಜಿನಾಮೆ ಕೊಡಬೇಡಿ. ನಿಮ್ಮಂತಹವರು ನಮಗೆ ಬೇಕು". ಅಧಿಕಾರಿಯ ಮನವೊಲಿಸಿ ರಾಜಿನಾಮೆ ಹಿಂಪಡೆಯುವಂತೆ ಮಾಡಿದ್ದರು. ಗುಜರಾತ್, ತಮಿಳುನಾಡುಗಳಲ್ಲಿ ಈ ರೀತಿಯ ಅವಧಿಪೂರ್ವ ವರ್ಗಾವಣೆಗಳು ಬಹಳ ಕಡಿಮೆ. ಪದೇ ಪದೇ ವರ್ಗಾವಣೆಗಳು ಆಡಳಿತದ ಮೇಲೂ ಪರಿಣಾಮ ಬೀರುತ್ತವೆ. ಹೊಸ ಅಧಿಕಾರಿ ಪರಿಸರಕ್ಕೆ ಹೊಂದಿಕೊಂಡು ಕೆಲಸ ಪ್ರಾರಂಭಿಸುವಷ್ಟರಲ್ಲಿ ವರ್ಗಾವಣೆ ಆದರೆ ಕಷ್ಟ ಅನುಭವಿಸುವವರು ಸಾಮಾನ್ಯ ಜನರು ಮಾತ್ರ. ಅಲ್ಪಕಾಲಿಕ ಲಾಭಕ್ಕಾಗಿ ಜನರ ಹಿತ ಬಲಿ ಕೊಡುವ ಇಂತಹ ಪ್ರವೃತ್ತಿಗೆ ಕಡಿವಾಣ ಬೀಳಲೇಬೇಕು.
     ವಿವಿಧ ಯೋಜನೆಗಳನ್ನು ಜಾರಿ ಮಾಡುವ ಸಂದರ್ಭಗಳಲ್ಲೂ ಪರ್ಸೆಂಟೇಜ್ ವ್ಯವಹಾರ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದರಿಂದ ಯೋಜನೆಗಳ ಪ್ರಯೋಜನ ಜನರಿಗೆ ತಲುಪಬೇಕಾದ ಪ್ರಮಾಣದಲ್ಲಿ ತಲುಪುವುದು ಕಷ್ಟಸಾಧ್ಯ. ಸಾರ್ವಜನಿಕರ ಹಣ ರಾಜಕಾರಣಿಗಳ, ಮಧ್ಯವರ್ತಿಗಳ ಮತ್ತು ಅಧಿಕಾರಿಗಳ ಪಾಲಾಗುತ್ತಿದೆ. ಅನ್ನಭಾಗ್ಯದ ಮತ್ತು ಸಾರ್ವಜನಿಕರ ಪಡಿತರ ಸಾಮಗ್ರಿಗಳು ಕಾಳಸಂತೆಯಲ್ಲಿ ಮಾರಾಟವಾಗುವುದು, ಮರಳು ಮಾಫಿಯಾ, ಭೂಗಳ್ಳತನ, ಅನರ್ಹರಿಗೆ ಸರ್ಕಾರಿ ಸವಲತ್ತುಗಳು ಸಿಗುವುದು, ಅರ್ಹರಿಗೆ ಸಿಗದೇ ಇರುವುದು, ಮುಂತಾದ ಸಮಸ್ಯೆಗಳು ಅಧಿಕಾರಿಗಳು, ಮಧ್ಯವರ್ತಿಗಳು, ರಾಜಕಾರಣಿಗಳ ಪರಸ್ಪರ ಸಹಕಾರವಿಲ್ಲದೆ, ಅವರ ಪಾಲು ಇಲ್ಲದೆ ಉದ್ಭವಿಸುತ್ತಿವೆ ಎಂದರೆ ನಂಬಲು ಸಾಧ್ಯವೇ? ಚುನಾವಣೆ ಸಂದರ್ಭಗಳಲ್ಲಿ ನೇಮಕವಾಗುವ ಉಸ್ತುವಾರಿ ಆಧಿಕಾರಿಗಳು, ಮತಗಟ್ಟೆ ಅಧಿಕಾರಿಗಳ ನೇಮಕಗಳನ್ನು ಮಂತ್ರಿಗಳು, ಶಾಸಕರ ಮರ್ಜಿ ಅನುಸರಿಸಿ ಅವರ ಸಲಹೆಯಂತೆ ಮಾಡುತ್ತಿದ್ದ ಜಿಲ್ಲಾಧಿಕಾರಿಗಳು, ತಹಸೀಲ್ದಾರರುಗಳನ್ನು ಕಂಡಿದ್ದೇನೆ. ಮೇಲ್ಮಟ್ಟದ ಅಧಿಕಾರಿಗಳು ಶಿಸ್ತುಬದ್ಧರಾಗಿದ್ದರೆ ಅಧೀನ ಅಧಿಕಾರಿಗಳೂ ಶಿಸ್ತುಬದ್ಧರಾಗಿರುತ್ತಾರೆ. ಕಾನೂನು ಸಮಸ್ಯೆ ಪರಿಹರಿಸಲಾರದು, ಸುಗಮ ಆಡಳಿತಕ್ಕೆ ಅದು ಸಹಕಾರಿ ಮಾತ್ರ. ಜನರು ಮಾತ್ರ ಸಮಸ್ಯೆ ಬಗೆಹರಿಸಬಹುದು. ಜನರ ಜೀವನ ಮಟ್ಟದ ಮೇಲೆ ಭ್ರಷ್ಠಾಚಾರ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಜನರಿಗೆ ಎಲ್ಲಿಯವರೆಗೆ ಅರಿವಾಗುವುದಿಲ್ಲವೋ ಅಲ್ಲಿಯವರೆಗೆ ಪರಿಹಾರ ಕಷ್ಟ. ಕಾನೂನು ಭ್ರಷ್ಠಾಚಾರಿಗಳನ್ನು ಬಂಧಿಸಬಹುದು, ಶಿಕ್ಷೆ ಮಾಡಬಹುದು, ಆದರೆ ಮನೋಭಾವ ಬದಲಿಸಲಾರದು. ಬದಲಾವಣೆ ಬರಬೇಕು, ಮನೋಭಾವ ಬದಲಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಬದಲಾವಣೆ ಮೇಲಿನಿಂದ ಬರಬೇಕು. ಬರಲಿ ಎಂದು ಆಶಿಸೋಣ.
-ಕ.ವೆಂ.ನಾಗರಾಜ್.
***************
4.6.2014ರ ಜನಹಿತ ಪತ್ರಿಕೆಯ ಅಂಕಣ 'ಜನಕಲ್ಯಾಣ'ದಲ್ಲಿ ಪ್ರಕಟಿತ.


ಗುರುವಾರ, ಜೂನ್ 19, 2014

ಇಂದಿನ ಅಗತ್ಯ - ಸ್ಪಂದನಶೀಲ ಆಡಳಿತ

     ಹಲವು ವರ್ಷಗಳ ಹಿಂದೆ ನಡೆದ ಘಟನೆಯಿದು. ಆಗ ಹಿರಿಯ ಅಧಿಕಾರಿ ಶ್ರೀ ಮದನಗೋಪಾಲರು ಸಿ.ಇ.ಟಿ.ಯ ವೈಸ್ ಛೇರ್‍ಮನ್ ಆಗಿದ್ದರು. ಶಿಕ್ಷಣ ಮಂತ್ರಿ ಶ್ರೀ ಅರವಿಂದ ಲಿಂಬಾವಳಿಯವರು ಛೇರ್‍ಮನ್. ಒಂದು ದಿನ ಪ್ರೌಢ ಮಹಿಳೆಯೊಬ್ಬಳು ಮದನಗೋಪಾಲರ ಭೇಟಿ ಬಯಸಿ ಬಂದು ಅವರನ್ನು ಕೇಳಿದಳು, "ಸರ್, ನೀವು 'ತಾರೆ ಜಮೀನ್ ಪರ್' ನೋಡಿದ್ದೀರಾ?" "ನೋಡಿದ್ದೇನೆ" - ಮದನಗೋಪಾಲರ ಉತ್ತರ. ಬಂದ ಮಹಿಳೆ ಮುಂದುವರೆಸಿದಳು, "ಹಾಗಾದರೆ ನನ್ನ ಸಮಸ್ಯೆ ಅರ್ಧ ಹೇಳಿಕೊಂಡಂತಾಯಿತು. ನೋಡಿ, ನನ್ನ ಮಗನದೂ ಅದೇ ಸಮಸ್ಯೆ. ಅವನು ಡಿಸ್ಲೆಕ್ಸಿಯದಿಂದ ನರಳುತ್ತಿದ್ದಾನೆ. ಇಂಜನಿಯರಿಂಗ್, ಮೆಡಿಕಲ್ ಸೀಟುಗಳಲ್ಲಿ ಶೇಕಡ ೩ರಷ್ಟನ್ನು ಅಂಗವಿಕಲರಿಗೆ ಮೀಸಲಿಟ್ಟಿದ್ದೀರಿ. ಆದರೆ ಆ ಸೀಟುಗಳು ಬೇರೆ ರೀತಿಯ ಅಂಗವಿಕಲರ ಪಾಲಾಗುತ್ತವೆ. ನನ್ನ ಮಗನಂತಹವರಿಗೆ ಒಂದು ಸೀಟೂ ಸಿಕ್ಕುವುದಿಲ್ಲ. ನೀವು ಏನಾದರೂ ಸಹಾಯ ಮಾಡಬಹುದೇ?" ಆ ಮಹಿಳೆಗೆ ಏನಾದರೂ ಸಹಾಯವಾದೀತೆಂದು ನಂಬಿಕೆಯಿರಲಿಲ್ಲ, ಆದರೂ ಮಗನ ಮೇಲಿನ ಮಮತೆ ಮತ್ತು ಕಾಳಜಿಯಿಂದ ಆಕೆ ಬಂದಿದ್ದಳು. ಇದು ಮದನಗೋಪಾಲರ ಮನಕ್ಕೆ ತಟ್ಟಿತು. ಅವರು ವಿಚಾರಮಗ್ನರಾದರು. ಅವರ ಒಳಗಿನ ಸಂತ ಜಾಗೃತನಾದ. ಏನಾದರೂ ಮಾಡಬೇಕೆಂದು ಅಂದುಕೊಂಡರು. ಆ ಮಹಿಳೆಗೆ ತಮ್ಮ ಕೈಲಾದ ಸಹಾಯ ಮಾಡುವುದಾಗಿ ಹೇಳಿ ಬೀಳ್ಕೊಟ್ಟರು.
     ಡಿಸ್ಲೆಕ್ಸಿಯದಂತಹ ಕಾಯಿಲೆಗಳಿಂದ ಬಳಲುವವರಿಗೆ ಉನ್ನತ ಶಿಕ್ಷಣ ಪಡೆಯಲು ಹೇಗೆ ಅವಕಾಶಗಳನ್ನು ಕಲ್ಪಿಸಬಹುದೆಂದು ಲೆಕ್ಕ ಹಾಕುತ್ತಲೇ ಮದನಗೋಪಾಲರು ಶಿಕ್ಷಣ ಸಚಿವ ಅರವಿಂದ ಲಿಂಬಾವಳಿಯವರಿಗೆ ಮಹಿಳೆಯೊಡನೆ ನಡೆದ ಮಾತುಕತೆಗಳನ್ನು ವಿವರಿಸಿದರು. ಅವರಿಗೂ ವಿಚಾರ ಮನಸ್ಸಿಗೆ ತಟ್ಟಿ ಹೇಳಿದರು, "ನೀವು ಏನು ಮಾಡಬಹುದೋ ಮಾಡಿರಿ. ಅದಕ್ಕೆ ನನ್ನ ಒಪ್ಪಿಗೆಯಿದೆ." ಪ್ರವೇಶಾತಿ  ನಿಯಮಕ್ಕೆ ವಿಶೇಷ ತಿದ್ದುಪಡಿ ಸಿದ್ಧಪಡಿಸಿ ವೈದ್ಯಕೀಯವಾಗಿ ಮಾನಸಿಕ ಕಾಯಿಲೆ ಕಾರಣದ ದೌರ್ಬಲ್ಯದವರಿಗೆ ಶೇ. ಅರ್ಧದಷ್ಟು ಸೀಟುಗಳನ್ನು ಮೀಸಲಿರಿಸಲು ಅಳವಡಿಸಿ ಮಂಡಿಸಲಾಯಿತು. ಒಂದೇ ವಾರದಲ್ಲಿ ಆ ತಿದ್ದಪಡಿಗೆ ಅಂಗೀಕಾರ ಪಡೆಯಲಾಯಿತು. ಪ್ರಾರಂಭದಲ್ಲಿ ವಿಶೇಷ ವರ್ಗದವರ ಕೌನ್ಸೆಲಿಂಗ್ ಆಗುತ್ತದೆ. ಮದನಗೋಪಾಲರನ್ನು ಭೇಟಿ ಮಾಡಿದ್ದ ಮಹಿಳೆಯೂ ತನ್ನ ಮಗನೊಂದಿಗೆ ಬಂದಿದ್ದಳು. ನಂಬುವುದಕ್ಕೇ ಆಗದಂತೆ ಆಕೆಯ ಮಗನಿಗೆ ಸೀಟು ಸಿಕ್ಕಿಬಿಟ್ಟಿತು! ಆನಂದಾತಿರೇಕದಿಂದ ಆ ಮಹಿಳೆ ಅತ್ತುಬಿಟ್ಟಳು. ಇಡೀ ದೇಶದಲ್ಲಿ ಅದೇ ಮೊದಲು ಡಿಸ್ಲೆಕ್ಸಿಯದಿಂದ ನರಳುತ್ತಿದ್ದವರಿಗೆ ಸೀಟು ಸಿಕ್ಕಿದ್ದು! ಭಾವಪರವಶಳಾಗಿ ಆಕೆ ಕೃತಜ್ಞತೆ ಸಲ್ಲಿಸಿದ್ದಳು.
     ಮೇಲಿನ ಘಟನೆಯಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಏನಾದರೂ ಜನಪರವಾಗಿ, ಜನೋಪಯೋಗಿಯಾಗಿ ಮಾಡಬೇಕೆಂದು ಹಿರಿಯ ಅಧಿಕಾರಿಗಳು ಮನಸ್ಸು ಮಾಡಿದರೆ ಮಾಡಲು ಸಾಧ್ಯವಿದೆ ಎಂಬುದೇ ಅದು. ಇಂತಹ ಅಧಿಕಾರಿಗಳ ಸಂಖ್ಯೆ ಬೆರಳೆಣಿಕೆಯ್ಟದ್ದರೂ, ಇಂತಹವರಿಗೆ ಪ್ರೋತ್ಸಾಹ, ಮಾನ್ಯತೆ ಸಿಕ್ಕಾಗ ಅವರು ಇತರರಿಗೂ ಮಾದರಿಯಾಗುತ್ತಾರೆ. ಇನ್ನೊಂದು ಸಂಗತಿಯನ್ನೂ ಗಮನಿಸಬಹುದು. ಅದೆಂದರೆ ರಾಜಕಾರಣಿಗಳ ಬಗ್ಗೆ ಏನನ್ನಾದರೂ ಮಾತನಾಡಬಹುದು. ಆದರೆ ಅವರಿಗೆ ಸೂಕ್ತ ರೀತಿಯಲ್ಲಿ ಮನವರಿಕೆ ಮಾಡಿದರೆ ಇಂತಹ ಉತ್ತಮ ಕೆಲಸಗಳು ಸಾಧ್ಯ. ಈ ಅನುಭವ ನನ್ನ ಸ್ವಂತದ್ದೂ ಕೂಡಾ ಆಗಿದೆ. ಶ್ರೀ ಯಡಿಯೂರಪ್ಪನವರು ಉಪಮುಖ್ಯಮಂತ್ರಿಯಾಗಿದ್ದಾಗ ಮತ್ತು ಮುಖ್ಯಮಂತ್ರಿಯಾಗಿದ್ದಾಗ ನಾನು ಅವರ ಕ್ಷೇತ್ರವಾದ ಶಿಕಾರಿಪುರದಲ್ಲೇ ತಹಸೀಲ್ದಾರನಾಗಿ ಕಾರ್ಯ ನಿರ್ವಹಿಸಿದ್ದೆ. ಜನರು ಅಹವಾಲು ಸಲ್ಲಿಸಿದ ಸಂದರ್ಭದಲ್ಲಿ ಅಥವ ಹಿತೈಷಿಗಳು ಅಥವ ಇತರ ರಾಜಕೀಯ ಕಾರ್ಯಕರ್ತರುಗಳು ಹೇಳಿದ ಸಂಗತಿಗಳನ್ನು ಆಧರಿಸಿ ಕೆಲವು ಕೆಲಸಗಳನ್ನು ಮಾಡಲು ಸೂಚನೆ ಕೊಡುತ್ತಿದ್ದರು. ಪೂರ್ಣ ವಿವರ ತಿಳಿಯದೆ ಕೊಡುತ್ತಿದ್ದ ಅಂತಹ ಕೆಲವು ಸೂಚನೆಗಳು ಜಾರಿಗೆ ತರುವಂತಹದಾಗಿರುತ್ತಿರಲಿಲ್ಲ. ಅಂತಹ ಸನ್ನಿವೇಶಗಳಲ್ಲಿ, ಅವರು ಒಬ್ಬರೇ ಇದ್ದ ಸಂದರ್ಭವನ್ನು ಉಪಯೋಗಿಸಿಕೊಂಡು ಸಾಧಕ-ಬಾಧಕಗಳನ್ನು ತಿಳಿಸಿ, ಬದಲಿಯಾಗಿ ಏನು ಮಾಡಬಹುದೆಂದು ತಿಳಿಸಿದರೆ, ಅವರು ಒಪ್ಪಿಕೊಳ್ಳುತ್ತಿದ್ದರು. ಇಂತಹುದೇ ಪ್ರತಿಕ್ರಿಯೆ ಎಲ್ಲಾ ರಾಜಕಾರಣಿಗಳಿಂದ ನಿರೀಕ್ಷಿಸುವುದು ಕಷ್ಟ. ಸರಿಯೋ, ತಪ್ಪೋ ತಾವು ಹೇಳಿದಂತೆ ಮಾಡಬೇಕೆಂದು ಹಟ ಮಾಡುವ, ದರ್ಪ ತೋರಿಸುವ ರಾಜಕಾರಣಿಗಳೇ ಜಾಸ್ತಿ. ಅದರಿಂದಾಗಿ ಅಧಿಕಾರಿಗಳು ಕಷ್ಟಕ್ಕೆ ಸಿಲುಕುತ್ತಾರೆ.
     ನಿಜವಾಗಿ ಸರ್ಕಾರದ ಸಾಧನೆಗಳನ್ನು ಯಶಸ್ವಿಯಾಗಿ ಬಿಂಬಿಸಬಲ್ಲ ರಾಯಭಾರಿಗಳೆಂದರೆ ಮೇಲೆ ತಿಳಿಸಿದ ಮಹಿಳೆಯಂತಹ ಫಲಾನುಭವಿಗಳೇ! ಸಾಧನೆಗಳನ್ನು ತೋರಿಸಲು ದೊಡ್ಡ ಫ್ಲೆಕ್ಸ್‌ಗಳ, ಟಿವಿ ಮತ್ತು ಪತ್ರಿಕೆಗಳಲ್ಲಿ ಜಾಹೀರಾತುಗಳ ಅಗತ್ಯವಿಲ್ಲ. ಅದಕ್ಕಾಗಿ ಖರ್ಚು ಮಾಡುವ ಕೋಟ್ಯಾಂತರ ರೂ.ಗಳನ್ನು ಜನೋಪಯೋಗಿ ಕಾರ್ಯಗಳಿಗೆ ಬಳಸಬಹುದು. ಸರ್ಕಾರಿ ಅಧಿಕಾರಿಗಳಲ್ಲಿ ಮತ್ತು ಶಾಸಕಾಂಗದವರಲ್ಲಿ ಜನರ ಕಷ್ಟ-ನಷ್ಟಗಳಿಗೆ ಸ್ಪಂದಿಸುವ ಮನೋಭಾವ ಬಂದಲ್ಲಿ ದೊಡ್ಡ ಕ್ರಾಂತಿಯೇ ಆಗುತ್ತದೆ. ಆದರೆ, ಭ್ರಷ್ಠಾಚಾರ ಇದಕ್ಕೆ ದೊಡ್ಡ ಕಂಟಕವಾಗಿದೆ. ಜನರನ್ನು ಗೋಳಾಡಿಸಿದರೆ, ಕಷ್ಟಕ್ಕೀಡು ಮಾಡಿದರೆ, ಜನರಿಗೆ ಕೊಡಬೇಕಾದ ಸವಲತ್ತುಗಳನ್ನು ಸಕಾಲದಲ್ಲಿ ಒದಗಿಸದಿದ್ದರೆ ಮೇಲಿನ ಆದಾಯ ಸಲೀಸಾಗಿ ಬರುತ್ತದೆ ಎಂಬ ಮನೋಭಾವ ಸ್ಪಂದನಶೀಲತೆಯನ್ನು ಮರಗಟ್ಟಿಸುತ್ತದೆ. 
     ಜನರ ಕುಂದುಕೊರತೆಗಳನ್ನು ಆಲಿಸಲು, ಸಮಸ್ಯೆಗಳನ್ನು ಪರಿಹರಿಸಲು ಆಗಾಗ್ಯೆ ಜನಸಂಪರ್ಕ ಸಭೆಗಳನ್ನು ಏರ್ಪಡಿಸುವ ಪರಿಪಾಠ ಒಳ್ಳೆಯದೇ. ಆದರೆ ಇವು ವರ್ಷದ ಕೆಲವು ಅವಧಿಯಲ್ಲಿ ನಡೆದು ನಿಂತುಹೋಗಿಬಿಡುತ್ತದೆ. ಮಂತ್ರಿಗಳೂ ಸಹ ಆಗಾಗ್ಯೆ ಜನರಿಂದ ಅಹವಾಲುಗಳನ್ನು ಸ್ವೀಕರಿಸುವ 'ಜನತಾ ಅದಾಲತ್'ಗಳೂ ನಡೆಯುವುದನ್ನು ಕಾಣುತ್ತಿರುತ್ತೇವೆ. ಸಮಸ್ಯೆ ಪರಿಹರಿಸುವಲ್ಲಿ ಇವು ಸ್ವಲ್ಪ ಮಟ್ಟಿಗೆ ನೆರವಾಗುತ್ತವೆ. ಪೂರ್ಣ ಯಶಸ್ವಿಯೆನಿಸಬೇಕೆಂದರೆ ಸ್ವೀಕೃತವಾದ ಎಲ್ಲಾ ಮನವಿಗಳೂ ತಾರ್ಕಿಕ ಅಂತ್ಯ ಕಾಣುವವರೆಗೆ ಅದನ್ನು ಸಮರ್ಥವಾಗಿ ಪರಿಶೀಲಿಸುವ ಕೆಲಸವಾಗಬೇಕು. ಸ್ಪಂದನಶೀಲ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರೆ ಇವು ಪ್ರಯೋಜನಕಾರಿ. ಆದರೆ ಇಂದಿನ ಭ್ರಷ್ಠ ವ್ಯವಸ್ಥೆಯಲ್ಲಿ ಸ್ಪಂದನಶೀಲ ಅಧಿಕಾರಿಗಳಿಗಿಂತ ತಾವು ಹೇಳಿದಂತೆ ಕೇಳುವ, ತಮ್ಮ ಹಿಂಬಾಲಕರಂತೆ ವರ್ತಿಸುವ ಅಧಿಕಾರಿಗಳನ್ನು ತಮ್ಮ ಕ್ಷೇತ್ರಗಳಲ್ಲಿ ನೇಮಕವಾಗುವಂತೆ ನೋಡಿಕೊಳ್ಳುವ ಜನಪ್ರತಿನಿಧಿಗಳೇ ಜಾಸ್ತಿ. ಹೀಗಾದಾಗ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳಿಗಿಂತ ರಾಜಕಾರಣಿಗಳ ಬಳಿಗೇ ಹೋಗುತ್ತಾರೆ. ಅವರ ಆಣತಿಯಂತೆ ಕೆಲಸ ಆಗುವುದೋ, ಬಿಡುವುದೋ ನಿರ್ಧರಿತವಾಗುತ್ತದೆ. ಇದು ನಿಜಕ್ಕೂ ಒಳ್ಳೆಯ ಸ್ಥಿತಿಯಲ್ಲ. ಆಳುವ ಪಕ್ಷದ ರಾಜಕಾರಣಿಗಳ ಮಾತು ಕೇಳದ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುತ್ತದೆ. ರಾಜಕಾರಣಿಗಳು ತಮ್ಮ ಸ್ಥಾನ ಭದ್ರ ಮಾಡಿಕೊಳ್ಳಲು ಮಾಡುವ ಮೊದಲ ಕೆಲಸವೆಂದರೆ ತಮಗೆ ಬೇಕಾದ ಮತ್ತು ನಿಷ್ಠರಾದ ಅಧಿಕಾರಿಗಳು ಮತ್ತು ನೌಕರರು ತಮ್ಮ ಕ್ಷೇತ್ರದಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿ ಇರುವಂತೆ ನೋಡಿಕೊಳ್ಳುವುದು. ಹೀಗಾದಾಗ ರಾಜಕಾರಣಿಗಳನ್ನು ತಾತ್ವಿಕವಾಗಿ ವಿರೋಧಿಸುವ ಜನರ ಕೆಲಸಗಳು ಆಗುವುದೇ ಇಲ್ಲ. ಈ ವ್ಯವಸ್ಥೆ ಸರಿಯಾದರೆ ಮಾತ್ರ ಬದಲಾವಣೆ  ನಿರೀಕ್ಷಿಸಲು ಸಾಧ್ಯ. ಚುನಾವಣೆಯಲ್ಲಿ ಆ ರಾಜಕಾರಣಿ ಸೋತು ಹೋದರೆ ಅಧಿಕಾರಿಗಳು, ನೌಕರರೂ ಸಹ ವರ್ಗಾವಣೆ ಭೀತಿ ಎದುರಿಸುತ್ತಾರೆ. ಇಂತಹ ಕೆಟ್ಟ ವ್ಯವಸ್ಥೆಯಿಂದಾಗಿ ನೌಕರಶಾಹಿ ಕೂಡಾ ಗೆದ್ದೆತ್ತಿನ ಬಾಲ ಹಿಡಿಯುವ, ಅಧಿಕಾರಾರೂಢರನ್ನು ಓಲೈಸುವ ಅಭ್ಯಾಸ ಬೆಳೆಸಿಕೊಂಡಿರುವುದನ್ನೂ ಕಾಣುತ್ತಿದ್ದೇವೆ. ನಿಯತ್ತಿನ ಮತ್ತು ದಕ್ಷ ಅಧಿಕಾರಿಗಳು ಮಾತ್ರ ಬಲಿಪಶುಗಳಾಗುತ್ತಾರೆ. ವರ್ಗಾವಣೆ ಮಾಡಲು ನೀತಿ-ನಿಯಮಾವಳಿಗಳಿದ್ದರೂ ಅವೆಲ್ಲವನ್ನೂ ಗಾಳಿಗೆ ತೂರಲಾಗುತ್ತದೆ. ನನ್ನ ಸೇವಾವದಿಯಲ್ಲಿ ೨೬ ವರ್ಗಾವಣೆಗಳನ್ನು ನಾನು ಕಾಣಬೇಕಾಯಿತು. ಅವುಗಳಲ್ಲಿ ರಾಜಕಾರಣಿಗಳ ಕೈವಾಡದ ವರ್ಗಾವಣೆಗಳದೇ ಸಿಂಹಪಾಲು. ಅವಧಿ ಪೂರ್ವ ವರ್ಗಾವಣೆಗಳ ನಿಯಂತ್ರಣ ಮಾಡುವ ಇಚ್ಛಾಶಕ್ತಿ ಆಳುವವರಿಗೆ ಬರಬೇಕು. ಆಳುವವರನ್ನು ನಿಯಂತ್ರಿಸುವ ಕೆಲಸ ಜಾಗೃತ ಜನರು ಮಾಡಬೇಕು. ಅಲ್ಲಿಯವರೆಗೆ ಇದನ್ನು ಸಹಿಸಿಕೊಳ್ಳಬೇಕು.
     ಒಂದು ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ತಮ್ಮ ಇಲಾಖೆಯಿಂದ ಮಾಡಿದ ಕೆಲಸಗಳು, ಸಾಧನೆಗಳನ್ನು ವಿವರಿಸುತ್ತಾ, ತಾವು ಎಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದೇವೆಂದು ಹೆಮ್ಮೆಯಿಂದ ಹೇಳುತ್ತಿದ್ದರು. ಆಗ ಒಬ್ಬ ವಯಸ್ಸಾದ ಮಹಿಳೆ ಎದ್ದು ನಿಂತು ತನಗೂ ಮಾತನಾಡಲು ಅವಕಾಶ ಕೊಡಬೇಕೆಂದು ಕೋರಿದಳು. ಧ್ವನಿವರ್ಧಕದ ಮುಂದೆ ನಿಂತ ಆ ಮಹಿಳೆ ಹೇಳಿದ್ದಿಷ್ಟು: "ನೀವು ಜಂಬ ಪಡಬೇಕಿಲ್ಲ. ನೀವೆಲ್ಲರೂ ಸಮಾಜದಿಂದ ಉಪಕಾರ ಪಡೆದವರು. ಸಮಾಜದಿಂದ ನೀವು ಸಾಲ ಪಡೆದಿದ್ದೀರಿ. ಸಮಾಜದ ಸಹಾಯದಿಂದಲೇ ನೀವು ಈ ಹುದ್ದೆಗಳಲ್ಲಿದ್ದೀರಿ. ನೀವು ಈಗ ಮಾಡುತ್ತಿರುವುದು ನೀವು ಪಡೆದಿರುವ ಸಾಲದ ಬಡ್ಡಿ ಕಟ್ಟುತ್ತಿರುವುದು ಅಷ್ಟೆ. ಅಸಲು ತೀರಿಸುವುದು ಇನ್ನೂ ಬಾಕಿ ಇದೆ." ಎಷ್ಟು ನಿಜ! ಅಧಿಕಾರಿಗಳು, ಆಳುವವರು ಈ ಮಾತನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. 
-ಕ.ವೆಂ.ನಾಗರಾಜ್.
***************
28.5.2014ರ ಜನಹಿತ ಪತ್ರಿಕೆಯಲ್ಲಿ ಪ್ರಕಟಿತ.
    

ಶುಕ್ರವಾರ, ಜೂನ್ 6, 2014

ಅಭಿವೃದ್ಧಿ ಕಾರ್ಯಗಳು ಮತ್ತು ಜನಜಾಗೃತಿ

     ಎಲ್ಲಾ ರಾಜಕೀಯ ಪಕ್ಷಗಳ ನಾಯಕರುಗಳೂ ತಮ್ಮ ಅಧಿಕಾರದ ಅವಧಿಯಲ್ಲಿ ಹಾಗೆ ಮಾಡಿದೆವು, ಹೀಗೆ ಮಾಡಿದೆವು, ಇಷ್ಟೊಂದು ಅಭಿವೃದ್ಧಿ ಸಾಧಿಸಿದೆವು ಎಂದು ಕೊಚ್ಚಿಕೊಳ್ಳುತ್ತಲೇ ಇರುತ್ತಾರೆ. ದೇಶದ, ರಾಜ್ಯದ ಅಭಿವೃದ್ಧಿ ಮಾಡುವ ಸಲುವಾಗಿಯೇ ಅವರು ಅಧಿಕಾರಕ್ಕೆ ಬಂದದ್ದು, ಅದು ತಮ್ಮ ಕರ್ತವ್ಯ ಎಂಬುದನ್ನು ಮರೆಯುತ್ತಾರೆ. ಇಷ್ಟಕ್ಕೂ ಆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಜನರ ಹಣದಿಂದಲೇ ಹೊರತು, ಪಕ್ಷದ ಅಥವ ನಾಯಕರುಗಳ ಅಥವ ಸ್ವಂತ ಹಣದಿಂದಲ್ಲ ಅಲ್ಲವೇ? ಜನರ ಅಭಿವೃದ್ಧಿಯ ಸಲುವಾಗಿ ಮಾಡಲೇಬೇಕಾದ ಕಾರ್ಯಕ್ರಮಗಳನ್ನು ತಮ್ಮದೇ ಕಾರ್ಯಕ್ರಮ, ತಮ್ಮ ಪಕ್ಷದ್ದೇ ಕಾರ್ಯಕ್ರಮ ಎಂದು ಬಿಂಬಿಸುವ ಪರಂಪರೆ ಪ್ರಧಾನಮಂತ್ರಿಯಾಗಿದ್ದ ದಿ. ಶ್ರೀಮತಿ ಇಂದಿರಾಗಾಂಧಿಯವರ ಅಧಿಕಾರಾವಧಿಯಿಂದ ವಿಜೃಂಭಿತವಾಗಲಾರಂಭವಾಗಿ ಈಗ ಆ ಪದ್ಧತಿ ಉತ್ತುಂಗ ಸ್ಥಿತಿಗೆ ತಲುಪಿದೆ. ದೇಶ ಅಭಿವೃದ್ಧಿಯ ಬದಲಿಗೆ ಅಧೋಗತಿಗೆ ತಲುಪುತ್ತಿದೆಯೇನೋ ಎಂದು ಅನ್ನಿಸುತ್ತಿದೆ. ವಿವಿಧ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಘೋಷಿಸುವ ಕಾರ್ಯಕ್ರಮಗಳನ್ನು ಅಧಿಕಾರಕ್ಕೆ ಬಂದ ನಂತರದಲ್ಲಿ ತಮ್ಮ ನೇತಾರರುಗಳ ಹೆಸರಿನಲ್ಲಿ ಜಾರಿಗಳಿಸಲು ಪ್ರಾರಂಭಿಸಿದವು. ಹಿಂದಿದ್ದ ಯೋಜನೆ, ಕಾರ್ಯಕ್ರಮಗಳನ್ನೇ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಮಾಡಿ ತಮ್ಮದೇ ಕಾರ್ಯಕ್ರಮವೆಂಬಂತೆ ಬಿಂಬಿಸತೊಡಗಿದವು. ಇಂದು ಇಂದಿರಾಗಾಂಧಿ ಮತ್ತು ರಾಜೀವಗಾಂಧಿಯವರ ಹೆಸರಿನಲ್ಲಿ ದೇಶದಲ್ಲಿ ಎಷ್ಟು ಸರ್ಕಾರಿ ಸಂಸ್ಥೆಗಳು, ಯೋಜನೆಗಳು, ಕಟ್ಟಡಗಳು ಇವೆಯೋ ಅದರ ಲೆಕ್ಕ ಯಾರಿಗೂ ತಿಳಿದಿರಲಾರದು. ಕಾಂಗ್ರೆಸ್ಸೇತರ ಸರ್ಕಾರಗಳ ಕಥೆಯೂ ಇದೇ. ರಾಜ್ಯ ಸರ್ಕಾರಗಳೂ ಕೇಂದ್ರ ಸರ್ಕಾರದ ಹಿರಿಯಕ್ಕನ ಚಾಳಿಯನ್ನೇ ಮುಂದುವರೆಸಿಕೊಂಡು ಬರುತ್ತಿವೆ. ಅಭಿವೃದ್ಧಿ ಕಾರ್ಯಗಳನ್ನು ತಮ್ಮದೇ ಕಾರ್ಯಕ್ರಮವೆಂಬಂತೆ ಚುನಾವಣೆಯಲ್ಲಿ ಮತಗಳಿಕೆಯ ದೃಷ್ಟಿಯಿಂದ ಪತ್ರಿಕೆಗಳಲ್ಲಿ, ದೃಷ್ಯಮಾಧ್ಯಮಗಳಲ್ಲಿ ಅಬ್ಬರದ ಪ್ರಚಾರ ಮಾಡುವ ಸಲುವಾಗಿಯೇ ವೆಚ್ಚ ಮಾಡುವ ಕೋಟಿ ಕೋಟಿ ಸರ್ಕಾರದ ಹಣದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು. ಜನಸಾಮಾನ್ಯನ ಪ್ರಾಥಮಿಕ ಅವಶ್ಯಕತೆಗಳನ್ನು ಪೂರೈಸುವುದಾದರೂ, ಸಂವಿಧಾನ ಬದ್ಧ ಕರ್ತವ್ಯಗಳನ್ನು ನಿರ್ವಹಿಸುವುದಾದರೂ ಅವುಗಳಿಗೆ ಪಕ್ಷಗಳ ಸಾಧನೆಯೆಂಬಂತೆ ಬಿಂಬಿಸುವ ಪ್ರವೃತ್ತಿ ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.
     ಜನಸಾಮಾನ್ಯರ ಪ್ರಾಥಮಿಕ ಅಗತ್ಯತೆಗಳಾದ ಕುಡಿಯುವ ನೀರು ಒದಗಿಸುವುದು, ಉತ್ತಮ ಶಿಕ್ಷಣ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳುವುದು, ಮೂಲಭೂತ ಸೌಕರ್ಯಗಳಾದ ಸಂಪರ್ಕ ರಸ್ತೆಗಳು, ಚರಂಡಿಗಳ ನಿರ್ಮಾಣ ಮತ್ತು ನಿವಃಹಣೆ, ಉತ್ತಮ ಆರೋಗ್ಯ ಪಾಲನೆ ಮತ್ತು ಸುಯೋಗ್ಯ ಚಿಕಿತ್ಸಾ ವ್ಯವಸ್ಥೆ, ಇತ್ಯಾದಿ ಹತ್ತು ಹಲವು ಪ್ರಾಥಮಿಕ ಅಂಶಗಳನ್ನು ಮುಂದಿಟ್ಟುಕೊಂಡು ಎಲ್ಲಾ ರಾಜಕೀಯ ಪಕ್ಷಗಳವರೂ ಒಟ್ಟಾಗಿ ದೇಶಕ್ಕೆ ಒಂದು ಸಾಮಾನ್ಯ ಕಾರ್ಯಕ್ರಮ ರೂಪಿಸಬೇಕು. ಯಾವುದೇ ಪಕ್ಷದ ಸರ್ಕಾರ ಬಂದರೂ ಈ ಸಾಮಾನ್ಯ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕಾದುದು ಅವುಗಳ ಮೂಲಭೂತ ಜವಾಬ್ದಾರಿಯಾಗಬೇಕು. ಈ ಕಾರ್ಯಕ್ರಮಗಳನ್ನು ಬದಲಾವಣೆ ಮಾಡಿ ಕಾಂಗ್ರೆಸ್ ಕಾರ್ಯಕ್ರಮ, ಬಿಜೆಪಿ ಕಾರ್ಯಕ್ರಮ, ಕಮ್ಯುನಿಸ್ಟ್ ಕಾರ್ಯಕ್ರಮ ಎಂದೆಲ್ಲಾ ಹೇಳಬಾರದು. ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರುಗಳು ಈ ಸಾಮಾನ್ಯ ಕಾರ್ಯಕ್ರಮಗಳಿಗೆ ಬದ್ಧರಾಗಿರುತ್ತೇವೆಂದು ಸಹಿ ಮಾಡಬೇಕು. ನಮ್ಮ ಚುನಾವಣಾ ಆಯೋಗ ಇದನ್ನು ಏಕೆ ಕಡ್ಡಾಯ ಮಾಡಬಾರದು? ಚುನಾವಣಾ ಸಮಯಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಯಂತಹ ಪ್ರಕರಣಗಳು ಆಗ ಗಣನೀಯವಾಗಿ ಕಡಿಮೆಯಾದಾವು. ಜನರನ್ನು ಸೋಮಾರಿಗಳನ್ನಾಗಿಸುವ ಅಗ್ಗದ ಕಾರ್ಯಕ್ರಮಗಳಿಗೆ ಕಡಿವಾಣ ಬೀಳಬೇಕು. ಇಂತಹ ಚುನಾವಣೆಯಲ್ಲಿ ಮತಗಳಿಕೆ ಉದ್ದೇಶದಿಂದ ಸರ್ಕಾರದ ಹಣದಲ್ಲಿ ಜಾರಿಗೆ ತರುವ ಅಗ್ಗದ ಜನಪ್ರಿಯ ಕಾರ್ಯಕ್ರಮಗಳಿಂದ ದೇಶದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುವುದಲ್ಲದೆ, ರೂಪಾಯ ಮೌಲ್ಯ ಕುಸಿಯುವುದಕ್ಕೂ ಕಾರಣವಾಗುತ್ತದೆ. ಒಂದು ವೇಳೆ ತಮ್ಮದೇ ಆದ, ತಮ್ಮ ಪಕ್ಷದ್ದೇ ಆದ ಹೊಸದಾದ, ಜನಸಾಮಾನ್ಯರ ಮೇಲೆ ಪರೋಕ್ಷ ಅಥವ ಅಪರೋಕ್ಷ ಆರ್ಥಿಕ ಹೊರೆ ಬೀಳುವಂತಹ ಕಾರ್ಯಕ್ರಮಗಳು, ಯೋಜನೆಗಳನ್ನು ಮಾಡಬಯಸಿದರೆ ರಾಜಕೀಯ ಪಕ್ಷಗಳು, ರಾಜಕೀಯ ನೇತಾರರು ಅವರದೇ ಹಣ ಬಳಸಿ ಮಾಡಲಿ ಮತ್ತು ಅವರ ಹೆಸರುಗಳನ್ನೇ ಬಳಸಲಿ.
     ಯಾವುದೇ ಒಬ್ಬ ವ್ಯಕ್ತಿ ಹಳ್ಳಿಯೊಂದರಲ್ಲಿ ಸಾಯುವ ಸ್ಥಿತಿಯಲ್ಲಿದ್ದಾನೆ ಎಂದರೆ ಅವನನ್ನು ರಕ್ಷಿಸುವ ಹೊಣೆ ಸರ್ಕಾರದ್ದಾಗಿರುತ್ತದೆ. ಅವನು ಕಾಂಗ್ರೆಸ್ ಪಕ್ಷದವನು, ಬಿಜೆಪಿಯವನು, ಕಮ್ಯೂನಿಸ್ಟ್, ಸಮಾಜವಾದಿ ಪಕ್ಷದವನು, ಆ ಜಾತಿಯವನು, ಈ ಧರ್ಮದವನು, ನಮಗೆ ಮತ ನೀಡಿದವನು/ನೀಡದವನು,  ಇತ್ಯಾದಿ ನೋಡಬೇಕೇ? ಉತ್ತಮ ನೈರ್ಮಲ್ಯ ಪಾಲನೆಗೂ, ಒಳ್ಳೆಯ ಸಂಪರ್ಕ ಸಾಧನಗಳನ್ನು ಕಲ್ಪಿಸುವುದಕ್ಕೂ ರಾಜಕೀಯ ಬೆರೆಸಬೇಕೇ? ಕೆಲವು ಮಕ್ಕಳು ಕಾರುಗಳಲ್ಲಿ ಶಾಲೆಗಳಿಗೆ ಹೋಗುತ್ತಿದ್ದರೆ, ಕೆಲವರು ಶಿಕ್ಷಣ ವಂಚಿತರಾಗಿ ತುತ್ತು ಕೂಳಿಗೂ ಪರದಾಡುವ ಸ್ಥಿತಿಯಲ್ಲಿರಬೇಕೇ? ಹೆಚ್ಚಿನ ಆರೋಗ್ಯದ ಸಮಸ್ಯೆಗಳು ಉಂಟಾಗುವುದು ಒಳ್ಳೆಯ ಕುಡಿಯುವ ನೀರಿನ ಪೂರೈಕೆಯ ಕೊರತೆಯಿಂದಲ್ಲವೇ? ಕುಡಿಯುವ ನೀರಿನ ಪೂರೈಕೆ ಒದಗಿಸುವುದು ಎಲ್ಲಾ ಸರ್ಕಾರಗಳ ಕರ್ತವ್ಯವಲ್ಲವೇ? ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಮತ  ನೀಡಿದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗುವುದೆಂದು ಹೇಳಿ ಮತ ಕೇಳುವುದು ಎಷ್ಟು ಸರಿ? ನೈರ್ಮಲ್ಯದ ಸಮಸ್ಯೆಗೆ ಪರಿಹಾರ ರೂಪಿಸುವುದಕ್ಕೆ ಯಾವ ಕಾನೂನು ಬೇಕು? ಯಾವ ಕ್ರಾಂತಿ ಆಗಬೇಕು? ಮಾಡಬೇಕೆಂಬ ಮನಸ್ಸು ಇದ್ದರೆ ಸಾಕಲ್ಲವೇ? ಇಂತಹ ಸಂಗತಿಗಳನ್ನು ಸೇರಿಸಿ ಒಂದು ಸಾಮಾನ್ಯ ರಾಷ್ಟ್ರೀಯ ಕಾರ್ಯಕ್ರಮ ರೂಪಿಸಲು ಒತ್ತಡ ತರಬೇಕಿದೆ. ರಾಜಕೀಯ ಧುರೀಣರ, ಸರ್ಕಾರದ ಹಣ ಬಳಸಿ ಜಾರಿಯಾಗುವ ವಿವಿಧ ಸರ್ಕಾರಿ ಯೋಜನೆಗಳಿಗೆ ಪಕ್ಷದ ನೇತಾರರುಗಳ ಹೆಸರಿಡುವುದನ್ನು ಮೊದಲು ನಿಷೇಧಿಸಬೇಕು. ಈಗ ಅಂತಹ ರಾಜಕೀಯ ನಾಯಕರುಗಳ ಹೆಸರಿನಲ್ಲಿ ಇರುವ ಸರ್ಕಾರೀ ಸಂಸ್ಥೆಗಳ ಹೆಸರುಗಳಲ್ಲಿ ಸ್ವಾತಂತ್ರ್ಯಾನಂತರದ ರಾಜಕೀಯ ನಾಯಕರ ಹೆಸರುಗಳನ್ನು ಕಿತ್ತುಹಾಕಬೇಕು. ಚುನಾವಣಾ ಆಯೋಗ ಮತ್ತು ಜನಸಾಮಾನ್ಯರ ಹಿತ ಬಯಸುವ ನೇತಾರರು ಇತ್ತ ಗಮನ ಹರಿಸಬೇಕು.
     ಅಗ್ಗದ ಪ್ರಚಾರ ಪಡೆದುಕೊಳ್ಳುವ ಪ್ರವೃತ್ತಿ ಇಂದು ಯಾವ ಹಂತಕ್ಕೆ ತಲುಪಿದೆಯೆಂದರೆ ಸಂಸದರ, ಶಾಸಕರ ಹೆಸರಿನಲ್ಲಿ ಸರ್ಕಾರಿ ಅನುದಾನಗಳು ಬಿಡುಗಡೆಯಾಗುತ್ತವೆ. ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿಯೂ ಕೂಡ ಸದಸ್ಯರ ಹೆಸರುಗಳಲ್ಲಿ, ಅವರುಗಳು ಬಯಸಿದಂತೆ ಅನುದಾನಗಳು ಬಿಡುಗಡೆಯಾಗುತ್ತವೆಯೇ ಹೊರತು ಜನರ ಅಗತ್ಯ, ಅವಶ್ಯಕತೆಗಳಿಗನುಸಾರವಾಗಿ ಅಲ್ಲ. ಅದರಲ್ಲೂ ರಾಜಕೀಯ ತಾರತಮ್ಯವಿರುತ್ತದೆ. ಅವರುಗಳು ಬಯಸುವ ಕಾರ್ಯಕ್ರಮಗಳಿಗೆ ಅವುಗಳು ಬಳಕೆಯಾಗುತ್ತಿವೆ. ಸಂಸದರ, ಶಾಸಕರ ಹೆಸರುಗಳು ಸರ್ಕಾರಿ ಹಣದಿಂದ ಕಟ್ಟಲಾದ ಬಸ್ ನಿಲ್ದಾಣಗಳು, ಕಟ್ಟಡಗಳು, ಮುಂತಾದುವುಗಳ ಮೇಲೆ ರಾರಾಜಿಸುತ್ತವೆ. ಸಮುದಾಯ ಭವನದ ಹೆಸರಿನಲ್ಲಿ ಕಟ್ಟುವ ಕಟ್ಟಡಗಳಿಗೂ ಸಹ ಅಂತಹ ಹಣ ಹೋಗುತ್ತಿದೆ. ನಂತರದಲ್ಲಿ ಅವು ಕಲ್ಯಾಣ ಮಂಟಪಗಳಾಗಿ ಖಾಸಗಿಯವರು ಹಣ ಮಾಡಿಕೊಳ್ಳುವುದರಲ್ಲಿ ಅಂತ್ಯವಾಗುತ್ತಿದೆ. ಈ ರೀತಿಯಲ್ಲಿ ಸರ್ಕಾರಿ ಹಣ ಸಂಬಂಧಿಸಿದ ಸಂಸದರು, ಶಾಸಕರುಗಳು ತಮಗೆ ಮತ ನೀಡಿದವರು, ತಮ್ಮ ಬೆಂಬಲಿಗರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಜಾರಿಗೊಳಿಸುವ ಕಾಮಗಾರಿಗಳಿಗೆ ಬಳಕೆಯಾಗುತ್ತವೆ. ತಮಗೆ ಮತ ನೀಡದವರ ಮತ್ತು ವಿರೋಧಿಪಕ್ಷದವರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಆಗುವುದೇ ಇಲ್ಲ. ಇದು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸಲ್ಲದ ನಡೆಯಾಗುತ್ತದೆ. ಇವುಗಳನ್ನು ಸಾಮಾನ್ಯ ಜನರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡುವ ಕಾರ್ಯಕ್ರಮಗಳು ಎನ್ನಲಾಗದು. ಚುನಾಯಿತ ಪ್ರತಿನಿಧಿಗಳು ಹಣ ಮಾಡುವ ಸಲುವಾಗಿಯೇ ರಾಜಕೀಯ ಮಾಡುತ್ತಿರುವುದು ಮತ್ತು ಕೇವಲ ರಾಜಕೀಯ ಮಾಡಿಕೊಂಡಿದ್ದರೂ ಅವರ ಸಂಪತ್ತು ವೃದ್ಧಿಯಾಗುತ್ತಿರುವುದು ಜನಸಾಮಾನ್ಯರ ಕಣ್ಣಿಗೆ ಕಾಣುತ್ತಿರುವ ಸತ್ಯ. ಕೇವಲ ಮತಗಳಿಕೆ ದೃಷ್ಟಿಯಿಂದ ಅಗ್ಗದ ಜನಪ್ರಿಯ ಕಾರ್ಯಕ್ರಮಗಳು ಜಾರಿಯಾಗುತ್ತಿದ್ದು, ಅವುಗಳಿಂದ ಸರ್ಕಾರದ ಬೊಕ್ಕಸದಿಂದ ಜನಸಾಮಾನ್ಯರ ಕೋಟಿಗಟ್ಟಲೆ ಹಣ ಲೂಟಿಯಾಗುತ್ತಿದೆ. ಇಂತಹ ಕಾರ್ಯಕ್ರಮಗಳು ನೈಜ ಫಲಾನುಭವಿಗಳಿಗೆ ತಲುಪುವುದರಲ್ಲಿ ಎಷ್ಟರಮಟ್ಟಿಗೆ ಸಫಲವಾಗುತ್ತವೆ ಎಂಬುದು ಎಲ್ಲರಿಗೂ ತಿಳಿದದ್ದೇ.
     ದೇಶ ಇಂದು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ತಾಯಿಬೇರು ಭ್ರಷ್ಠಾಚಾರ. ಇದನ್ನು ತಡೆಗಟ್ಟಿದರೆ ಇತರ ಹಲವಾರು ಸಮಸ್ಯೆಗಳು ತಾವಾಗಿಯೇ ಕಣ್ಮರೆಯಾಗುತ್ತವೆ. ಜಾರಿಯಾಗುತ್ತಿರುವ ಅಭಿವೃದ್ಧಿ ಕಾರ್ಯಗಳೂ ಅಕ್ರಮ ಹಣ ಮಾಡುವ ಸಾಧನಗಳಾಗಿವೆ. ಪ್ರತಿ ಹಂತದಲ್ಲಿ ಹಣ ಸೋರಿಕೆಯಾಗಿ ಸಾಮಾನ್ಯ ಜನರವರೆಗೆ ತಲುಪುವ ಭಾಗ ಎಷ್ಟು ಎಂದು ಪರಿಶೀಲಿಸಿದರೆ ಗಾಬರಿಯಾಗುವ ಅಂಶಗಳು ಹೊರಬೀಳುತ್ತವೆ. ಸಾಮಾನ್ಯ ಜನರು ನಡೆಯುವ ಅಭಿವೃದ್ಧಿ ಕಾರ್ಯಗಳು ಮತ್ತು ಯೋಜನೆಗಳು ಮಂಜೂರಾಗಿ ಪೂರ್ಣವಾಗುವವರೆಗೆ ಗಮನಿಸಿ ಅವು ಸರಿಯಾದ ರೀತಿಯಲ್ಲಿ ಜಾರಿಯಾಗುತ್ತಿವೆಯೇ ಎಂದು ಗಮನಿಸುವ ಅಭ್ಯಾಸ ಬೆಳೆಸಿಕೊಂಡರೆ ಮಾತ್ರ ಏನಾದರೂ ಬದಲಾವಣೆ ಸಾಧ್ಯ. ನಮ್ಮ ಜನರು ಎಷ್ಟರಮಟ್ಟಿಗೆ ಜಾಗೃತರಾಗಿದ್ದಾರೆ ಎಂಬುದಕ್ಕೆ ಒಂದು ಪುಟ್ಟ ಉದಾಹರಣೆ ಸಾಕು. ಹಾಸನದ ಸ್ಟೇಡಿಯಮ್ಮಿನಲ್ಲಿ ಹಲವಾರು ಲಕ್ಷಗಳ ವೆಚ್ಚದಲ್ಲಿ ಒಂದು ಸುಂದರವಾದ ಸಾರ್ವಜನಿಕ ಶೌಚಾಲಯದ ಕಟ್ಟಡ ನಿರ್ಮಾಣವಾಗಿ ಹಲವಾರು ವರ್ಷಗಳೇ ಸಂದಿವೆ. ಪ್ರತಿನಿತ್ಯ ಸ್ಟೇಡಿಯಮ್ಮಿಗೆ ನೂರಾರು, ಕೆಲವೊಮ್ಮೆ ಸಾವಿರಾರು ಜನರು ಬಂದು ಹೋಗುತ್ತಾರೆ. ಅವರ ಪೈಕಿ ಯಾರಾದರೂ ಈ ಶೌಚಾಲಯಕ್ಕೆ ಎಷ್ಟು ವೆಚ್ಚ ಮಾಡಿದ್ದಾರೆ, ಇದನ್ನು ಸಾರ್ವಜನಿಕರ ಉಪಯೋಗಕ್ಕೆ ಇದುವರೆವಿಗೂ ಏಕೆ ಬಿಟ್ಟುಕೊಟ್ಟಿಲ್ಲ ಎಂದು ಸ್ಟೇಡಿಯಮ್ಮಿನ ಕಟ್ಟಡದಲ್ಲೇ ಇರುವ ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದ್ದಾರೆಯೇ? ಈ ಸುಂದರ ಶೌಚಾಲಯಕ್ಕಾಗಿ ಮಾಡಿದ ವೆಚ್ಚ ವ್ಯರ್ಥವೆಂದು ಯಾರಿಗಾದರೂ ಅನ್ನಿಸಿದೆಯೇ?
     ಶ್ರೀ ಎಸ್.ಎಮ್. ಕೃಷ್ಣರವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಜಾರಿ ಮಾಡಿದ ಜಲಸಂವರ್ಧಿನಿ ಯೋಜನೆಯನ್ನು ಉದ್ಘಾಟಿಸಿದ್ದ ಶ್ರೀ ಅಣ್ಣಾ ಹಜಾರೆಯವರು ಆ ಸಂದರ್ಭದಲ್ಲಿ ಮಾತನಾಡುತ್ತಾ, "ಆಡಳಿತದಲ್ಲಿ ಜನರು ಪಾಲುಗೊಳ್ಳುವುದು ಎಂದರೆ ಏನು?" ಎಂದು ಪ್ರಶ್ನಿಸಿ ತಾವೇ ಕೊಟ್ಟಿದ್ದ ಉತ್ತರವೆಂದರೆ, "ಆಡಳಿತದಲ್ಲಿ ಜನರು ಪಾಲುಗೊಳ್ಳುವುದು ಅನ್ನುವುದು ಸರಿಯಲ್ಲ; ಜನರ ಕಾರ್ಯಕ್ರಮದಲ್ಲಿ ಸರ್ಕಾರ ಪಾಲುಗೊಳ್ಳುವುದು ಅನ್ನಬೇಕು." ಎಷ್ಟು ಸತ್ಯ! ಹೀಗಾಗಬೇಕೆಂದರೆ ಜನರು ಜಾಗೃತರಾಗಿರಬೇಕು. ರಾಜಕೀಯ ನಾಯಕರುಗಳು ಜನರ 'ನಾಯಕ'ರಾಗದೆ, 'ಸೇವಕ'ರಾಗಬೇಕು. ಸರ್ವಸಮ್ಮತ, ಮೂಲಭೂತ ಅತ್ಯಗತ್ಯ ಜನಪರ ಕಾರ್ಯಕ್ರಮಗಳು ಯಾವುದೇ ರಾಜಕೀಯ ಪಕ್ಷದ, ನೇತಾರರ ಕಾರ್ಯಕ್ರಮಗಳೆನಿಸದೆ ರಾಷ್ಟ್ರೀಯ ಕಾರ್ಯಕ್ರಮಗಳೆನಿಸಬೇಕು. ಈ ಕುರಿತು ಜನಜಾಗೃತಿ ಮೂಡಿಸುವ ಕೆಲಸವನ್ನು ಎಲ್ಲಾ ಪ್ರಜ್ಞಾವಂತರು ಮಾಡಬೇಕಿದೆ.
-ಕ.ವೆಂ.ನಾಗರಾಜ್.
**************
ದಿ. 21.5.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ.