ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ನವೆಂಬರ್ 3, 2016

ಹುಚ್ಚರಾಯಸ್ವಾಮಿ ದೇವಾಲಯ, ಶಿಕಾರಿಪುರ


     ಬ್ರಿಟಿಷರೊಂದಿಗೆ ಸೆಣೆಸಾಡಿ ನದಿ ಹಾರಿ ತಪ್ಪಿಸಿಕೊಂಡಿದ್ದ ಧೊಂಡಿಯ ಶಿಕಾರಿಪುರದ ದೈವ ಹುಚ್ಚರಾಯಸ್ವಾಮಿಗೆ ನಮಿಸಿ ರಕ್ಷಿಸಲು ಕೋರಿಕೊಂಡಿದ್ದಲ್ಲದೆ, ತಾನು ತಪ್ಪಿಸಿಕೊಂಡು ಹೋಗಲು ಸಾಧ್ಯವಾದರೆ ತನ್ನ ಖಡ್ಗವನ್ನು ದೇವರಿಗೆ ಅರ್ಪಿಸುವುದಾಗಿ ಹರಕೆ ಹೊತ್ತಿದ್ದ. ಹರಕೆಯನ್ನು ತೀರಿಸುವ ಸಲುವಾಗಿ ಅರ್ಪಿಸಿದ್ದ ಖಡ್ಗ ಈಗಲೂ ದೇವಸ್ಥಾನದಲ್ಲಿದೆ. ಪ್ರಾಸಂಗಿಕವಾಗಿ ದೇವಸ್ಥಾನದ ಸ್ಥಳ ಪುರಾಣ, ಪ್ರಚಲಿತ ವಿಚಾರದ ಕುರಿತೂ ಪ್ರಸ್ತಾಪಿಸುವೆ. ಶಿಕಾರಿಪುರದ ತಹಸೀಲ್ದಾರ್ ಮತ್ತು ತಾಲೂಕು ದಂಡಾಧಿಕಾರಿಯಾಗಿ ಎರಡು ಅವಧಿಗಳಲ್ಲಿ ಕೆಲಸ ಮಾಡಿದ್ದರಿಂದ ಮುಜರಾಯಿ ಅಧಿಕಾರಿಯಾಗಿಯೂ ಈ ದೇವಸ್ಥಾನದ ಅಭಿವೃದ್ಧಿಗಾಗಿ ಕೆಲಸ ಮಾಡಿದ ಸದವಕಾಶವೂ ನನಗೆ ಸಿಕ್ಕಿದ್ದು ಪುಣ್ಯವಾಗಿದೆ. ಕೆಲಸ ಮಾಡಿದ ಅವಧಿಯಲ್ಲಿ ದೇವಸ್ಥಾನದ ಖಾತೆ ವಿವರ ಸ್ಥಳೀಯ ಪುರಸಭೆಯಲ್ಲಿ ಇಲ್ಲದಿದ್ದುದನ್ನು ಗಮನಿಸಿ ಹೊಸದಾಗಿ ಸರ್ವೆ ಮಾಡಿಸಿ ಖಾತೆ ವಿವರಗಳು ದಾಖಲಾಗುವಂತೆ ಮಾಡಿದ್ದು, ಒತ್ತುವರಿ ಮಾಡಿದ್ದವರನ್ನು ತೆರವುಗೊಳಿಸಿದ್ದು ಮತ್ತು ಹೊಸ ಒತ್ತುವರಿಗೆ ಅವಕಾಶವಿರದಂತೆ ಮಾಡಿದ್ದು ಹೇಳಿಕೊಳ್ಳಬಹುದಾದ ಸಂಗತಿಯಾಗಿದೆ. ಸಮೀಪದ ಹುಚ್ಚರಾಯ ಸ್ವಾಮಿಯ ಕೆರೆಯ ಅಭಿವೃದ್ಧಿ, ಉದ್ಯಾನವನ ನಿರ್ಮಾಣ ಮತ್ತು ಬೃಹತ್ ಈಶ್ವರನ ವಿಗ್ರಹ ಸ್ಥಾಪನೆಗೆ ಆಗ ರಾಜ್ಯದ ಉಪಮುಖ್ಯಮಂತ್ರಿ ಮತ್ತು ನಂತರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಶ್ರೀ ಯಡಿಯೂರಪ್ಪನವರು ಆಸಕ್ತಿ ವಹಿಸಿದ್ದುದನ್ನು ವಿಶೇಷವಾಗಿ ಉಲ್ಲೇಖಿಸಬೇಕು. ಆ ಅವಧಿಯಲ್ಲಿ ಈಗ ಈಶ್ವರನ ವಿಗ್ರಹವಿರುವ ಸ್ಥಳ ಮರಾಠ ಸಮಾಜದ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದ್ದು, ಅವರಿಗೆ ವಾರಸುದಾರರಿಲ್ಲದ ಪ್ರಯುಕ್ತ ಅದನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಕೆಲಸ ಆಗುವಂತೆ ಮಾಡಿದ್ದು ತಹಸೀಲ್ದಾರನಾಗಿ ನಾನು ಮಾಡಿದ್ದ ಕರ್ತವ್ಯವಾಗಿದ್ದರೂ ಈಗ ಆ ಸ್ಥಳ ಜನಾಕರ್ಷಣೆಯ ಕೇಂದ್ರವಾಗಿರುವುದು ನನಗೆ ಮುದ ನೀಡಿದ ಕೆಲಸವಾಗಿದೆ.
     ಸುಮಾರು 17ನೆಯ ಶತಮಾನಕ್ಕೆ ಸೇರಿದ ಈ ದೇವಸ್ಥಾನ ಈಗ ಜೀರ್ಣೋದ್ಧಾರಗೊಂಡು ಸುಂದರವಾಗಿ ಕಂಗೊಳಿಸಿದೆ. ವೀರಶೈವ ಮತದ ಹುಚ್ಚಪ್ಪಸ್ವಾಮಿ ಎಂಬುವರಿಂದ ನಿರ್ಮಾಣಗೊಂಡಿತೆನ್ನಲಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಕವಲೆದುರ್ಗ ಮಠದಿಂದ ಬಂದು ಶಿಕಾರಿಪುರದ ನೆಲವಾಗಿಲಿನಲ್ಲಿ ನೆಲೆಸಿದ್ದ ಹುಚ್ಚಪ್ಪಸ್ವಾಮಿ ಸ್ಥಳೀಯ ಬ್ರ್ರಾಹ್ಮಣ ಕುಟುಂಬಗಳೊಂದಿಗೆ ಸೌಹಾರ್ದ ಸಂಬಂಧ ಹೊಂದಿ ಬ್ರ್ರಾಹ್ಮಣ ದೀಕ್ಷೆ ಪಡೆದು ಮಠವೊಂದನ್ನು ಸ್ಥಾಪಿಸಿಕೊಂಡಿದ್ದನೆನ್ನಲಾಗಿದೆ. ಒಂದು ದಿನ ಹುಚ್ಚಪ್ಪಸ್ವಾಮಿಯ ಕನಸಿನಲ್ಲಿ ಹನುಮಂತ ದೇವರು ಕಾಣಿಸಿಕೊಂಡು ಊರಿನ ದೊಡ್ಡಕೆರೆಯಲ್ಲಿ ತನ್ನ ವಿಗ್ರಹವಿದ್ದು ಅದನ್ನು ಹೊರತೆಗೆದು ಪ್ರತಿಷ್ಠಾಪಿಸುವಂತೆ ಹೇಳಿದಂತೆ ಆಗುತ್ತದೆ. ಈ ವಿಷಯವನ್ನು ಹುಚ್ಚಪ್ಪಸ್ವಾಮಿ ಊರಿನ ಪ್ರಮುಖರಿಗೆ ತಿಳಿಸಲಾಗಿ ಕೆಲವರು ಅಪಹಾಸ್ಯ ಮಾಡಿ ನಕ್ಕರೂ, ಕೆಲವರಿಗೆ ಅದನ್ನು ಪರೀಕ್ಷಿಸುವ ಮನಸ್ಸಾಗುತ್ತದೆ. ಅವರು ಗ್ರಾಮಸ್ಥರ ನೆರವಿನೊಂದಿಗ ಹುಚ್ಚಪ್ಪಸ್ವಾಮಿ ಹೇಳಿದ ಸ್ಥಳದಲ್ಲಿ ಪರಿಶೀಲಿಸಿದಾಗ ಅಲ್ಲಿ ಕಲ್ಲಿನ ಬಾನಿಯೊಂದು ಮಗುಚಿಕೊಂಡಿರುವ ಸ್ಥಿತಿಯಲ್ಲಿರುವುದು ಕಂಡುಬರುತ್ತದೆ. ಅದನ್ನು ಮಗುಚಿ ನೋಡಿದಾಗ ಅಲ್ಲಿ ಮನೋಹರವಾದ ಆಂಜನೇಯನ ವಿಗ್ರಹ ಗೋಚರವಾಗುತ್ತದೆ. ಅದನ್ನು ಹೊರತೆಗೆದು ಎಲ್ಲಿ ಪ್ರತಿಷ್ಠಾಪಿಸಬೇಕು ಎಂಬ ಬಗ್ಗೆ ಚರ್ಚೆಯಾಗುತ್ತದೆ. ಹುಚ್ಚಪ್ಪಸ್ವಾಮಿಯವರ ಮಠದಲ್ಲೇ ಪ್ರತಿಷ್ಠಾಪಿಸಬೇಕೆಂದು ತೀರ್ಮಾನವಾದಾಗ ದೇವರಿಗೆ ತನ್ನ ಹೆಸರನ್ನೇ ಇಡುವುದಾದರೆ ಅದಕ್ಕೆ ಅವಕಾಶ ಕೊಡುವುದಾಗಿ ಅವರು ಹೇಳುತ್ತಾರೆ. ಹೀಗಾಗಿ ಹುಚ್ಚರಾಯಸ್ವಾಮಿ ಎಂದೇ ಆಂಜನೇಯ ಇಲ್ಲಿ ಹೆಸರಾಗಿದ್ದಾನೆ. ಸುಮಾರು ಆರು ಅಡಿ ಉದ್ದ, ನಾಲ್ಕು ಅಡಿ ಅಗಲ ಮತ್ತು ಆಳವಿರುವ ಕಲ್ಲಿನ ಬಾನಿಯನ್ನು ಈಗಲೂ ದೇವಸ್ಥಾನದಲ್ಲಿ ಕಾಣಬಹುದಾಗಿದೆ. ಈ ಬಾನಿಯನ್ನು ಸೂಕ್ತ ಸ್ಥಳದಲ್ಲಿ ಇಟ್ಟು ಸುತ್ತಲೂ ಸರಪಳಿ ಕಟಕಟೆ ನಿರ್ಮಿಸಿ ಅದಕ್ಕೆ ಹಾನಿಯಾಗದಂತೆ ಸಂರಕ್ಷಿಸಿಡುವುದು ಸೂಕ್ತವಾಗಿದೆ. ಹುಚ್ಚರಾಯ ಅನ್ನುವ ಹೆಸರು ಎಷ್ಟು ಜನಪ್ರಿಯವೆಂದರೆ ಈ ಹೆಸರನ್ನಿಟ್ಟುಕೊಂಡ ಬಹಳಷ್ಟು ಜನರು ಶಿಕಾರಿಪುರ ತಾಲ್ಲೂಕಿನಲ್ಲಿ ಕಾಣಸಿಗುತ್ತಾರೆ. 
     ಹುಚ್ಚರಾಯಸ್ವಾಮಿಯನ್ನು ಭ್ರಾಂತೇಶ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇಲ್ಲಿ ಇರುವ ವಿಗ್ರಹದ ಮೂಗು ಸಾಲಿಗ್ರಾಮ ಶಿಲೆಯದ್ದಾಗಿದೆ. ಇಲ್ಲಿ ಪ್ರಚಲಿತವಿರುವ ಸಂಗತಿಯೆಂದರೆ ಸಾಲಿಗ್ರಾಮ ಹೊಂದಿರುವ ಮೂರು ದೇವರ ದರ್ಶನ ಮಾಡಿದರೆ ಮನೋಭೀಷ್ಠಗಳು ನೆರವೇರುತ್ತವೆ ಎಂಬ ನಂಬಿಕೆ. ಶಿಕಾರಿಪುರದ ಭ್ರಾಂತೇಶ, ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿಯಲ್ಲಿರುವ ಕಾಂತೇಶ ಮತ್ತು ಧಾರವಾಡ ಜಿಲ್ಲೆಯ ಸಾತೇನಹಳ್ಳಿಯ ಶಾಂತೇಶರ ದರ್ಶನವನ್ನು ಒಂದೇ ದಿನ ಮಾಡಿದರೆ ಕಾಶಿಯಾತ್ರೆ ಮಾಡಿದಷ್ಟು ಪುಣ್ಯ ಸಿಗುತ್ತದೆಯೆಂದು ಜನರು ನಂಬುತ್ತಾರೆ. ವಿಶೇಷವೆಂದರೆ ಶಾಂತೇಶ ಮತ್ತು ಕಾಂತೇಶ ಸಹ ಆಂಜನೇಯನ ವಿಗ್ರಹಗಳೇ ಆಗಿದ್ದು ಅಲ್ಲಿನ ಸ್ಥಳಪುರಾಣಗಳೂ ಸಹ ಇದೇ ರೀತಿ ಇರುವುದೆನ್ನಲಾಗಿದೆ. ಶಿಕಾರಿಪುರದ ಭ್ರಾಂತೇಶನಿಗೆ ಮೂಗಿನಲ್ಲಿ ಸಾಲಿಗ್ರಾಮವಿದ್ದರೆ, ಕದರಮಂಡಲಗಿಯ ಕಾಂತೇಶನಿಗೆ ಕಣ್ಣುಗಳಲ್ಲಿ ಮತ್ತು ಸಾತೇನಹಳ್ಳಿಯ ಶಾಂತೇಶನಿಗೆ ಎದೆಯ ಮೇಲ್ಭಾಗದಲ್ಲಿ ಸಾಲಿಗ್ರಾಮ ಇದೆಯೆನ್ನಲಾಗಿದೆ. ಈ ಮೂರು ಸ್ಥಳಗಳು ದೂರದಲ್ಲಿದ್ದರೂ ಒಂದು ದಿನದಲ್ಲಿ ನೋಡಿಬರಲು ಅವಕಾಶವಿದ್ದು, ವಾಹನದ ವ್ಯವಸ್ಥೆ ಮಾಡಿಕೊಂಡು ಹೋಗಿಬರುವ ಭಕ್ತಾದಿಗಳ ಸಂಖ್ಯೆ ಕಡಿಮೆಯೇನಿಲ್ಲ. 
     ದಿನಾಂಕ 20.10.2016ರಂದು ಶಿಕಾರಿಪುರಕ್ಕೆ ಭೇಟಿ ನೀಡಿದ ಸಂದರ್ಭದ ಫೋಟೋಗಳಿವು.ನಿವೃತ್ತನಾಗಿ ಎಂಟು ವರ್ಷಗಳ ನಂತರದಲ್ಲೂ ರೆವಿನ್ಯೂ  ಇನ್ಸ್ ಪೆಕ್ಟರ್ ಮಂಜುನಾಥ್, ಕೃಷ್ನಮೂರ್ತಿ, ಕಛೇರಿಯ ಮತ್ತು ದೇವಸ್ಥಾನದ ಸಿಬ್ಬಂದಿ ತೋರಿದ ವಿಶ್ವಾಸಕ್ಕೆ ಮನತುಂಬಿಬಂದಿತು. ಹೊಸದಾಗಿ ಬಂದಿದ್ದ ತಹಸೀಲ್ದಾರ್ ಶ್ರೀ ಬಿ. ಶಿವಕುಮಾರರೂ ಧೊಂಡಿಯವಾಘನ ಕುರಿತು ಆಸಕ್ತಿ ತೋರಿಸಿದ್ದು ಸಂತಸವಾಯಿತು.
-ಕ.ವೆಂ.ನಾಗರಾಜ್. 
***************
ಈಗಿನ ತಹಸೀಲ್ದಾರ್ ಶ್ರೀ ಶಿವಕುಮಾರರೊಂದಿಗೆ ಧೊಂಡಿಯ ಕುರಿತು ಮಾತುಕತೆ



ಧೊಂಡಿಯವಾಘನ ಖಡ್ಗದೊಂದಿಗೆ


ದೇವಸ್ಥಾನದ ಆವರಣದಲ್ಲಿ 

ಅಭಿವೃದ್ಧಿಗೊಂಡ ಹುಚ್ಚರಾಯನಕೆರೆ ಆವರಣ
ಬೃಹತ ಶಿವನ ವಿಗ್ರಹ - ಇದರ ನಿರ್ಮಾಣದಲ್ಲಿ ನನ್ನ ಪಾಲೂ ಇದೆಯೆಂಬ ಹೆಮ್ಮೆ

ಶುಕ್ರವಾರ, ಅಕ್ಟೋಬರ್ 28, 2016

ಕೆಳದಿ ಚೆನ್ನಮ್ಮಾಜಿ ಮತ್ತು ಧೊಂಡಿಯವಾಘರನ್ನು ನೆನಪಿಸುವ ಚನ್ನಗಿರಿ

     ಚನ್ನಗಿರಿ - ಮೊದಲು ಶಿವಮೊಗ್ಗ ಜಿಲ್ಲೆಗೆ, ನಂತರದಲ್ಲಿ ಚಿತ್ರದುರ್ಗ ಜಿಲ್ಲೆಗೆ ಸೇರಿದ ತಾಲ್ಲೂಕಾಗಿದ್ದು ತದನಂತರದಲ್ಲಿ ಪ್ರಸ್ತುತ ದಾವಣಗೆರೆ ಜಿಲ್ಲೆಗೆ ಸೇರಿದ ಸಮೃದ್ಧ ತಾಲ್ಲೂಕು, ಐತಿಹಾಸಿಕವಾಗಿ ಮತ್ತು ರಾಜಕೀಯವಾಗಿ ಹೆಸರುವಾಸಿಯಾದ ತಾಲ್ಲೂಕು. 17ನೆಯ ಶತಮಾನದಲ್ಲಿ ಕೆಳದಿ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಚನ್ನಗಿರಿ ಅದಕ್ಕೂ ಮೊದಲು ಗಂಗರು, ಕಲ್ಯಾಣಿ ಚಾಲುಕ್ಯರು ಮತ್ತು ಪಾಂಡ್ಯರ ಆಳ್ವಿಕೆಗೆ ಒಳಪಟ್ಟಿತ್ತು. ಚನ್ನಗಿರಿಯ ಕೋಟೆಯ ಆವರಣದಲ್ಲಿ ಪ್ರಾಚ್ಯವಸ್ತು ಇಲಾಖೆಯವರು ಹಾಕಿರುವ ಫಲಕದಲ್ಲಿ ಈ ಪ್ರದೇಶದಲ್ಲಿ ಚೆನ್ನಮ್ಮಾಜಿಯು ಕೋಟೆಯನ್ನು ಕಟ್ಟಿಸಿದ ನಂತರ ಈ ಸ್ಥಳಕ್ಕೆ ಚನ್ನಗಿರಿ ಎಂಬ ಹೆಸರು ಬಂದಿತು ಎಂದು ಇದೆ. ಕೆಳದಿಯ ಕೆಚ್ಚೆದೆಯ ರಾಣಿ ಚೆನ್ನಮ್ಮಾಜಿ ಕ್ರಿ.ಶ. 1671ರಿಂದ 1698ರವರೆಗೆ ಆಳ್ವಿಕೆ ನಡೆಸಿದ್ದು ಅನೇಕ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದವಳು. ಶಿವಾಜಿಯ ಮಗ ರಾಜಾರಾಮ ಔರಂಗಜೇಬನಿಂದ ಸೋಲಿಸಲ್ಪಟ್ಟು ರಕ್ಷಣೆ ಕೋರಿ ಬಂದಾಗ ರಕ್ಷಣೆ ನೀಡಿದವಳು. ಪಾರಂಪರಿಕವಾಗಿ ಮರಾಠರಿಗೂ ಕೆಳದಿಯರಸರಿಗೂ ಸಂಘರ್ಷಗಳು ನಡೆಯತ್ತಿದ್ದರೂ ಶರಣಾಗಿ ಬಂದವರಿಗೆ ರಕ್ಷಣೆ ನೀಡುವ ಹಿಂದೂ ಪರಂಪರೆಯನ್ನು ಎತ್ತಿಹಿಡಿದು ಅಪಾಯ ಎದುರಿಸಿದವಳು. ಕ್ರುದ್ಧ ಔರಂಗಜೇಬ ಕೆಳದಿಯನ್ನು ಆಕ್ರಮಿಸಲು ಮುಂದಾದಾಗ ನಡೆದ ಘೋರ ಕದನದಲ್ಲಿ ಅವನನ್ನು ಸೋಲಿಸಿ ಹಿಮ್ಮೆಟ್ಟಿಸಿದವಳು!
     ಕೆಳದಿ ಅರಸರ ಚರಿತ್ರೆ ತಿಳಿಸುವ ಲಿಂಗಣ್ಣಕವಿಯ ಐತಿಹಾಸಿಕ ಕಾವ್ಯ 'ಕೆಳದಿನೃಪ ವಿಜಯ'ದ ಒಂಬತ್ತನೆಯ ಆಶ್ವಾಸದ 62ನೆಯ ಪದ್ಯ ಮತ್ತು ನಂತರದ ವಚನದಲ್ಲಿ ಕವಿ ಚನ್ನಗಿರಿಯ ಕುರಿತು ಹೀಗೆ ಹೇಳಿದ್ದಾನೆ:
"ವ|| ಇಂತು ಸಂಗ್ರಾಮದೊಳ್ ಮೈಸೂರ ಮಹೀಶ್ವರನ ದಳವಾಯಿ ತಿಮ್ಮಪ್ಪನಂ ನಿಗ್ರಹಿಸಿ ತತ್ಪುತ್ರನಾದ ಕೃಷ್ಣಪ್ಪನಂ ಕೈಸೆರೆವಿಡಿದು ಮರಳ್ದು ಕಳುಹಿಸಿ ಪರಮಪ್ರಖ್ಯಾತಿಯಂ ಪಡೆದು ತುಂಗಭದ್ರಾ ನದೀತೀರದೊಳ್
 ಕಂ || ತರುಣಿಯರ ಕುಲಶಿರೋಮಣಿ
ವರಚನ್ನಮ್ಮಾಜಿಯಾತ್ಮನಾಥನ ಪೆಸರೊಳ್
ಸ್ಥಿರಮಾದ ಸೋಮಶೇಖರ
ಪುರಮೆಂದೆನಿಪಗ್ರಹಾರಮಂ ವಿರಚಿಸಿದಳ್  || 62 ||
ವ|| ಇಂತು ಪ್ರಾಣಕಾಂತನಾದ ಸೋಮಶೇಖರನಾಯಕರ ಪೆಸರೊಳ್ ಸೋಮಶೇಖರಪುರಮೆಂದೆನಿಪಗ್ರಹಾರಮಂ ನಿರ್ಮಾಣಂಗೈಸಿ ಸ್ವಾಸ್ಥೆಕ್ಷೇತ್ರವೃತ್ತಿಗಳಂ ಕಲ್ಪಿಸಿ ಶ್ರೋತ್ರಿಯ ಬ್ರಾಹ್ಮಣರ್ಗೆ ಶಿವಾರ್ಪಿತಮಾಗಿ ಧಾರೆಯನೆರೆದು ಸ್ಥಿರಶಾಸನಮಂ ಬರೆಸಿತ್ತಳಂತುಮಲ್ಲದೆ ಬಸವಾಪಟ್ಟಣದ ಸೀಮಾಸನ್ನಿವೇಶದೊಳ್ ಹೂಲಿಕೆರೆಯೆಂಬ ಸ್ಥಳದೊಳ್ ವಿರಾಜಿಪ ಕೋಂಟೆಯಂ ಸ್ವಾಧೀನಂಗೈದದಕ್ಕೆ ಸ್ವನಾಮಾಂಕಿತಮಾದ ಚನ್ನಗಿರಿಯ ಕೋಂಟೆಯೆಂದು ಪೆಸರಿಟ್ಟು ತತ್ಪರಿಸ್ತರಣಮಂ ಬಲ್ಪುಗೈಸಿದಳಂತುಮಲ್ಲದೆಯುಂ"
     ಗದ್ಯಾರ್ಥ: ಯುದ್ಧದಲ್ಲಿ ಮೈಸೂರು ಅರಸರ ದಳವಾಯಿ ತಿಮ್ಮಪ್ಪನನ್ನು ಸೋಲಿಸಿ, ಅವನ ಮಗ ಕೃಷ್ಣಪ್ಪನನ್ನು ಸೆರೆಹಿಡಿದರೂ ಕ್ಷಮಿಸಿ ಮರಳಿ ಕಳುಹಿಸಿದ ಪ್ರಖ್ಯಾತಿ ಪಡೆದ ತರುಣಿಯರ ಕುಲಶಿರೋಮಣಿ ವರ ಚನ್ನಮ್ಮಾಜಿ ತನ್ನ ಗಂಡನ ಹೆಸರಿನಲ್ಲಿ ಸೋಮಶೇಖರಪುರವೆಂಬ ಅಗ್ರಹಾರ ನಿರ್ಮಾಣ ಮಾಡಿಸಿ ಶ್ರೋತ್ರೀಯ ಬ್ರಾಹ್ಮಣರಿಗೆ ಸ್ವಾಸ್ಥೆ, ಕ್ಷೇತ್ರ, ಉದ್ಯೋಗಗಳನ್ನು ಕಲ್ಪಿಸಿ ಶಿವಾರ್ಪಣವೆಂದು ಧಾರೆಯೆರೆದು ಶಾಶ್ವತ ಶಾಸನ ಬರೆಸಿಕೊಟ್ಟಳು. ಅದೂ ಅಲ್ಲದೆ ಬಸವಾಪಟ್ಟಣದ ಸೀಮೆಯ ಹತ್ತಿರ ಹೂಲಿಕೆರೆ(ಹುಲಿಕೆರೆ) ಎಂಬ ಸ್ಥಳದಲ್ಲಿ ಶೋಭಿಸುತ್ತಿದ್ದ ಕೋಟೆಯನ್ನು ಸ್ವಾಧೀನಪಡಿಸಿಕೊಂಡು ಅದಕ್ಕೆ ತನ್ನ ಹೆಸರಿನ ಅಂಕಿತದೊಂದಿಗೆ 'ಚನ್ನಗಿರಿ ಕೋಟೆ' ಎಂದು ಹೆಸರಿಟ್ಟು ಆ ಕೋಟೆಯನ್ನು ಬಲಪಡಿಸಿದಳು.
     ಚೆನ್ನಮ್ಮಾಜಿ ಹೊಸದಾಗಿ ಕೋಟೆಯನ್ನು ಕಟ್ಟಿಸದೆ ಇದ್ದ ಕೋಟೆಯನ್ನೇ ಅಭಿವೃದ್ಧಿ ಪಡಿಸಿ ಬಲಗೊಳಿಸಿದ್ದಳೆಂದು ಇದರಿಂದ ತಿಳಿದುಬರುತ್ತದೆ. ಸ್ವಾಭಿಮಾನಿ ಸ್ವಾತಂತ್ರ್ಯ ಹೋರಾಟಗಾರ ಧೊಂಡಿಯವಾಘನ ಜನ್ಮಸ್ಥಳವಾದ ಚನ್ನಗಿರಿಗೆ ದಿನಾಂಕ 19.10.2016ರಂದು ಹೋಗಿ ಚನ್ನಗಿರಿ ಕೋಟೆಯನ್ನು ವೀಕ್ಷಿಸಿದ ಸಂದರ್ಭದಲ್ಲಿ ತೆಗೆದ ಕೆಲವು ಚಿತ್ರಗಳು ಇಂದಿನ ಸ್ಥಿತಿಯನ್ನು ಬಿಂಬಿಸುತ್ತಿವೆ. ಕೋಟೆಯು ಇತರ ಪ್ರದೇಶಗಳಲ್ಲಿ ಕಂಡುಬರುವ ಕೋಟೆಗಳಷ್ಟು ವಿಶಾಲವಾದುದಾಗಿಲ್ಲ. ಎರಡು ಸುತ್ತು ಗೋಡೆಗಳನ್ನು ಹೊಂದಿರುವ ಕೋಟೆಯನ್ನು ಮಣ್ಣು, ಗಾರೆ ಮತ್ತು ಕಲ್ಲುಗಳನ್ನು ಅಳವಡಿಸಿ ನಿರ್ಮಿಸಲಾಗಿದೆ. ಅಂಡಾಕಾರವಾಗಿರುವ ಕೋಟೆಯಲ್ಲಿ ಏಳು ಬುರುಜುಗಳಿದ್ದು, ಎರಡು ಕಾವಲು ಗೋಪುರಗಳಿವೆ. ಒಂದು ಭಾಗದಲ್ಲಿ ಬಂಡೆಯನ್ನು ಕೊರೆದು ಮಾಡಿದ ಕೊಳವಿದ್ದು ಅದಕ್ಕೆ ಮೆಟ್ಟಲುಗಳಿವೆ. ಸಭಾಗೃಹವಿರಬಹುದೆಂದು ಹೇಳಬಹುದಾದ ಸ್ಥಳದ ಅಡಿಪಾಯ ಕಂಡುಬರುತ್ತದೆ. 18ನೆಯ ಶತಮಾನಕ್ಕೆ ಸೇರಿದೆಯೆನ್ನಲಾದ ಕೋಟೆ ರಂಗನಾಥ ಸ್ವಾಮಿಯ ದೇವಾಲಯವನ್ನೂ ಕೋಟೆಯ ಭಾಗದಲ್ಲಿ ಕಾಣಬಹುದು. ಹಳೆಯ ರಥ ಶಿಥಿಲಾವಸ್ಥೆಯಲ್ಲಿದೆ. ಹೊಸ ರಥದ ಮನೆಯಿದೆ. ಚಿತ್ರಗಳು ಕಥೆಯನ್ನು ಮುಂದವರೆಸುತ್ತವೆ. 
-ಕ.ವೆಂ.ನಾಗರಾಜ್.