ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಜೂನ್ 30, 2016

ದಕ್ಷ ಆಡಳಿತಗಾರನ ಲಕ್ಷಣ


     ರಾಜಕೀಯ ಕಾರಣಕ್ಕೋ, ಯಾವುದೋ ಕ್ಷುಲ್ಲಕ ಕಾರಣಕ್ಕೋ ದಕ್ಷ ಅಧಿಕಾರಿಯೊಬ್ಬನ ಅಕಾಲಿಕ ವರ್ಗಾವಣೆಯಾದರೆ ಜನರು ಪ್ರತಿಭಟಿಸುವುದುಂಟು. ಇದು ಎರಡು ಸಂಗತಿಗಳನ್ನು ಸೂಚಿಸುತ್ತವೆ- ಒಂದು, ದಕ್ಷ ಮತ್ತು ಜನಪರ ಅಧಿಕಾರಿಗಳನ್ನು ಜನರು ಇಷ್ಟಪಡುತ್ತಾರೆ ಮತ್ತು ಇನ್ನೊಂದು, ದಕ್ಷತೆ ಸ್ವಾರ್ಥಪರ ಹಿತಾಸಕ್ತಿಗಳಿಗೆ ಕಂಟಕವಾಗಿರುತ್ತದೆ. ಕಾನೂನು, ಕಾಯದೆಗಳನ್ನು ಎಲ್ಲಾ ಸಮಯಕ್ಕೂ, ಎಲ್ಲಾ ಸಂದರ್ಭಗಳಿಗೂ ಒಂದೇ ರೀತಿಯಲ್ಲಿ ಅನ್ವಯಿಸಬಾರದು ಮತ್ತು ಇವುಗಳನ್ನು ಜನರ ಹಿತಕ್ಕೆ ಅನುಕೂಲವಾಗುವಂತೆ ಹೇಗೆ ಬಳಸಬಹುದು ಎಂದು ದಕ್ಷ ಆಡಳಿತಗಾರ ಅರಿತಿರುತ್ತಾನೆ. ಇದೇ ಅವನ ಯಶಸ್ಸಿನ ಮೂಲಮಂತ್ರ.  ಇಂದಿನ ವ್ಯವಸ್ಥೆಯಲ್ಲಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದನ್ನೂ ಮೀರಿ ನಿಲ್ಲಬಲ್ಲ ಅಧಿಕಾರಿಯನ್ನು ಮಹಾನ್ ಎನ್ನಲೇಬೇಕಾಗುತ್ತದೆ. ಒಬ್ಬ ಅಧಿಕಾರಿ ದಕ್ಷ ಎನಿಸಿಕೊಳ್ಳಬೇಕಾದರೆ ಏನೆಲ್ಲಾ ಗುಣಗಳು ಇರಬೇಕು ಎಂಬ ಬಗ್ಗೆ ನೋಡೋಣ.
೧. ತಾಂತ್ರಿಕ ನೈಪುಣ್ಯ:
     ಇಂದಿನ ಕಂಪ್ಯೂಟರ್ ಜಗತ್ತಿನಲ್ಲಿ ಅತ್ಯಾಧುನಿಕ ಸಂಪರ್ಕ ಮತ್ತು ಸಂವಹನ ಸಾಧನಗಳಲ್ಲಿ ಅವನು ನೈಪುಣ್ಯತೆ ಹೊಂದಿರಬೇಕಾಗುತ್ತದೆ. ಅಧೀನ ಸಿಬ್ಬಂದಿಯ ಕಾರ್ಯಕ್ಷಮತೆ, ಚಲನವಲನಗಳ ಮೇಲೆ ಗಮನ, ಕಡತಗಳ ಶೀಘ್ರ ವಿಲೇವಾರಿ, ಚರ್ಚೆ ಹಾಗೂ ಅಗತ್ಯ ಸಲಹೆ, ಸೂಚನೆಗಳನ್ನು ನೀಡುವುದು, ಸಾರ್ವಜನಿಕರೊಡನೆ ಸಂಪರ್ಕ, ಇತ್ಯಾದಿಗಳ ವಿಚಾರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಸಮರ್ಥವಾಗಿ ಮಾಡಿಕೊಳ್ಳುವವನಾಗಿರಬೇಕು. ಮೇಲಾಧಿಕಾರಿಗಳೊಂದಿಗೆ ಮಾಹಿತಿ ವಿನಿಮಯ, ವರದಿ ನೀಡಿಕೆ, ಇತ್ಯಾದಿಗಳ ಸಲುವಾಗಿ ಸಹ ಇದನ್ನು ಯೋಜಿತ ರೀತಿಯಲ್ಲಿ ಬಳಸಿಕೊಳ್ಳಬೇಕು.
೨. ಸ್ಥಳೀಯ ಸಮಸ್ಯೆಗಳ ಅರಿವು:
     ಒಂದೊಂದು ಪ್ರದೇಶಕ್ಕೂ ತನ್ನದೇ ಆದ ಗುಣ-ಲಕ್ಷಣಗಳು, ರೀತಿ-ನೀತಿಗಳು, ಸಮಸ್ಯೆಗಳು ಇರುತ್ತವೆ. ಅವುಗಳ ಕುರಿತು ಅಧ್ಯಯನ ಮತ್ತು ಮಾಹಿತಿಗಳನ್ನು ಹೊಂದಿರಬೇಕು. ಸಮಸ್ಯೆಗಳ ಪರಿಹಾರಕ್ಕೆ ಏನು ಮಾಡಬಹುದೆಂಬ ಬಗ್ಗೆಯೂ ಚಿಂತಿಸಬೇಕು ಮತ್ತು ಪರಿಹಾರಕ್ಕೆ ತೊಡಗಬೇಕು.
೩. ಸಂಘಟನಾ ಚತುರತೆ:
     ಅಧೀನ ಅಧಿಕಾರಿಗಳು, ಸಿಬ್ಬಂದಿಗಳನ್ನು ಒಂದು ತಂಡದಂತೆ ಮುನ್ನಡೆಸಬಲ್ಲ ಚಾಕಚಕ್ಯತೆ ಹೊಂದಿರಬೇಕು. ಮುಂಚೂಣಿಯಲ್ಲಿ ತಾನೇ ಇದ್ದು ಅಗತ್ಯದ ನಿರ್ದೇಶನ ನೀಡುತ್ತಾ ಸಿಬ್ಬಂದಿಯಿಂದ ಕೆಲಸ ಮಾಡಿಸುವವನಾಗಿರಬೇಕು. ಯಾವುದೇ ಕೆಲಸ ಸಣ್ಣದಲ್ಲವೆಂಬ ಅರಿವಿರಬೇಕು. ಸಣ್ಣ ಸಂಗತಿಗಳಿಗೂ ಗಮನ ಕೊಡಬೇಕು. ಹುರಿದುಂಬಿಸುವ, ಸಂದರ್ಭಗಳಲ್ಲಿ ಶಿಕ್ಷಿಸುವ ಮನೋಭಾವವಿರಬೇಕು. ತಂಡದಲ್ಲಿ ಸಮನ್ವಯತೆ ಇರುವಂತೆ ನೋಡಿಕೊಂಡು ದುರ್ಬಲ ಕೊಂಡಿಗಳನ್ನು ಬಲಗೊಳಿಸಬಲ್ಲವನಾಗಿರಬೇಕು. ಎಲ್ಲರೊಡನೆ ಸ್ನೇಹಿತನಂತೆ ವರ್ತಿಸಬೇಕು.
೪. ಸಮಯಪಾಲನೆ:
     ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಮುಗಿಸುವಂತೆ ನೋಡಿಕೊಳ್ಳುವವನಾಗಿರಬೇಕು. ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುವಂತೆ ಮತ್ತು ಕೆಲಸಗಳಲ್ಲಿ ತೊಡಗಿರುವಂತೆ ಸೂಕ್ತ ವ್ಯವಸ್ಥೆ ರೂಪಿಸಬೇಕು. ತಪ್ಪು ಮಾಡಿದರೆ ದಂಡ ತಪ್ಪಿದ್ದಲ್ಲ ಎಂದು ಸಿಬ್ಬಂದಿ ಅರಿಯುವಂತೆ ಮಾಡಬೇಕು.
೫. ದೂರದೃಷ್ಟಿ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಚಾಕಚಕ್ಯತೆ:
     ಮುಂದಿನ ಆಗು-ಹೋಗುಗಳನ್ನು ಗಮನಿಸುತ್ತಿದ್ದು ಸಂಭಾವ್ಯ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳನ್ನು ಯೋಜಿಸಿದ್ದರೆ ಸಮಸ್ಯೆಗಳ ಪರಿಹಾರ ಅರ್ಧಕ್ಕರ್ಧ ಆದಂತೆಯೇ ಸರಿ. ಕೆಲವೊಮ್ಮೆ ಅನಿರೀಕ್ಷಿತವಾಗಿ ಹಲವು ಸಮಸ್ಯೆಗಳು ಒಟ್ಟೊಟ್ಟಿಗೇ ಬಂದುಬಿಡಬಹುದು. ಆಗ ಸಮಚಿತ್ತದಿಂದ ಧೃಢತೆ ಕಾಯ್ದುಕೊಂಡು ವರ್ತಿಸಿದರೆ ಸಿಬ್ಬಂದಿ ಮತ್ತು ಜನರು ಸಹಾಯಕ್ಕೆ ನಿಲ್ಲುತ್ತಾರೆ. ಸಮಸ್ಯೆಗಳು ಎದುರಾದಾಗ ತಪ್ಪಿಸಿಕೊಂಡು ದೂರವಿರುವ ಪ್ರಯತ್ನ ಮಾಡದೆ ಸಮಸ್ಯೆಯ ಎದುರಿಗೇ ನಿಲ್ಲುವ ಮನೋಭಾವವಿರಬೇಕು. ದೂರ ಹೋದಷ್ಟೂ ಸಮಸ್ಯೆಗಳು ಭೂತಾಕಾರವಾಗಿ ಬೆಳೆದು ಬೆದರಿಸುತ್ತವೆ. ಹತ್ತಿರವಿದ್ದರೆ ಸಮಸ್ಯೆಗಳು ಸಣ್ಣದಾಗುತ್ತಾ ಹೋಗುತ್ತವೆ. ಸ್ವಂತದ ಅನುಭವವನ್ನು ಹಂಚಿಕೊಳ್ಳಬೇಕೆನಿಸುತ್ತಿದೆ. ಒಂದು ದಿನ ಒಬ್ಬ ರೌಡಿಯನ್ನು ಬೈಕಿನಲ್ಲಿ ಹೋಗುತ್ತಿದ್ದಾಗ ಅಡಗಟ್ಟಿ ಕೊಚ್ಚಿ ಕೊಲೆ ಮಾಡಿದ್ದರು. ಸರ್ಕಾರಿ ಭೂಮಿ ಒತ್ತುವರಿ ವಿಚಾರದಲ್ಲಿ ಎರಡು ಗುಂಪುಗಳ ನಡುವಣ ವೈಷಮ್ಯ ಕೊಲೆಗೆ ಕಾರಣವಾಗಿತ್ತು. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಇತ್ತು. ಶಂಕಿತ ಒಬ್ಬಿಬ್ಬರ ಬಂಧನವಾಗಿತ್ತು. ಪೋಲಿಸರು ಎರಡು ಗುಂಪುಗಳ ವಿರುದ್ಧ ಸೆ. ೧೦೭ರಂತೆ ಮೊಕದ್ದಮೆಯನ್ನು ನನ್ನ ನ್ಯಾಯಾಲಯದಲ್ಲಿ ದಾಖಲಿಸಿ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದರು. ಸ್ಥಳೀಯ ಗ್ರಾಮಲೆಕ್ಕಿಗರನ್ನು ಕರೆಸಿ ಮಾಹಿತಿ ಸಂಗ್ರಹಿಸಿದೆ. ಅಂದು ಸಂಜೆ ೬ ಗಂಟೆಯ ವೇಳೆಗೆ ರೆವಿನ್ಯೂ ಇನ್ಸ್‌ಪೆಕ್ಟರರನ್ನು ಕರೆದುಕೊಂಡು ಗ್ರಾಮಕ್ಕೆ ಹೊರಟೆ. ರೆವಿನ್ಯೂ ಇನ್ಸ್‌ಪೆಕ್ಟರ್, ಸಾಯಂಕಾಲದ ವೇಳೆಯಲ್ಲಿ ಹೆಚ್ಚಿನವರು ಕುಡಿದ ಮತ್ತಿನಲ್ಲಿದ್ದು ಸಾಮಾನ್ಯವಾಗಿ ಯಾವ ಅಧಿಕಾರಿಗಳೂ ಅಲ್ಲಿಗೆ ಆ ಸಮಯದಲ್ಲಿ ಹೋಗುವುದಿಲ್ಲ, ಹೋಗುವುದೇ ಆದರೆ ಪೋಲಿಸರನ್ನೂ ಕರೆದುಕೊಂಡು ಹೋಗೋಣ ಎಂದು ಅಳುಕುತ್ತಾ ಹೇಳಿದ್ದ. ನಾನು ಧೈರ್ಯ ಹೇಳಿ ಗ್ರಾಮಕ್ಕೆ ಹೊರಟೆ. ನನ್ನನ್ನು ಆ ಸಮಯದಲ್ಲಿ ನಿರೀಕ್ಷಿಸಿರದಿದ್ದ ಗ್ರಾಮಸ್ಥರು ಮನೆಯೊಳಗೆ ಸೇರಿಕೊಂಡರು. ಯಾರೂ ಹೊರಬರಲಿಲ್ಲ. ಅಲ್ಲಿನ ದೇವಸ್ಥಾನದ ಜಗಲಿಯ ಮೇಲೆ ಕುಳಿತು ಇದ್ದ ಒಬ್ಬಿಬ್ಬರ ಜೊತೆ ಕುಶಲೋಪರಿ ಮಾತನಾಡುತ್ತಿದ್ದೆ. ಇಣಿಕಿ ನೋಡುತ್ತಿದ್ದ ಜನರು ಕ್ರಮೇಣ ಒಬ್ಬೊಬ್ಬರಾಗಿ ಬರತೊಡಗಿದರು. ಹೆಚ್ಚಿನವರಿಗೆ ನಾನು ಏನು ಮಾಡುತ್ತೇನೆಂದು ತಿಳಿದುಕೊಳ್ಳುವ ಕುತೂಹಲವಿತ್ತು. ಅವರೊಡನೆ ಮಳೆ, ಬೆಳೆ ಇತ್ಯಾದಿಗಳ ಬಗ್ಗೆ ಮಾತನಾಡುತ್ತ ಸ್ವಲ್ಪ ಸಮಯ ಕಳೆಯಿತು. ಬಂದಿದ್ದವರಲ್ಲಿ ಎರಡು ಗುಂಪಿಗೂ ಸೇರಿದ ಕೆಲವರು ಇದ್ದುದು ಅವರುಗಳು ಪ್ರತ್ಯೇಕ ಗುಂಪುಗಳಲ್ಲಿ ಇದ್ದುದರಿಂದ ಗೊತ್ತಾಯಿತು. ಎಲ್ಲರನ್ನೂ ಕುಳಿತುಕೊಳ್ಳಲು ಹೇಳಿ ನೇರ ವಿಷಯಕ್ಕೆ ಬಂದೆ. ನನಗೆ ಎಲ್ಲಾ ಗೊತ್ತಾಗಿದೆ. ಅಪರಾಧ ನಡೆಯುವ ಮುನ್ನ ತಡೆಯುವ ಹೊಣೆಗಾರಿಕೆ ನನ್ನದಿದೆ. ಅಪರಾಧ ನಡೆದುಹೋದರೆ ಪೋಲಿಸು, ಕೋರ್ಟು ನೋಡಿಕೊಳ್ಳುತ್ತದೆ. ನಿಮ್ಮಲ್ಲಿ ಯಾರು ಯಾರು ಜಗಳಕ್ಕೆ ಕುಮ್ಮಕ್ಕು ಕೊಡುತ್ತಿದ್ದೀರಿ ನನಗೆ ಗೊತ್ತು. ನಿಮ್ಮಲ್ಲಿ ಎರಡು ಗುಂಪನ್ನೂ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಕಳಿಸಲು ನನ್ನ ಮುಂದೆ ಸೆ. ೧೦೭ ಕೇಸ್ ಬಂದಿದೆ. ಮುಚ್ಚಳಿಕೆ ಬರೆದುಕೊಡಬೇಕು, ಇಲ್ಲಾ ಜೈಲಿಗೆ ಹೋಗಬೇಕು.  ನೀವೇ ನಿರ್ಧರಿಸಿ ನಾಳೆ ತಿಳಿಸಿ. ಒಮ್ಮೆ ಪಟ್ಟಿಗೆ ಸೇರಿದರೆ ಮುಂದೆ ಯಾವ ಜಗಳ ಆದರೂ ನೀವು ಒಳಗೆ ಹೋಗಬೇಕಾಗುತ್ತದೆ. ನಾನು ಯಾರ ಮುಲಾಜೂ ಇಟ್ಟುಕೊಳ್ಳುವುದಿಲ್ಲ. ಸಂದರ್ಭ ಬಂದರೆ ನನ್ನಷ್ಟು ಕೆಟ್ಟವನು ಯಾರೂ ಇರುವುದಿಲ್ಲ ಎಂದು ಗಂಭೀರವಾಗಿ ಧೃಢವಾಗಿ ಹೇಳಿದಾಗ ಯಾರೂ ತುಟಿಪಿಟಕ್ಕೆಂದಿರಲಿಲ್ಲ. ನನಗೆ ಮೌನ ಸಮ್ಮತಿ ಸಿಕ್ಕಿತ್ತು. ನಾನು ಕೇಸ್ ಮುಂದುವರೆಸದೆ ಮುಕ್ತಾಯಗೊಳಿಸಿದೆ. ನಡೆಸಿದ್ದರೆ ಕಹಿ ವಾತಾವರಣ ಮುಂದುವರೆಯುತ್ತಿತ್ತು. ನಂತರದಲ್ಲಿ ನಿರೀಕ್ಷಿಸಿದ್ದಂತೆ ಸಂಘರ್ಷ ನಡೆಯಲಿಲ್ಲ. ಬಹುಷಃ ಮುನ್ನೆಚ್ಚರಿಕೆ ಕೊಡದೆ ಇದ್ದಿದ್ದರೆ ದೊಡ್ಡ ಹೊಡೆದಾಟವೇ ಆಗುತ್ತಿತ್ತು.
೬. ತುರ್ತು ಮಾಹಿತಿ ಪಡೆಯುವ ವ್ಯವಸ್ಥೆ:
     ಕಾರ್ಯವ್ಯಾಪ್ತಿಯಲ್ಲಿ ಏನೇ ವಿಶೇಷ ಜರುಗಿದರೂ, ಜರುಗುವ ಸಂಭವವಿದ್ದರೂ ಕೂಡಲೇ ಅಧೀನ ಸಿಬ್ಬಂದಿ ದೂರವಾಣಿ ಮೂಲಕ ಮಾಹಿತಿ ಕೊಡುವಂತೆ ನೆಟ್ ವರ್ಕ್ ಇಟ್ಟುಕೊಂಡರೆ ಅದನ್ನು ಆಧರಿಸಿ ಕ್ರಮ ಅನುಸರಿಸುವುದು ಸುಲಭವಾಗುತ್ತದೆ. ನನ್ನ ಅನುಭವದಲ್ಲಿ ಹೇಳಬೇಕೆಂದರೆ ಅಧೀನ ಸಿಬ್ಬಂದಿಯಲ್ಲದೆ ಗ್ರಾಮಗಳ ಕೆಲವು ಜನರಿಗೂ ಸಹ ಈ ಬಗ್ಗೆ ತಿಳುವಳಿಕೆ ನೀಡಿ ಮಾಹಿತಿ ಪಡೆಯುವ ವ್ಯವಸ್ಥೆ ಪರಿಣಾಮಕಾರಿಯಾಗಿರುತ್ತದೆ. ನಿವೃತ್ತನಾದ ನಂತರದಲ್ಲೂ ಎರಡು ವರ್ಷಗಳವರೆಗೂ ಕೆಲವರಿಂದ ನನಗೆ ದೂರವಾಣಿ ಕರೆಗಳು ಬರುತ್ತಿದ್ದವು. ಅವು ಹೀಗಿರುತ್ತಿದ್ದವು, ಸಾರ್, ಸಿಡಿಲು ಹೊಡೆದು ರಾಮಯ್ಯನ ಎಮ್ಮೆ ಸತ್ತು ಹೋಯಿತು, ನಾಳೆ ಗ್ರಾಮದೇವತೆ ಪೂಜೆ ಇದೆ. ಮೊದಲ ಪೂಜೆ ಮಾಡುವ ಬಗ್ಗೆ ಜಗಳ ಆಗ್ತಾ ಇದೆ. ಹೊಡೆದಾಟ ಆಗಬಹುದು ಸಾರ್. ನನಗೆ ಹೆಮ್ಮೆ ಅನಿಸುತ್ತಿತ್ತು. ಅವರುಗಳಿಗೆ ಧನ್ಯವಾದ ಹೇಳಿ ಹೊಸ ತಹಸೀಲ್ದಾರರಿಗೆ ಫೋನು ಮಾಡಲು ಹೇಳುತ್ತಿದ್ದೆ.
೭. ಉತ್ತಮ ಸಂಪರ್ಕ ಮತ್ತು ಸಮನ್ವಯ:
     ಮೇಲಾಧಿಕಾರಿಗಳು, ಅಧೀನ ಸಿಬ್ಬಂದಿ, ವಿವಿಧ ರಾಜಕೀಯ ಪಕ್ಷಗಳ ನಾಯಕರುಗಳು, ಇತರ ಇಲಾಖೆಗಳ ಅಧಿಕಾರಿಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಾರ್ವಜನಿಕರೊಡನೆ ಉತ್ತಮ ರೀತಿಯ ಸಂಬಂಧಗಳನ್ನು ಹೊಂದಿರುವವನು ಉತ್ತಮ ಆಡಳಿತಗಾರನೆನಿಸುತ್ತಾನೆ. ಪೂರ್ವ ತಯಾರಿ ಮತ್ತು ಅಭ್ಯಾಸಗಳಿದ್ದರೆ ಮಾತ್ರ ಈ ಗುಣ ಬೆಳೆಸಿಕೊಳ್ಳಲು ಸಾಧ್ಯ.
     ಸಾರರೂಪವಾಗಿ ಹೇಳಬೇಕೆಂದರೆ ಒಬ್ಬ ದಕ್ಷ ಅಧಿಕಾರಿಗೆ ಕಾರ್ಯಗಳ ಅರಿವಿರಬೇಕು, ಕಾನೂನು-ಕಟ್ಟಳೆಗಳು, ಸ್ಥಳೀಯ ಸಂಪ್ರದಾಯಗಳ ಬಗ್ಗೆ ತಿಳಿದಿರಬೇಕು, ಧೃಢತೆ ಇರಬೇಕು, ಸಾಧಿಸುವ ವಿಶ್ವಾಸ ಇರಬೇಕು, ಸಂಘಟನಾ ಚಾತುರ್ಯವಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಮಾಣಿಕನಾಗಿ ಪಕ್ಷಾತೀತನಾಗಿರುವುದಲ್ಲದೆ ಜೊತೆಗೆ, ಯಾರ ಪಕ್ಷಪಾತಿಯೂ ಅಲ್ಲ ಎಂಬುದನ್ನು ತೋರಿಸಿಕೊಳ್ಳಬೇಕು. ಪರಸ್ಪರ ರಾಜಕೀಯ ವಿರೋಧಿಗಳನ್ನು ಹೊಂದಾಣಿಸಿಕೊಂಡು, ಸಂಭಾಳಿಸಿಕೊಂಡು ಹೋಗುವ ಎರಡು ಅಲಗಿನ ಕತ್ತಿಯ ಮೇಲಣ ಜಾಗೃತ ನಡಿಗೆ ಮಾಡುವುದನ್ನು ಕಲಿಯಲೇಬೇಕು. ಕಷ್ಟ, ಆದರೆ ಅಸಾಧ್ಯವೇನಲ್ಲ. ದೇವರು ಎಲ್ಲರಿಗೂ ಅಧಿಕಾರ ಕೊಡುವುದಿಲ್ಲ. ಸಿಕ್ಕ ಅಧಿಕಾರವನ್ನು ಜನಪರವಾಗಿ ಬಳಸುವ ಮನೋಭಾವ ಅಧಿಕಾರಿಗಳಿಗೆ ಬರಬೇಕು. ಜನಪರವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಗುರುತಿಸಿ ಆಯಕಟ್ಟಿನ ಸ್ಥಾನಗಳಲ್ಲಿ ಕೂರಿಸುವ ಕೆಲಸ ಆಗಬೇಕು. ಭ್ರಷ್ಠರನ್ನು ಸಲಹುವ ರಾಜಕೀಯ ನಾಯಕರುಗಳಿಗೆ ಪಾಠ ಕಲಿಸಿದರೆ ಬದಲಾವಣೆ ಆಗುತ್ತದೆ, ಆಗಬೇಕು!
--ಕ.ವೆಂ.ನಾಗರಾಜ್.
*****************
ದಿನಾಂಕ 04-04-2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಸೋಮವಾರ, ಜೂನ್ 27, 2016

ವಿಕೃತ ಮನೋಭಾವ


     ಇನ್ನೊಬ್ಬರಿಗೆ ಆಗುವ ಹಿಂಸೆ, ಅವಮಾನಗಳನ್ನು ಕಂಡು ಸಂತೋಷಿಸುವುದು, ಸ್ವತಃ ಹಿಂಸೆ ನೀಡಿ, ಅವಮಾನಿಸಿ ಸಂತೋಷಿಸುವುದೇ ವಿಕೃತಿ. ಈ ವಿಕೃತಿ ಮನುಷ್ಯನ ಅಂತರ್ಗತ ಸ್ವಭಾವವಾಗಿದ್ದು, ಪ್ರಮಾಣ ಹೆಚ್ಚು, ಕಡಿಮೆ ಇರಬಹುದು! ಯಾರನ್ನು ಕಂಡರೆ ಅಸೂಯೆಯೆನಿಸುವುದೋ, ದ್ವೇಷವಿದೆಯೋ ಅಂತಹವರು ತೊಂದರೆಗೊಳಗಾದಾಗ, ಹಾಗೆಯೇ ಆಗಬೇಕು, ಮೆರೀತಿದ್ದ ಬಡ್ಡೀಮಗ ಎಂದು ಸಂತೋಷಪಡದಿರುವವರು ವಿರಳರೇ ಸರಿ. ಕೆಟ್ಟವರು ಅನ್ನಿಸಿಕೊಂಡವರು ಹಿಂಸೆಗೊಳಪಟ್ಟಾಗ, ಅವಮಾನಿತರಾದಾಗ ಒಳ್ಳೆಯವರೆಂದು ಅನ್ನಿಸಿಕೊಂಡವರೂ ಸಂತೋಷಿಸುತ್ತಾರೆ. ವಿಕೃತಿಯ ಕ್ರೂರ ಪರಾಕಾಷ್ಠೆಯೆಂದರೆ ಚಿತ್ರವಿಚಿತ್ರ ಹಿಂಸೆ ನೀಡಿ ಕೊಲ್ಲುವುದು, ಲೈಂಗಿಕವಾಗಿ ಶೋಷಿಸಿ ಹತ್ಯೆಗೈಯುವುದು, ಇತ್ಯಾದಿ. ವಿಕೃತಿಗೆ ಅಸೂಯೆಯೂ ಒಂದು ಕಾರಣವಾಗಿದೆ.
     ಲಂಚಗುಳಿತನ, ಭ್ರಷ್ಠಾಚಾರ, ಇತ್ಯಾದಿಗಳಿಗೆ ದುರಾಸೆಯೇ ಕಾರಣ. ಇದಕ್ಕೆ ಪಕ್ಕಾದವರು ಸಂವೇದನಾಶೀಲತೆಯನ್ನೇ ಕಳೆದುಕೊಳ್ಳುತ್ತಾರೆ. ಬಡವ, ದಿಕ್ಕಿಲ್ಲದವ ಎಂಬುದರ ಪರಿವೆಯೇ ಇಲ್ಲದೆ ಲಂಚಕ್ಕೆ ಕೈಚಾಚುವವರು ಹೃದಯಹೀನರಲ್ಲವೇ? ಖಜಾನೆಗೇ ಕನ್ನ ಕೊರೆಯುವ ಪುಡಾರಿಗಳು, ಅಧಿಕಾರಿಗಳಿಂದಾಗಿ ಸಾರ್ವಜನಿಕರ ಹಣ ಮತ್ತು ಸ್ವತ್ತುಗಳು ಕೆಲವೇ ಕೆಲವರ ಪಾಲಾಗುತ್ತವೆ. ಸಾಮಾನರಿಗೆ ಇದರಿಂದಾಗುವ ಪಡಿಪಾಟಲುಗಳ ಬಗ್ಗೆ ಅವರಿಗೆ ಚಿಂತೆಯಿರುವುದಿಲ್ಲ. ಯಾರು ಹಾಳಾದರೆ ನನಗೇನು, ನಾನು ಸುಖವಾಗಿದ್ದರೆ ಆಯಿತು ಎನ್ನುವುದೂ ವಿಕೃತಿಯ ಒಂದು ಮುಖ. ಸ್ವಾರ್ಥದ ಸಲುವಾಗಿ ದೇಶದ ಹಿತವನ್ನೇ ಕಡೆಗಣಿಸುವ ಜನನಾಯಕರುಗಳೂ ಇದ್ದಾರೆ!
     ಕಾಮಾತುರರ ವಿಕೃತಿ ಮಾನವೀಯತೆಯನ್ನೇ ಅಣಕಿಸುತ್ತದೆ. ಪ್ರಿಯಕರನ ನೆರವಿನಿಂದ ಪತಿಯನ್ನೇ ಕೊಲ್ಲಿಸುವುದು, ಅಡ್ಡಿಯಾಗುತ್ತಾರೆಂದು ಎಳೆ ಮಕ್ಕಳನ್ನೇ ಸಾಯಿಸುವುದು, ಅಸಹಾಯಕತೆ, ದೌರ್ಬಲ್ಯಗಳನ್ನು ದುರುಪಯೋಗಿಸಿಕೊಂಡು ಲೈಂಗಿಕ ದೌರ್ಜನ್ಯವೆಸಗುವುದು, ಚಿಕ್ಕ ಕಂದಮ್ಮಗಳ ಮೇಲಿನ ಅತ್ಯಾಚಾರ ಮುಂತಾದ ಸುದ್ದಿಗಳು ದಿನಬೆಳಗಾದರೆ ರಾಚುತ್ತಿರುತ್ತವೆ. ಆಸ್ತಿಗಾಗಿ ಕುಟುಂಬದವರನ್ನೇ ಕೊಲೆ ಮಾಡುವುದು, ಮತ್ಸರದಿಂದಾಗಿ ಬೆಳೆದು ನಿಂತ ಪೈರಿಗೇ ಬೆಂಕಿ ಹಚ್ಚುವುದು, ಮದದ ಕಾರಣದಿಂದಾಗಿ ಅಸಹಾಯಕರು, ದುರ್ಬಲರನ್ನು ಹಿಂಸಿಸಿ ಆನಂದಿಸುವುದು, ಒಂದೇ, ಎರಡೇ ವಿಕೃತಿಯ ನೂರಾರು ಉದಾಹರಣೆಗಳನ್ನು ಕೊಡಬಹುದು. ಇಂದಿನ ರಾಜಕಾರಣದಲ್ಲಿ ಪುತ್ರವ್ಯಾಮೋಹ, ವಂಶವ್ಯಾಮೋಹ, ಜಾತಿ ವ್ಯಾಮೋಹ, ಅಧಿಕಾರದ ಮೋಹಗಳು ದೇಶವನ್ನು ಅಧೋಗತಿಗೆ ಒಯ್ಯುತ್ತಿವೆ. ವಿಕೃತಿಯನ್ನು ನಿಯಂತ್ರಿಸಬೇಕಾದವರೇ ವಿಕೃತಿಯ ಪೋಷಕರಾಗಿದ್ದಾರೆ. ತಾನು ಹೇಳಿದಂತೆಯೇ ಎಲ್ಲವೂ ಆಗಬೇಕು ಎಂಬ ಅಹಮ್ಮಿನಿಂದಾಗಿ ಕುಟುಂಬದ ಇತರ ಸದಸ್ಯರ ಭಾವನೆಗಳಿಗೂ ಬೆಲೆಕೊಡದೆ ಅವರ ಮನಸ್ಸನ್ನು ಘಾಸಿಪಡಿಸುವುದನ್ನೂ ಕಾಣುತ್ತಿರುತ್ತೇವೆ. ಮನುಷ್ಯನನ್ನು ಕೊಲ್ಲುವುದಕ್ಕಿಂತ ಘೋರ ಅಪರಾಧ ಮನಸ್ಸುಗಳನ್ನು ಕೊಲ್ಲುವುದು!
     ಐಸಿಸ್ ಉಗ್ರರು ನೂರಾರು ಜನರ ಸಮ್ಮುಖದಲ್ಲಿ ಹಲವರ ಶಿರಚ್ಛೇದವನ್ನು ವಿಕೃತಾನಂದ ಮೆರೆಯುತ್ತಾ ಮಾಡುವುದು, ನೆರೆದಿದ್ದವರೂ ಸಹ ಆನಂದದಿಂದ ಅದನ್ನು ವೀಕ್ಷಿಸುವ ಹಲವಾರು ವಿಡಿಯೋಗಳು, ಸೆರೆಹಿಡಿದ ಅಮಾಯಕ ಹೆಣ್ಣುಮಕ್ಕಳನ್ನು ಉಗ್ರರು ಕಾಮತೃಷೆ ತೀರಿಸಿಕೊಳ್ಳಲು ಬಳಸುವ ಮತ್ತು ಅವರನ್ನು ಹರಾಜಿನ ಮೂಲಕ ವಿಕ್ರಯಿಸುವ ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿರುವುದು ಪರಮವಿಕೃತ್ಯಗಳಿಗೆ ಸಾಕ್ಷಿಯಂತಿವೆ.
     ಸ್ವತಃ ವಿಕೃತ್ಯಕ್ಕೆ ಬಲಿಯಾಗಿರುವುದು, ಮನೆಯ ವಾತಾವರಣ, ಹೊಂದಿರುವ ಸ್ನೇಹಿತರು, ಪರಿಸರ, ತಪ್ಪು ಮಾರ್ಗದರ್ಶನದ ಪ್ರಭಾವ, ಮತಾಂಧತೆ, ಸ್ವಾರ್ಥ, ದುರಾಸೆ, ಅಹಂ, ಅರಷಡ್ವರ್ಗಗಳು ವಿಕೃತಿಯ ಪೋಷಕಗಳಾಗಿವೆ. ಆದರೆ ಪ್ರಧಾನವಾದ ಕಾರಣ ಸೇವಿಸುವ ಆಹಾರ ಎಂದರೆ ಆಶ್ಚರ್ಯವಾಗಬಹುದಾದರೂ ಇದು ಸತ್ಯ. ಇಲ್ಲಿ ಆಹಾರವೆಂದರೆ ಕೇವಲ ತಿನ್ನುವ ಕ್ರಿಯೆ ಮಾತ್ರವಲ್ಲ, ನೋಡುವ, ಕೇಳುವ, ಆಸ್ವಾದಿಸುವ, ಸ್ಪರ್ಷಿಸುವ ಸಂಗತಿಗಳಲ್ಲದೆ ಮನೋವ್ಯಾಪಾರಗಳೂ ಆಹಾರದ ವ್ಯಾಪ್ತಿಯಲ್ಲಿ ಬರುತ್ತವೆ. ಒಳ್ಳೆಯ ಆಹಾರ ಸೇವಿಸಿದರೆ ನಾವು ಒಳ್ಳೆಯವರು, ಕೆಟ್ಟ ಆಹಾರ ಸೇವಿಸಿದರೆ ನಾವು ಕೆಟ್ಟವರಾಗುತ್ತೇವೆ ಎಂಬುದು ಸರಳ ನಿಯಮ.
     ಹೊಟ್ಟೆಗೆ ಏನು ತಿಂತೀಯ?- ಯಾರಾದರೂ ಅಚಾತುರ್ಯವೆಸಗಿದಾಗ ಹೀಗೆ ಹೇಳುತ್ತೇವಲ್ಲವೇ? ಸೇವಿಸುವ ಆಹಾರ ಸ್ವಭಾವದ ಮೇಲೆ ಪ್ರಭಾವ ಬೀರುತ್ತದೆ ಎಂಬುದೇ ಇದರ ಅರ್ಥ. ಆಯುರ‍್ವೇದದಲ್ಲಿ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಆಹಾರದ ಬಗ್ಗೆ ವಿವರಣೆ ಸಿಗುತ್ತದೆ. ಸಾತ್ವಿಕ ಗುಣವೆಂದರೆ ರಚನಾತ್ಮಕ, ಸ್ಪಷ್ಟ ಮತ್ತು ಜೀವನವನ್ನು ಪೋಷಿಸುವುದಾಗಿದೆ. ಶಾಂತಿ, ನೆಮ್ಮದಿ, ಪ್ರೀತಿಗಳು ಸಾತ್ವಿಕರ ಲಕ್ಷಣಗಳು. ಸಾತ್ವಿಕರು ಸಾಮಾನ್ಯವಾಗಿ ಆಧ್ಯಾತ್ಮಿಕ ಒಲವುಳ್ಳವರು, ಸರಳರು, ಉದ್ವೇಗರಹಿತರು, ಸಂತುಷ್ಟರು, ಕೋಪನಿಗ್ರಹಿಗಳು, ಇತರರಿಗೆ ಸಂತೋಷ ಕೊಡುವವರು, ಉತ್ಸಾಹಿತರು, ಕುತೂಹಲಿಗಳು ಮತ್ತು ಪ್ರೇರಕರಾಗಿರುತ್ತಾರೆ. ಸಾತ್ವಿಕ ಆಹಾರ ಸತ್ವಯುತವಾಗಿದ್ದು ಸುಲಭವಾಗಿ ಜೀರ್ಣವಾಗುವಂತಹದು ಮತ್ತು ಹಗುರವಾಗಿರುತ್ತವೆ. ಹದವಾಗಿ ಬೇಯಿಸಿದ ತರಕಾರಿಗಳು, ಕಳಿತ ಹಣ್ಣುಗಳು, ಕಾಳುಗಳು, ಜೇನುತುಪ್ಪ, ಶುಂಠಿ, ಸ್ವಲ್ಪ ಪ್ರಮಾಣದ ತುಪ್ಪ, ಹಸುವಿನ ಹಾಲು ಇತ್ಯಾದಿಗಳು ಸಾತ್ವಿಕ ಆಹಾರದ ಪಟ್ಟಿಯಲ್ಲಿವೆ. ಸತ್ವ ಹೆಚ್ಚಿಸಿಕೊಳ್ಳಲು ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ, ಸತ್ಸಂಗಗಳು, ಪ್ರಶಾಂತವಾದ ಮತ್ತು ಹಿತಕರ ವಾತಾವರಣಗಳು ಸಹಾಯಕಾರಿ. ನೋಡುವ ನೋಟಗಳು, ಕೇಳುವ ಸಂಗತಿಗಳು, ಓದುವ ಪುಸ್ತಕಗಳು ಒಳ್ಳೆಯದಾಗಿದ್ದಲ್ಲಿ ಅವೂ ಸಾತ್ವಿಕ ಗುಣವನ್ನು ವೃದ್ಧಿಸುತ್ತವೆ.
     ರಾಜಸಿಕತೆಯೆಂದರೆ ಮನ್ನುಗ್ಗುವ ಮತ್ತು ಚಟುವಟಿಕೆಯಿಂದ ಒಡಗೂಡಿದ ಸ್ವಭಾವ. ಅತಿಯಾದಲ್ಲಿ ಇದು ಅತಿ ಚಟುವಟಿಕೆ ಮತ್ತು ತಳಮಳಕ್ಕೂ ಕಾರಣವಾಗುತ್ತದೆ. ಅವಿಶ್ರಾಂತ ಮನಸ್ಸು ಭಯ, ಕಾತುರ ಮತ್ತು ಉಗ್ರತೆಯಿಂದ ಚಡಪಡಿಸುತ್ತದೆ. ಮಿತಿಯಲ್ಲಿರುವ ರಾಜಸಿಕತೆ ಒಳ್ಳೆಯ ಫಲ ನೀಡುತ್ತದೆ, ಸಮಾಜಕ್ಕೆ ಉಪಕಾರಿಯಾಗಿರುತ್ತದೆ. ಅತಿಯಾದಲ್ಲಿ ಗರ್ವ, ಸ್ಪರ್ಧೆ, ಅತಿಕ್ರಮಣಕಾರಿ ಮನೋಭಾವ ಮತ್ತು ಮತ್ಸರಕ್ಕೆ ರಹದಾರಿಯಾಗುತ್ತದೆ. ಅತಿ ರಾಜಸಿಕತೆಯಲ್ಲಿ ಯಾವುದು ಒಳ್ಳೆಯದೆಂದು ಹೃದಯಕ್ಕೆ ಗೊತ್ತಿದ್ದರೂ, ಮನಸ್ಸು ಮಾತ್ರ ಬೇರೆಲ್ಲೋ ಕೊಂಡೊಯ್ದುಬಿಡುತ್ತದೆ. ನೋಡುವ ದೃಷ್ಯಗಳು/ಸಂಗತಿಗಳು, ದಾರಿ ತಪ್ಪಿಸುವ ಚಿತ್ರಗಳು, ಧಾರಾವಾಹಿಗಳು, ಕೇಳುವ ಕೆಟ್ಟ ಮಾತುಗಳು, ವಾಸಿಸುವ ಅಶಾಂತ ಪರಿಸರ ರಾಜಸಿಕತೆ ಪ್ರಚೋದಿಸುತ್ತವೆ. ವ್ಯಾಯಾಮ, ಪ್ರಯಾಣ, ಮಾತುಗಳು, ಕೆಲಸಗಳು, ಮನರಂಜನೆಗಳು ಇವು ಅಗತ್ಯಕ್ಕಿಂತ ಹೆಚ್ಚಾದರೆ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಕರಿದ, ಹರಿದ ಪದಾರ್ಥಗಳು, ಚಾಕೊಲೇಟುಗಳು, ಅತಿಯಾದ ಸಿಹಿ, ಉಪ್ಪು, ಖಾರದ ಪದಾರ್ಥಗಳು, ಮಸಾಲೆ ಪದಾರ್ಥಗಳು ಇತ್ಯಾದಿಗಳು ರಾಜಸಿಕ ಆಹಾರದ ಪಟ್ಟಿಯಲ್ಲಿವೆ.
     ತಾಮಸಿಕತೆ ನಾಶ ಮಾಡುವ ಗುಣವಾಗಿದೆ. ಆಲಸ್ಯ, ಜಡತ್ವ, ನಿರಾಶೆ, ಖಿನ್ನತೆ, ಕ್ರೋಧ ಇದರ ಉತ್ಪನ್ನಗಳು. ತಮೋಗುಣ ಹೆಚ್ಚಾದರೆ ಅನರ್ಥಕಾರಿ. ಕೀಳು ಅಭಿರುಚಿಯ ಚಿತ್ರಗಳು, ಅಂತರ್ಜಾಲದ ಅಶ್ಲೀಲ ತಾಣಗಳು ತಾಮಸಿಕತೆಯ ಬೆಂಕಿಗೆ ತುಪ್ಪ ಸುರಿಯುತ್ತವೆ. ತಾಮಸಿಕರು ಸ್ವನಾಶಕ್ಕೆಡೆಮಾಡುವ ಜೀವನಶೈಲಿ ಮತ್ತು ಆಹಾರಸೇವನೆಯ ಅಭ್ಯಾಸದವರಾಗಿರುತ್ತಾರೆ. ಆಹಾರ ಸೇವನೆ, ಕಾಮ ಚಟುವಟಿಕೆ, ಮಾದಕ ದ್ರವ್ಯಗಳ ಸೇವನೆ ಎಲ್ಲದರಲ್ಲೂ ಅತಿಯಾಗಿರಲು ಹಂಬಲಿಸುತ್ತಾರೆ.  ಪರಿಣಾಮವಾಗಿ ನಿಸ್ತೇಜತೆ, ಭಾರವಾದ ಮನಸ್ಸಿನೊಂದಿಗೆ ಏನು ಮಾಡಬೇಕೆಂದು ತೋಚದ ಸ್ಥಿತಿಗೆ ತಲುಪುತ್ತಾರೆ. ತಮ್ಮ ಮತ್ತು ಇತರರ ಬಗ್ಗೆ ಲೆಕ್ಕಿಸದಂತೆ ಇರುತ್ತಾರೆ. ಕೊನೆಯಲ್ಲಿ ಯಾವ ಸ್ಥಿತಿಗೆ ತಲುಪುತ್ತಾರೆಂದರೆ ತಮಗೆ ತಾವು ಸಹಾಯ ಮಾಡಿಕೊಳ್ಳಲಾಗದಂತಾಗಿ ಇತರರನ್ನು ಆಶ್ರಯಿಸಬೇಕಾಗುತ್ತದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ನಿರ್ಧರಿಸಲಾರರು. ತಾಮಸಿಕ ಆಹಾರ ಕಡಿಮೆ ಸತ್ವಯುತವಾಗಿದ್ದು, ಹಳೆಯದಾದ ಮತ್ತು ತಂಗಳು ಆಹಾರ, ಅತಿಯಾಗಿ ಕರಿದ ಮತ್ತು ಹುರಿದ ಪದಾರ್ಥಗಳು, ಸುಲಭವಾಗಿ ಜೀರ್ಣವಾಗದ ಗಡಸು ಆಹಾರ, ಹೆಚ್ಚು ಅನ್ನಿಸುವಷ್ಟು ಮಾಂಸಾಹಾರ, ಇತ್ಯಾದಿಗಳು ತಾಮಸಿಕವೆನಿಸುವ ಆಹಾರಗಳ ಪಟ್ಟಿಯಲ್ಲಿವೆ. ಮಾದಕ ದ್ರವ್ಯಗಳು, ಡ್ರಗ್ಸ್ ಮುಂತಾದವು ತಾಮಸ ಗುಣ ಪ್ರಚೋದಕಗಳು. ಮೆದುಳಿನ ಮೇಲೆ ಪ್ರಭಾವ ಬೀರುವ, ಅದನ್ನು ಮಂಕುಗೊಳಿಸುವ ಪದಾರ್ಥಗಳೆಲ್ಲವೂ ತಾಮಸಿಕ ಆಹಾರವೆನಿಸುವುವು.
     ಪ್ರತಿಯೊಬ್ಬರೂ ಸಾತ್ವಿಕ, ರಾಜಸಿಕ ಮತ್ತು ತಾಮಸ ಗುಣಗಳ ಮಿಶ್ರಣವಾಗಿರುತ್ತಾರೆ. ಕೆಲವರಲ್ಲಿ ಕೆಲವೊಂದು ಗುಣಗಳು ಪ್ರಧಾನವಾಗಿದ್ದು, ಅವು ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ. ನಾವು ಏನಾಗಬೇಕು, ಹೇಗಿರಬೇಕು ಎಂಬುದನ್ನು ಸೂಕ್ತವಾಗಿ ಆರಿಸಿಕೊಳ್ಳುವ ಅನ್ನದ ಮೂಲಕ ಮತ್ತು ಬದಲಾಯಿಸಿಕೊಳ್ಳುವ ಜೀವನಶೈಲಿಯಿಂದ ಪಡೆದುಕೊಳ್ಳಬಲ್ಲೆವು. ವಿಕೃತಿಯಿಂದ ಸುಕೃತಿಯೆಡೆಗೆ ಸಾಗಲು ಉತ್ತಮ ಆಹಾರ (ಕೇವಲ ತಿನ್ನುವುದಲ್ಲ, ನೋಡುವುದು, ಕೇಳುವುದು, ಪಂಚೇಂದ್ರಿಯಗಳಿಂದ ಸ್ವೀಕರಿಸುವುದೂ ಸೇರಿದಂತೆ) ಸೇವಿಸುವುದೇ ಉಪಾಯವಾಗಿದೆ, ಪರ್ಯಾಯ ಮಾರ್ಗವಿಲ್ಲ.
-ಕ.ವೆಂ.ನಾಗರಾಜ್.
**************
ದಿನಾಂಕ 21.3.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಮಂಗಳವಾರ, ಜೂನ್ 21, 2016

ಜಂಬೂದ್ವೀಪದ ಭರತಖಂಡ


      'ಸಪ್ತದ್ವೀಪಾ ವಸುಂಧರಾ' - ಈ ಭೂಮಂಡಲ ಏಳು ದ್ವೀಪಗಳನ್ನೊಳಗೊಂಡಿದೆ ಎಂಬುದು ಇದರ ಅರ್ಥ. ಆ ಏಳು ದ್ವೀಪಗಳೆಂದರೆ ಜಂಬೂದ್ವೀಪ, ಪ್ಲಾಕ್ಷದ್ವೀಪ, ಶಾಲ್ಮಲೀದ್ವೀಪ, ಕುಶದ್ವೀಪ, ಕ್ರೌಂಚದ್ವೀಪ, ಶಕದ್ವೀಪ ಮತ್ತು ಪುಷ್ಕರದ್ವೀಪ. ಜಂಬೂದ್ವೀಪಕ್ಕೆ ಸುದರ್ಶನ ದ್ವೀಪವೆಂಬ ಹೆಸರೂ ಇದೆ. ಈ ದ್ವೀಪದಲ್ಲಿ ಹೇರಳವಾಗಿದ್ದ ಜಂಬೂ ಮರಗಳಿಂದಲೂ ಈ ಹೆಸರು ಬಂದಿತ್ತೆನ್ನಲಾಗಿದೆ. ವಿಷ್ಣುಪುರಾಣದ ಪ್ರಕಾರ ಜಂಬೂವೃಕ್ಷದಲ್ಲಿ ಬಿಡುತ್ತಿದ್ದ ಜಂಬೂಫಲಗಳು ಆನೆಗಳ ಗಾತ್ರವಿರುತ್ತಿದ್ದವೆಂದೂ, ಕಳಿತ ಫಲಗಳು ಪರ್ವತಗಳ ಮೇಲೆ ಬಿದ್ದು ಹೊರಸೂಸಿದ ರಸದಿಂದ ಜಂಬೂನದಿ ಉಗಮವಾಯಿತೆಂದೂ ಆ ನೀರನ್ನು ಜಂಬೂದ್ವೀಪದ ಜನರು ಬಳಸುತ್ತಿದ್ದರೆಂದೂ ಹೇಳಲಾಗಿದೆ. ಬೌದ್ಧ ಧರ್ಮ ಮತ್ತು ಜೈನ ಧರ್ಮದ ಕಥೆಗಳಲ್ಲೂ ಜಂಬೂದ್ವೀಪದ ಉಲ್ಲೇಖ ಕಂಡುಬರುತ್ತದೆ. ಜಂಬೂದ್ವೀಪ ಒಂಬತ್ತು ವಿಭಾಗಗಳು ಮತ್ತು ಎಂಟು ಪ್ರಮುಖ ಪರ್ವತಗಳಿಂದ ಪ್ರಸಿದ್ಧವಾಗಿತ್ತು. ವಾಯುಪುರಾಣ, ಮಾರ್ಕಂಡೇಯ ಪುರಾಣ ಮತ್ತು ಬ್ರಹ್ಮಾಂಡ ಪುರಾಣಗಳಲ್ಲೂ ಬರುವ ಉಲ್ಲೇಖಗಳಂತೆ ಜಂಬೂದ್ವೀಪ ಕಮಲದ ಹೂವಿನ ನಾಲ್ಕು ದೊಡ್ಡ ಎಸಳುಗಳಂತೆ ವಿಭಾಗಿಸಲ್ಪಟ್ಟಿದ್ದು ಆ ಹೂವಿನ ಮಧ್ಯಭಾಗದ ದಿಂಡಿನ ಪ್ರದೇಶದಲ್ಲಿ ಬೃಹತ್ ಮೇರು ಪರ್ವತವಿತ್ತು. ಶಿವನ ಪಾದದಿಂದ ಉಗಮಿಸಿ ಬ್ರಹ್ಮಪುರಿಯನ್ನು ಸುತ್ತುವರೆದಿರುವ ಆಕಾಶಗಂಗೆ ಆಕಾಶದ ಮೂಲಕ ಮೇರುಪರ್ವತದ ಮೇಲೆ ಬಿದ್ದು ನಾಲ್ಕು ವಿರುದ್ಧ ದಿಕ್ಕುಗಳಲ್ಲಿ ಹರಿಯುವ ದೊಡ್ಡ ನದಿಗಳಾಗಿ ಜೀವಿಗಳಿಗೆ ಜೀವನದಿಗಳಾಗಿದ್ದವೆಂದೂ ವರ್ಣನೆಗಳಿವೆ.
   ಭಾಗವತದ 16ನೆಯ ಅಧ್ಯಾಯದಲ್ಲೂ ಜಂಬೂದ್ವೀಪದ ವಿಷದವಾದ ವರ್ಣನೆಯಿದೆ. ಅದರ ಪ್ರಕಾರ ಭೂಮಂಡಲದ ವ್ಯಾಪ್ತಿಯೆಂದರೆ ಸೂರ್ಯನ ಬೆಳಕು ಮತ್ತು ಶಾಖ ಎಲ್ಲಿಯವರೆಗೆ ವಿಸ್ತರಿಸಿರುವುದೋ ಮತ್ತು ಎಲ್ಲಿಯವರೆಗೆ ಚಂದ್ರ, ನಕ್ಷತ್ರಗಳು ಕಾಣುವುವವೋ ಅಲ್ಲಿಯವರೆಗೆ. ಈ ಭೂಂಡಲವು ಏಳು ಸಾಗರಗಳಿಂದ ಸುತ್ತುವರೆಯಲ್ಪಟ್ಟ ಏಳು ದ್ವೀಪಗಳಾಗಿ ವಿಭಜಿತವಾಗಿವೆ. ಈ ದ್ವೀಪಗಳ ಪೈಕಿ ಜಂಬೂದ್ವೀಪವು ಒಂಬತ್ತು ವಿಭಾಗಗಳಾಗಿ ಎಂಟು ಪರ್ವತಗಳಿಂದ ಬೇರ್ಪಡಿಸಲ್ಪಟ್ಟಿದ್ದು ಪ್ರತಿಯೊಂದು ವಿಭಾಗವೂ 9000 ಯೋಜನಗಳಷ್ಟು (72000 ಮೈಲುಗಳು) ವಿಸ್ತಾರವುಳ್ಳದ್ದಾಗಿದೆ. ಈ ಒಂಬತ್ತು ವಿಭಾಗಗಳಲ್ಲಿ ಇಳಾವರ್ತವೆಂದು ಕರೆಯಲ್ಪಡುವ ಮಧ್ಯಭಾಗದಲ್ಲಿ ಬಂಗಾರದ ಪರ್ವತ ಮೇರುಪರ್ವತವಿದ್ದು ಅದು 100,000 ಯೋಜನಗಳಷ್ಟು ಅಗಲ ಮತ್ತು 84,000 ಯೋಜನಗಳಷ್ಟು ಎತ್ತರವಿತ್ತು. ಇಳಾವರ್ತದ ಉತ್ತರದಲ್ಲಿ ನೀಲ, ಶ್ವೇತ ಮತ್ತು ಸಾರಂಗವನ ಪರ್ವತಗಳಿದ್ದು, ಪೂರ್ವ, ಪಶ್ಚಿಮ ಭಾಗದಲ್ಲಿ ಮಾಲ್ಯವನ ಮತ್ತು ಗಂಧಮಾದನ ಪರ್ವತಗಳಿದ್ದರೆ, ದಕ್ಷಿಣದಲ್ಲಿ ನಿಷಾದ, ಹೇಮಕೂಟ ಮತ್ತು ಹಿಮಾಲಯ ಪರ್ವತಗಳಿವೆ. ಹಿಮಾಲಯ ಪರ್ವತದಿಂದ ವಿಂಗಡಿಸಲ್ಪಟ್ಟ ವಿಭಾಗವೇ ಭಾರತವರ್ಷ. ಮೇರು ಪರ್ವತದ ನಾಲ್ಕು ಬದಿಗಳಲ್ಲಿ ಮಂದಾರ, ಮೇರುಮಂದಾರ, ಸುಪಾರ್ಶ್ವ ಮತ್ತು ಕುಮುದಗಳೆಂಬ ಪರ್ವತಗಳಿದ್ದು ಈ ಪರ್ವತಗಳ ಧ್ವಜಗಳಂತೆ ಕಂಗೊಳಿಸುವ ನಾಲ್ಕು ಮರಗಳು - ಮಾವು, ಸೇಬು, ಕದಂಬ ಮತ್ತು ಬಾಳೆ - ಇದ್ದು ಇವುಗಳು 100 ಯೋಜನಗಳಷ್ಟು ಅಗಲ (800 ಮೈಲುಗಳು) ಮತ್ತು 1100 ಯೋಜನಗಳಷ್ಟು ಎತ್ತರ (8800 ಮೈಲುಗಳು) ಇದ್ದವಂತೆ. ಅವುಗಳ ಕೊಂಬೆಗಳೂ 1100 ಯೋಜನಗಳಷ್ಟು ಹರಡಿದ್ದವಂತೆ. ಅಷ್ಟು ಎತ್ತರದಿಂದ ಬಿದ್ದ ಮರದ ಹಣ್ಣುಗಳ ರಸ ಹರಿಯುವ ನದಿಗಳಾಗಿ ಸುಗಂಧ ಬೀರುತ್ತಿದ್ದವಂತೆ.
     ಪುಣ್ಯಭೂಮಿ, ಮಾತೃಭೂಮಿ, ಪಿತೃಭೂಮಿ, ಕರ್ಮಭೂಮಿ ಭಾರತದ ನೆಲೆವೀಡು ಜಂಬೂದ್ವೀಪ. ಜಂಬೂದ್ವೀಪದ ಎಲ್ಲೆಡೆ ಭಾರತದ ಹಿರಿಮೆ, ಗರಿಮೆ ಮತ್ತು ಸಂಸ್ಕೃತಿಯ ಪ್ರಭಾವ ಹರಡಿತ್ತು. ಆಗಿನ ಭಾರತದ ಮೇರೆಗಳು ಈಗಿನಂತಿರಲಿಲ್ಲ. ಕಾಲಾಂತರದಲ್ಲಿ ಭೌಗೋಳಿಕ ಕಾರಣವೂ ಸೇರಿದಂತೆ ಅನೇಕ ಕಾರಣಗಳಿಂದ ಮೇರೆಗಳು, ಭೂರಚನೆಗಳು ಮಾರ್ಪಾಡಾಗಿವೆ. ಆದರೂ ಜಂಬೂದ್ವೀಪೇ ಭರತವರ್ಷೇ ಭರತಖಂಡೇ. . . ಎಂಬ ಪದಗಳ ಪ್ರಯೋಗ ಮಾತ್ರ ಇಂದಿಗೂ ನಿಂತಿಲ್ಲ.
     ಪುರಾಣ, ಪುಣ್ಯಕಥೆಗಳಲ್ಲಿನ ವರ್ಣನೆ ತಿಳಿದೆವು. ಇನ್ನು ಕೆಳದಿ ಸಂಸ್ಥಾನದ ಆಸ್ಥಾನಕವಿ ಲಿಂಗಣ್ಣನ ಐತಿಹಾಸಿಕ ಕೃತಿ ಕೆಳದಿನೃಪ ವಿಜಯದಲ್ಲಿ ಬರುವ ಜಂಬೂದ್ವೀಪದ ಸುತ್ತಲೂ ಆವರಿಸಿದ್ದ ಸಮುದ್ರದ ಕಲ್ಪನೆ, ವಿವರಣೆ  ನೋಡೋಣ. ಕವಿಯೇ ಹೇಳಿಕೊಂಡಿರುವಂತೆ ಕೆಳದಿಪರಾಮೇಶ್ವರನೊಲಿದುಸುರ್ದ ಪ್ರಾಕೃತ ಸಂಸ್ಕೃತ ಮೃದುಭಾಷಾ ಕವನದಿನಧಿಕರಮ್ಯಮಾಗಿರ್ಪುದರಿಂ ಶ್ರೀಕೆಳದಿನೃಪವಿಜಯಮೆನಿಪೀಕಾವ್ಯಂ ಸೇವ್ಯಮೆನಿಸಿ ಶೋಭಿಸುತಿರ್ಕಂ. ಈ ಶೋಭಿತ, ಸೇವ್ಯ ಕಾವ್ಯದಲ್ಲಿ ಬರುವ ಸಮುದ್ರದ ವರ್ಣನೆ ರಂಜನೀಯವಾಗಿದೆ.
     ಎತ್ತರೆತ್ತರಕ್ಕೆ ಚಿಮ್ಮುವ ಹೊಳೆಯುವ ಅಲೆಗಳು, ಅಲೆಗಳಲ್ಲಿ ಓಡಾಡುವ ಭಯಂಕರ ಮೀನುಗಳು, ಆಮೆಗಳು, ಏಡಿಗಳು, ಮೊಸಳೆಗಳು, ನೀರಾನೆಗಳು, ಹಾವುಗಳೇ ಮುಂತಾದ ವಿಧವಿಧ ಜಲಚರಗಳು, ಅವುಗಳು ಚಿಮ್ಮಿಸುವ ನೀರಹನಿಗಳು, ನೊರೆಗಳು, ಶಂಖ, ಚಕ್ರಗಳಿಂದ ಶೋಭಿಸುವ ಆ ಸಾಗರವು ಶಿವನ ನಿಷಂಗ (ಬತ್ತಳಿಕೆ), ಅಚ್ಯುತನ ಪಾಸು (ವಿಷ್ಣುವಿನ ಹಾಸಿಗೆ), ವರುಣನ ಅರಮನೆ, ಚಂದಿರನ ಜನ್ಮಸ್ಥಳ, ಮೈನಾಕ ಪರ್ವತದ ರಕ್ಷಾಕವಚ, ವಡಬಾಗ್ನಿಯ ಉಷ್ಣ ಶಮನಗೊಳಿಸುವ ಜಲಪಾತ್ರೆ ಹಾಗೂ ಲಕ್ಷ್ಮಿಯ ತವರುಮನೆಯಾಗಿ ಶ್ರೇಷ್ಠ ರತ್ನ, ಮುತ್ತುಗಳ ಭಂಡಾರವಾಗಿದೆ. ಸಮುದ್ರವನ್ನು ಶ್ರೀಹರಿಗೆ ಹೋಲಿಸುವ ಕವಿ  ದೊಡ್ಡ ದೊಡ್ಡ ಅಲೆಗಳನ್ನು ಅವನ ತೋಳುಗಳಿಗೂ, ಸುಳಿಯನ್ನು ಸುದರ್ಶನ ಚಕ್ರಕ್ಕೂ, ಸಮುದ್ರದ ನೊರೆಯನ್ನು ಅವನ ಮಂದಹಾಸಕ್ಕೂ, ಸಮುದ್ರದ ಆಳ ವಿಸ್ತಾರಗಳು ಉದರದೊಳಗಣಜಾಂಡ (ಹೊಟ್ಟೆಯಲ್ಲಿ ಇರುವ ಬ್ರಹ್ಮಾಂಡ), ಹೊಳೆಯುವ ಜಲ ಅವನ ಕಾಂತಿ ಮತ್ತು ಬಡಬಾನಲವೇ ಅವನುಟ್ಟ ಪೀತಾಂಬರಕ್ಕೂ ಸಮೀಕರಿಸಿ ವರ್ಣಿಸುತ್ತಾನೆ.
     ಅಸಂಖ್ಯಾತ ನದಿಗಳು, ತೊರೆಗಳನ್ನು ತನ್ನಲ್ಲಿ ಅಡಗಿಸಿ ಅರಗಿಸಿಕೊಳ್ಳುವ ಚಕ್ರವರ್ತಿ ಸಾರ್ವಭೌಮ ಸಮುದ್ರ ಹರಿಯ ನಂದಗೋಕುಲದಂತೆ ರಮಣೀಯ, ರುದ್ರಮನೋಹರ, ಮನ್ಮಥನಂತೆ ಸದಾ ಸುಂದರ, ಅತುಲ ಜಲಚರಗಳ ಸಮೂಹದಿಂದ ವೈಭವಯುತ, ಸೂರ್ಯನಂತೆ ಹೊಳೆಯುವ, ರೋಗವಿಲ್ಲದ, ಸೌಂದರ್ಯ ಮತ್ತು ಉಪ್ಪುಗಳ ಸಮ್ಮಿಳಿತ ಲಾವಣ್ಯ ಹೊಂದಿದ, ಚಂದ್ರೋದಯದಂತೆ ಭೂಮಿಗೆ ಶೀತಲ ಅನುಭವ ನೀಡುವ ಸಮುದ್ರಕ್ಕೆ ಸಮುದ್ರವೇ ಸಾಟಿ. ಇಷ್ಟಾದರೂ ಆ ಸಮುದ್ರರಾಜನಿಗೂ ಚಿಂತೆ ತಪ್ಪಿಲ್ಲ. ಮಗಳು ಲಕ್ಷ್ಮಿ ಅತಿ ಚಂಚಲೆ, ಅಳಿಯ ವಿಷ್ಣು ಹೂಗಣ್ಣ (ತಾವರೆ ಕಣ್ಣಿನವನು), ಮಗ ಚಂದ್ರನೋ ಕ್ಷಯರೋಗಿ, ಮೊಮ್ಮಗ ಮನ್ಮಥನಿಗೆ ದೇಹವೇ ಇಲ್ಲದೆ ಅನಂಗನಾಗಿದ್ದಾನೆ. ಅವನ ವಿಷಾದದ ನಿಟ್ಟುಸಿರೇ ಸಮುದ್ರದ ಅಲೆಗಳ ಭೋರ್ಗರೆತವಾಗಿ ಹೊರಹೊಮ್ಮುತ್ತಿದೆ.
     ದೇವತೆಗಳಿಗೆ ಅಮೃತವನ್ನು ಕೊಟ್ಟ, ಶಿವನಿಗೆ ನೀಲಕಂಠನೆಂಬ ಹೆಸರು ಬರಲು ಕಾರಣವಾದ, ವಿಷ್ಣುವಿಗೆ ಲಕ್ಷ್ಮೀಪತಿಯೆಂದು ಹೆಸರು ಬರಲು ಕಾರಣವಾದ ಆ ಜಲರಾಜನ ಹಿರಿಮೆಯನ್ನು ಕವಿಯ ಮಾತಿನಲ್ಲೇ ಕೇಳುವುದು ಸೊಗಸು!
                      ಅಮರರ್ಗಮೃತಾಶನರೆಂ
                      ದುಮೆಯಾಣ್ಯಗೆ ನೀಲಕಂಠನೆಂದಚ್ಯುತಗಂ
                      ಕ್ರ್ರಮದಿಂ ಕಮಲಾಪತಿಯೆಂ
                   ದಮರ್ದಿರೆ ಪೆಸರಿತ್ತ ಜಲಧಿಯೇಂ ರಂಜಿಸಿತೋ || . . (ಕೆ.ನೃ.ವಿ.1.5)
      ಈರೀತಿ ಶೋಭಿಸುವ ಸಮುದ್ರದ ನಡುವೆ ವಿರಾಜಿಸುತ್ತಿದ್ದ ಭವ್ಯ ಕಮಲವೇ ಜಂಬೂದ್ವೀಪ !! ಈ ಜಂಬೂದ್ವೀಪದ ಮಧ್ಯಭಾಗದಲ್ಲಿದ್ದುದು ಕನಕಾಚಲ (ಬಂಗಾರದ ಪರ್ವತ-ಮೇರುಪರ್ವತ). ಹಿಂದೊಂದು ಕಲ್ಪದಲ್ಲಿ ಯಾರು ಶ್ರೇಷ್ಠರು ಎಂಬ ಕುರಿತು ಬ್ರಹ್ಮ ಮತ್ತು ವಿಷ್ಣುಗಳ ನಡುವೆ ವಿವಾದ ನಡೆದ ಸಂದರ್ಭದಲ್ಲಿ ಆ ವಿವಾದವನ್ನು ನಿಲ್ಲಿಸುವ ಸಲುವಾಗಿ ಸೃಷ್ಟಿಯಾದ ಆದಿ-ಅಂತ್ಯಗಳಿಲ್ಲದ ಮಹಾದಿವ್ಯಲಿಂಗದ ರೀತಿಯಲ್ಲಿ ಚೆಲ್ವಾಯ್ತು ಕಣ್ಗೆ ಕಾಂಚನಶೈಲ ಪರ್ವತ. ಮೇರು ಪರ್ವತದ ದಕ್ಷಿಣ ದಿಕ್ಕಿನಲ್ಲಿ ಪೂರ್ವ ಪಶ್ಚಿಮ ಸಮುದ್ರಗಳೇ ಅಂಚಾಗಿದ್ದು ಎತ್ತರೆತ್ತರದಲ್ಲಿ ಆಕಾಶವನ್ನು ಮುಟ್ಟಿ ಸೆಟೆದು ನಿಂತಿದ್ದುದು ಹಿಮವತ್ಪರ್ವತ. ಆ ಗಿರಿರಾಜನಾದರೋ ವಿಷ್ಣುವಿನ ವಾಹನವಾದ ಗರುಡನಿಗೆ ಆಧಾರವಾಗಿ, ಸಾಧು-ಸಜ್ಜನರಿಗೆ ಆಶ್ರಯತಾಣವಾಗಿ, ಅನೇಕ ಸಹಶಿಖರಗಳೊಡಗೂಡಿದ್ದು, ಆದಿಶೇಷನೆಂಬ ಕಾಲ್ಗಡಗ ಧರಿಸಿದ ಪಾದ ಉಳ್ಳವನು. ಹೈಮಾಚಲದ ದಕ್ಷಿಣಭಾಗದಲ್ಲಿ ಸಂಪತ್ಭರಿತವಾದ ಪುಣ್ಯದ ಭಂಡಾರವೆನಿಸಿ ಕರ್ಮಭೂಮಿಯಾಗಿ ಕಂಗೊಳಿಸುತ್ತಿದ್ದುದೇ ಭರತಖಂಡ.
-ಕ.ವೆಂ.ನಾಗರಾಜ್.
***************
ದಿನಾಂಕ 14.03.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಭಾನುವಾರ, ಜೂನ್ 19, 2016

ಒಂಟಿತನವೋ? ಏಕಾಂತವೋ?


     ಒಂಟಿತನ - ಜೀವಿಗಳು ಸಾಮಾನ್ಯವಾಗಿ ಅನುಭವಿಸುವ ಅನಿವಾರ್ಯ ಸ್ಥಿತಿ. ತಾನೊಬ್ಬನೇ, ತನ್ನೊಡನೆ ಇತರರಿಲ್ಲ ಎಂಬ ಭಾವವನ್ನು ಒಂಟಿತನವೆನ್ನಬಹುದು. ಇಂತಹ ಸ್ಥಿತಿಯಲ್ಲಿ ಆಹಾರ ರುಚಿಸುವುದಿಲ್ಲ, ನೀರು ಹಿತವಾಗುವುದಿಲ್ಲ. ಆಹಾರ ಸೇವಿಸಿದರೂ ಅನಿವಾರ್ಯ ಕ್ರಿಯೆಯಂತೆ ಜರುಗುವುದು. ಯಾವುದರಲ್ಲೂ ಆಸಕ್ತಿ ಬರದು. ಆಲಸ್ಯತನ ಮೈವೆತ್ತುವುದು. ಸಮಯ ನಿಧಾನವಾಗಿ ಚಲಿಸುವುದು. ತಾತ್ಕಾಲಿಕ ಒಂಟಿತನ ಸಹ್ಯ; ದೀರ್ಘಕಾಲದ ಒಂಟಿತನ ಖಿನ್ನತೆಗೆ ದಾರಿ. ಒಂಟಿತನದಿಂದ ಬರುವ ಹತಾಶೆ, ಸಿಟ್ಟು, ಅಸಹಾಯಕತೆಗಳು ಹುದುಗಿಸಿಟ್ಟಿದ್ದ ಆಕ್ರೋಶ ಒಮ್ಮೆಲೇ ಹೊರನುಗ್ಗಿ ಅಸಹ್ಯಕರ ವಾತಾವರಣ ಸೃಷ್ಟಿಸುವುದರ ಜೊತೆಗೆ, ಸಂಬಂಧಗಳನ್ನು ಶಾಶ್ವತವಾಗಿ ಮುರಿಯುವಂತೆ ಮಾಡಬಹುದು. ಪರಿಸ್ಥಿತಿ ಬಿಗಡಾಯಿಸಿ ಸರಿಪಡಿಸಲಾಗದ ಹಾನಿ ಉಂಟು ಮಾಡಬಹುದು. ದುರ್ಬಲ ಮನಸ್ಕರು ಆತ್ಮಹತ್ಯೆ ಸಹ ಮಾಡಿಕೊಳ್ಳಬಹುದು. ಒಂಟಿತನ ಸ್ನೇಹಕ್ಕಾಗಿ ಹಪಹಪಿಸುವ ಹಂಬಲಿಕೆಯ ಸೂಚಿ.
     ಅವನೊಬ್ಬ ಆದರ್ಶವಾದಿ ಯುವಕ. ಕನಸುಗಳನ್ನು ಕಟ್ಟಿಕೊಂಡವನು, ನ್ಯಾಯ, ನೀತಿ, ಧರ್ಮ ಎಂದು ಹೋರಾಡುವ ಮನೋಭಾವದ ಅವನಿಗೆ ಕುಟುಂಬದ ಸದಸ್ಯರ ಸಹಕಾರ, ಬೆಂಬಲ ಸಿಗುವುದಿಲ್ಲ. ನಾಲ್ಕು ಜನರಂತೆ ಅವನಿಲ್ಲ, ಉದ್ಧಾರವಾಗುವುದಿಲ್ಲವೆಂಬ ಆತಂಕ ಪೋಷಕರಿಗೆ. ಅನೇಕ ರೀತಿಯಲ್ಲಿ ತಿಳಿ ಹೇಳುತ್ತಾರೆ, ಬೈದು ಬುದ್ಧಿ ಹೇಳುತ್ತಾರೆ, ಅವರಿವರಿಂದ ಉಪದೇಶ ಮಾಡಿಸುತ್ತಾರೆ. ಆದರೆ ಆದರ್ಶದ ಬೆನ್ನು ಬಿದ್ದ ಯುವಕನಿಗೆ ಅವಾವುದೂ ರುಚಿಸುವುದಿಲ್ಲ. ಒಳ್ಳೆಯ ವಿಚಾರಕ್ಕೆ ಮನೆಯವರೇ ಬೆಂಬಲಿಸದಿದ್ದರೆ ಹೇಗೆ ಎಂಬುದು ಅವನ ವಾದ. ಕೊನೆಗೆ ಮನೆಯವರು ಸುಮ್ಮನಾದರೂ ಅವರ ಕಿರಿಕಿರಿ, ಗೊಣಗಾಟಗಳು ತಪ್ಪುವುದೇ ಇಲ್ಲ. ಕಠಿಣ ಆದರ್ಶದ ಹಾದಿ ಹಿಡಿದ ಅವನಿಗೆ ಮನೆಯ ಹೊರಗೂ ಪ್ರೋತ್ಸಾಹ ಸಿಗುವುದಿಲ್ಲ. ತಾನು ಮಾಡುತ್ತಿರುವುದು ಸರಿ ಎಂಬ ಅವನ ಅಂತರಂಗದ ಒಪ್ಪಿಗೆ ಮಾತ್ರ ಅವನ ಜೊತೆಗಾರನಾಗಿರುತ್ತದೆ. ಬೆನ್ನು ತಟ್ಟುವವರಿಲ್ಲದ ಅವನನ್ನು ಪ್ರಿಯರ ಹೀನೈಕೆ ಕುಗ್ಗಿಸುತ್ತದೆ, ಒಂಟಿತನದ ಅನುಭವ ಮಾಡಿಸುತ್ತದೆ. ಒಳ್ಳೆಯವನಾಗು, ನೀನು ಒಂಟಿಯಾಗುವೆ ಎಂಬುದಕ್ಕೆ ಉದಾಹರಣೆಯಿದು.
     ಹದಿಹರೆಯದ ಹುಚ್ಚು ಪ್ರೇಮಿಗಳ ಒಂಟಿತನ ಮತ್ತೊಂದು ತರಹ. ಪ್ರೇಮಿಯಿಲ್ಲದೆ ಬಾಳು ಶೂನ್ಯವೆಂದು ಭಾವಿಸಿ ಕೊರಗುವ, ಹುಚ್ಚಾಗುವ ದೇವದಾಸಗಳದ್ದು ಒಂದೆಡೆಯಾದರೆ, ತನಗೆ ದಕ್ಕದವರು ಬೇರೆಯವರಿಗೂ ಸಿಗಬಾರದೆಂದು ಆಸಿಡ್ ಎರಚುವ, ಕೊಲೆ ಮಾಡುವವರದು ಮತ್ತೊಂದೆಡೆ! ಆತ್ಮಹತ್ಯೆ ಮಾಡಿಕೊಳ್ಳುವವರದೂ ಒಂಟಿತನವನ್ನು ಎದುರಿಸಲಾಗದವರ ಮಗದೊಂದು ರೀತಿ. ಅವನ/ಅವಳ ನೆನಪಿನಲ್ಲಿ ಕೊನೆಯವರೆಗೂ ಮದುವೆಯಾಗದೇ ಉಳಿಯುವ ಪ್ರೇಮಿಗಳನ್ನೂ, ಮಾನಸಿಕ ಕಾಯಿಲೆಗಳಿಂದ ನರಳುವವರನ್ನೂ ಕಾಣಬಹುದು. ಕೇವಲ ಇವರಷ್ಟೇ ಅಲ್ಲ, ಅತಿಯಾಗಿ ಹಚ್ಚಿಕೊಂಡ ಸ್ನೇಹಿತರು, ಬಂಧುಗಳು, ಕುಟುಂಬದವರು ಯಾರೇ ಆಗಲಿ ದೂರವಾದಾಗ/ಕಾಲವಾದಾಗ ಸಹ ಒಂಟಿತನ ಕಾಡುತ್ತದೆ. ವೃದ್ಧಾಪ್ಯದಲ್ಲಿ ಮಕ್ಕಳು ಏನು ಮಾಡದಿದ್ದರೂ ಪರವಾಗಿಲ್ಲ, ಪ್ರೀತಿಯಿಂದ ಮಾತನಾಡಿಸಿದರೆ ಸಾಕು ಎಂದು ಹಂಬಲಿಸುವವರಿರುತ್ತಾರೆ.
     ಪ್ರೀತಿ, ವಿಶ್ವಾಸ, ಸ್ನೇಹದ ಕೊರತೆ ಒಂಟಿತನದ ಮೂಲ. ಒಂಟಿತನ ಕಾಡಬಾರದೆಂದರೆ ಪರಸ್ಪರ ಪ್ರೀತಿ, ವಿಶ್ವಾಸಗಳಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಆಗ ಅಂತರಂಗವಾದರೂ ಜೊತೆಗೆ ಇದ್ದು ಸಮಾಧಾನಿಸುತ್ತದೆ. ತಪ್ಪಿದ್ದು ತಿದ್ದಿಕೊಳ್ಳದಿದ್ದರೆ ಅಂತರಂಗವೂ ಜೊತೆಗಿರುವುದಿಲ್ಲ. ಕಳೆದುಕೊಳ್ಳುವವರು ಇನ್ನು ಯಾರೂ ಉಳಿದಿಲ್ಲದಾಗ, ಸ್ವಂತಿಕೆಗೆ ಬೆಲೆಯಿಲ್ಲವಾದಾಗ ಅದನ್ನು ಜೀವನದ ಸಾವು (ಜೀವದ ಸಾವಲ್ಲ) ಎನ್ನಬಹುದು. ಅಂತಹ ಸಾವು ಜೀವನಕ್ಕೆ ಬರಬಾರದೆಂದರೆ ಒಳಗಿನ ಮಾತುಗಳಿಗೆ ಕಿವಿಗೊಡಬೇಕು.
     ಮತ್ತೊಂದು ರೀತಿಯ ಒಂಟಿತನವಿದೆ. ಅದರಲ್ಲಿ ಹಿತವಿದೆ. ಅದೆಂದರೆ ವಿವಿಧ ರಂಗಗಳಲ್ಲಿ ಸುಪ್ರಸಿದ್ಧರಾದವರ, ಮುಖಂಡರ, ಹಿರಿಯ ಅಧಿಕಾರಿಗಳ ಒಂಟಿತನ. ಅವರುಗಳು  ಒಂಟಿತನವನ್ನು ಒಪ್ಪಿಕೊಳ್ಳಲೇಬೇಕು, ಅಪ್ಪಿಕೊಳ್ಳಲೇಬೇಕು. ಒಂಟಿಯಾಗಿರುವುದೆಂದರೆ ಇತರರಿಗಿಂತ ಭಿನ್ನವಾಗಿರುವುದು, ಇತರರಿಗಿಂತ ಭಿನ್ನವೆಂದರೆ ಒಂಟಿಯಾಗಿರುವುದು ಎಂದು ಅವರ ಮಟ್ಟಿಗೆ ಹೇಳಬಹುದು. ಅವರುಗಳನ್ನು ಸಮನಾಗಿ ಪರಿಗಣಿಸುವವರ ಸಂಖ್ಯೆ  ಬಹಳ ಕಡಿಮೆ. ಅವರ ಒಂಟಿತನದಲ್ಲೇ ಅವರ ಸೃಜನಾತ್ಮಕ ಶಕ್ತಿ ಹೊರಹೊಮ್ಮುತ್ತದೆ. ಇದರಲ್ಲೂ ಒಂದು ಅಪಾಯವಿದೆ. ಅದೆಂದರೆ ಸುಪ್ರಸಿದ್ಧರಾದವರು ಕಾರಣಾಂತರಗಳಿಂದ ಪ್ರಸಿದ್ಧಿ ಕಳೆದುಕೊಂಡರೆ, ಅಧಿಕಾರ ಚ್ಯುತಿಯಾದರೆ ಅವರ ಜೊತೆಗಿದ್ದು ಬಹುಪರಾಕ್ ಹೇಳುತ್ತಿದ್ದವರು ಇದ್ದಕ್ಕಿದ್ದಂತೆ ಕಣ್ಮರೆಯಾದರೆ ಅನುಭವವಾಗುವ ಒಂಟಿತನದ ನೋವು ವರ್ಣನಾತೀತ. ಕ್ಷಣಿಕ ವ್ಯಾಮೋಹದಿಂದ, ಹಣದ ದಾಹದಿಂದ ಅಧಿಕಾರ, ಸ್ಥಾನ, ಮಾನಗಳನ್ನು ಕಳೆದುಕೊಂಡ ಮಂತ್ರಿಗಳ/ಹಿರಿಯ ನಾಯಕರ ಜೊತೆಗೆ ಯಾರಿರುತ್ತಾರೆ?
     ಇನ್ನೊಂದು ಅಪಾಯಕಾರಿ ಒಂಟಿತನವಿದೆ! ಒಟ್ಟಿಗಿದ್ದರೂ ಕಾಡುವ ಒಂಟಿತನ! ಎಲ್ಲೆಲ್ಲೂ ನೀರು, ಕುಡಿಯಲು ತೊಟ್ಟೂ ನೀರಿಲ್ಲ ಎಂಬಂತಹ ಸ್ಥಿತಿಯದು. ಒಂದು ಉದಾಹರಣೆ ನೋಡೋಣ. ಎಲ್ಲರೂ ಒಟ್ಟಿಗೇ ಟಿವಿ ನೋಡುತ್ತಿರುತ್ತಾರೆ. ಪರಸ್ಪರ ಮಾತುಗಳು ಅನಿವಾರ್ಯವಾದರೆ ಮಾತ್ರ ಆಡುತ್ತಾರೆ. ಅವರವರ ಪಾಡು ಅವರಿಗೆ. ಪರಸ್ಪರರನ್ನು ಸಹಿಸಿಕೊಂಡು ಹೋಗುತ್ತಿರುತ್ತಾರೆ,  ಅಸಹನೀಯವಾದಾಗ ಕಿರುಚಾಡುತ್ತಾರೆ, ಜಗಳವಾಡುತ್ತಾರೆ, ಅನಿವಾರ್ಯವೆಂಬಂತೆ ಸುಮ್ಮನಾದರೂ ಎಲ್ಲರೂ ಅಲ್ಲಿ ಒಂಟಿಗಳೇ. ನೆಂಟರು, ಸ್ನೇಹಿತರು ಬಂದರೂ ಔಪಚಾರಿಕವಾದ ಮಾತುಗಳನ್ನಾಡಿ ಪುನಃ ಟಿವಿಯ ಕಡೆ ಗಮನ ಕೊಡುತ್ತಾರೆ. ಬಂದವರಿಗೆ ಏಕಾದರೂ ಬಂದೆವಪ್ಪಾ ಅನ್ನುವ ಸ್ಥಿತಿ. ಕಛೇರಿಗಳಲ್ಲೂ ಅಷ್ಟೇ. ಒಂಟಿತನವನ್ನು ಅನುಭವಿಸುವ ಅಧಿಕಾರಿಗಳು, ನೌಕರರನ್ನು ಕಾಣಬಹುದು. ಇಲ್ಲಿ ಗಮನಿಸುವ ಅಂಶವೆಂದರೆ ಸ್ವಂತಿಕೆಗೆ, ಅಹಂಗೆ ಬೀಳುವ ಪೆಟ್ಟು ಒಂಟಿತನವಾಗಿ ಕಾಡುವುದು! ಪರಸ್ಪರರ ಅಪನಂಬಿಕೆಯಿಂದ ಉಂಟಾಗುವ ಒಂಟಿತನ ನರಕಸದೃಶ. ಉದ್ದೇಶೂರ್ವಕವಾಗಿ ಅಹಂಗೆ ಪೆಟ್ಟು ಕೊಡುವ ಕುಟುಂಬದವರೇ, ಜೊತೆಗಾರರೇ, ಸಹೋದ್ಯೋಗಿಗಳೇ ಒಂಟಿತನದ ನೋವು ಕೊಡುವವರು!
     ಒಂಟಿತನದ ತಾಪ ಕಡಿಮೆ ಮಾಡಿಕೊಳ್ಳಲು ಓದುವುದು, ಬರೆಯುವುದು, ಸಂಗೀತ ಕೇಳುವುದು, ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಒಳ್ಳೆಯ ಅಭ್ಯಾಸಗಳಾದರೆ, ದುಶ್ಚಟಗಳಿಗೆ ದಾಸರಾಗುವುದು ಇನ್ನೊಂದು ರೀತಿಯ ಪಲಾಯನ. ಸಿಗರೇಟು ಸೇದುವುದು, ಕುಡಿಯುವುದು, ಜೂಜಾಡುವುದು, ವೇಶ್ಯಾಸಂಗ, ಇತ್ಯಾದಿಗಳು ಇದರಲ್ಲಿ ಸೇರುತ್ತವೆ. ಕ್ರಮೇಣ ದುಶ್ಚಟಗಳು ಅವರನ್ನೇ ಆಕ್ರಮಿಸಿ ಅವರನ್ನಲ್ಲದೆ ಅವರನ್ನು ನಂಬಿದವರಿಗೂ ನಾನಾ ರೀತಿಯ ತೊಂದರೆ ಕೊಡುತ್ತವೆ, ಹೆಚ್ಚಿದ ಒಂಟಿತನದಿಂದ ಬಳಲುವಂತೆ ಮಾಡುತ್ತವೆ. ಒಂಟಿತನ ಅನುಭವ ಕೊಡುತ್ತದೆ. ಸರಿಯಾಗಿ ಬಳಸಿಕೊಂಡಲ್ಲಿ ವರವಾಗುತ್ತದೆ. ಒಳ್ಳೆಯ ಸಾಹಿತ್ಯ, ಸಂಗೀತ, ಇತ್ಯಾದಿಗಳು ಕುಡಿಯೊಡೆಯುವುದು ಆಗಲೇ. ಪ್ರೀತಿಸುವವರ, ತನ್ನನ್ನು ಗುರುತಿಸುವವರ ಕೊರತೆ ನೀಗಿಸಿಕೊಳ್ಳಲು ಅವರೇ ಇತರರನ್ನು ಪ್ರೀತಿಸಲು, ಗೌರವಿಸಲು ಮುಂದಾದರೆ ಪ್ರತಿಪ್ರೀತಿ, ಪ್ರತಿಗೌರವ ಸಿಗಲಾರದೆ? ಬಂದದ್ದೂ ಒಂಟಿ, ಹೋಗುವುದೂ ಒಂಟಿ, ಆದರೆ ನಡುವಿನ ಜೀವನದಲ್ಲಿ ಪರಸ್ಪರರ ಅವಲಂಬನೆ, ಅಗತ್ಯತೆ ಬರುವುದರಿಂದ ಒಂಟಿತನ ಹೆಚ್ಚು ಕಾಡುತ್ತದೆ. ಪ್ರೀತಿ, ವಿಶ್ವಾಸಗಳು ಒಂಟಿಯಲ್ಲವೆಂದು ಭಾವಿಸುವಂತೆ ಮಾಡುತ್ತದೆ. ಆಳವಾಗಿ ಯೋಚಿಸಿದರೆ ಸಮುದಾಯ, ಸಂಘಟನೆ, ಜಾತಿ, ಧರ್ಮ, ಗುಂಪು, ಇತ್ಯಾದಿಗಳೂ ಸಹ ಒಂಟಿತನವನ್ನು ಹೋಗಲಾಡಿಸುವ ಸಲುವಾಗಿಯೇ ಹುಟ್ಟಿಕೊಂಡದ್ದು ಎಂದು ಅನ್ನಿಸದಿರದು. ದುಃಖ ಅನುಭವಿಸಲು ಒಬ್ಬರು ಇದ್ದರೂ ಆಗುತ್ತದೆ, ಆದರೆ ಸಂತೋಷ ಹಂಚಿಕೊಳ್ಳಲು ಇಬ್ಬರಾದರೂ ಇರಬೇಕು. ಆದ್ದರಿಂದ ಮನುಜ-ಮನುಜರ ನಡುವೆ ಗೋಡೆಗಳನ್ನು ಕಟ್ಟದೆ ಸೇತುವೆಗಳನ್ನು ಕಟ್ಟಿದರೆ ಒಂಟಿತನ ಕಡಿಮೆಯಾದೀತು. ಒಂಟಿಯಾಗಿ ಇರಬಯಸುವವರು ಯಶಸ್ವಿ ಮಾನವರಲ್ಲ. ಇತರ ಹೃದಯಗಳ ಮಿಡಿತ ಕೇಳದವರ ಹೃದಯ ಬಾಡುತ್ತದೆ, ಇತರರ ಮಾತುಗಳನ್ನು ಕೇಳದವನ ಮೆದುಳು ಕುಗ್ಗುತ್ತದೆ.
     ಒಂಟಿತನದಂತೆಯೇ ತೋರುವ, ಆದರೆ ಒಂಟಿತನವಲ್ಲದ ಸಂಗತಿಯೊಂದಿದೆ. ಅದೇ ಏಕಾಂತ! ಒಂಟಿತನ ತನ್ನತನದ ಬಡತನವಾದರೆ, ಏಕಾಂತ ತನ್ನತನದ ವೈಭವದ ಸ್ಥಿತಿ. ಒಂಟಿತನ ಒಬ್ಬನೇ ಇರುವ ನೋವ ಹೇಳಿದರೆ, ಏಕಾಂತ ಒಬ್ಬನೇ ಇರುವ ಸೊಬಗ ತೋರುವುದು. ಏಕಾಂತದಲ್ಲಿ ಬರಹಗಾರನೊಬ್ಬ ಅರ್ಥವಾಗದ ಸಂಗತಿಗಳಿಗೆ ಅರ್ಥ ಹುಡುಕುತ್ತಾನೆ, ಸಂಗೀತಗಾರ ಹೊಸ ಆಯಾಮಗಳ ಕುರಿತು ಧ್ಯಾನಿಸುತ್ತಾನೆ, ವಿವಿಧ ಸ್ತರಗಳವರು ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಮುಂದುವರೆಯುವ ಕುರಿತು ಚಿಂತಿಸುತ್ತಾರೆ, ಸಾಧಕ ಬದುಕಿನ ಅರ್ಥ ತಿಳಿಯುವ ಪ್ರಯತ್ನ ನಡೆಸುತ್ತಾನೆ. ಆಗ ಅವರುಗಳ ಜೊತೆಗಿರುವುದು, ದಾರಿ ತೋರುವುದು ಅವರ ಅಂತರಂಗ. ತಪ್ಪುಗಳನ್ನು ಇತರರ ಎದುರಿಗೆ ಒಪ್ಪಿಕೊಳ್ಳದಿದ್ದರೂ ಅಂತರಂಗದ ಎದುರು ತಲೆಬಾಗಲೇಬೇಕು, ಗೋಚರಿಸದ ಸತ್ಯ ಗೋಚರಿಸುವುದು ಆಗಲೇ. ಅದೇ ಏಕಾಂತದ ಮಹಿಮೆ. ಏಕಾಂತ ಪ್ರೌಢತೆಯ ಸಂಕೇತ. ಏಕಾಂತದಲ್ಲಿ ಚಟುವಟಿಕೆಗಳ ಉದಯವಾಗುತ್ತದೆ, ಅಲ್ಲಿ ಚಲನೆಯಿಲ್ಲದ ಕ್ರಿಯೆಯಿದೆ, ಶ್ರಮವಿರದ ಕೆಲಸವಿದೆ, ಕಣ್ಣು ಮೀರಿದ ದೃಷ್ಟಿಯಿದೆ, ಬಯಕೆ ಮೀರಿದ ಆಸೆಯಿದೆ, ಅನಂತ ತೃಪ್ತಿಯ ಭಾವವಿದೆ. ಏಕಾಂತ ತನ್ನತನವನ್ನು ಬೆಳೆಸುತ್ತದೆ. ಅಂತರಂಗ ಬಹಿರಂಗಕ್ಕೆ ಹೊಂದಿಕೆಯಾಗದಿದ್ದರೆ ಒಂಟಿತನ ಕಾಡುತ್ತದೆ. ಏಕಾಂತ ಹೊಂದಿಕೆ ಮಾಡಿಕೊಳ್ಳುವ ದಾರಿ ತೋರುತ್ತದೆ, ಒಂಟಿಯಲ್ಲವೆಂಬ ಭಾವಕ್ಕೆ ಇಂಬು ಕೊಡುತ್ತದೆ, ನಾವು ನಾವಾಗಿರಲು ಏಕಾಂತದಲ್ಲಿ ಮಾತ್ರ ಸಾಧ್ಯ. ಸಮೂಹದಲ್ಲಿ ಮತ್ತು ಇತರರೊಂದಿಗೆ ಇದ್ದಾಗ ನಾವು ನಮ್ಮತನವನ್ನು ಕಳೆದುಕೊಳ್ಳುತ್ತೇವೆ ಎಂಬುದು ನಿತ್ಯ ಸತ್ಯ. ಇತರರು ಏನೆಂದುಕೊಳ್ಳುತ್ತಾರೆಂದೋ, ತಪ್ಪು ತಿಳಿಯುತ್ತಾರೆಂದೋ ಅಥವಾ ಯಾರನ್ನಾದರೂ ಮೆಚ್ಚಿಸುವುದಕ್ಕಾಗಿಯೋ ಇಷ್ಟವಿಲ್ಲದಿದ್ದರೂ ನಮ್ಮತನಕ್ಕೆ ಹೊರತಾಗಿ ವರ್ತಿಸುತ್ತೇವೆ, ಪರಿಸ್ಥಿತಿಯೊಂದಿಗೆ ರಾಜಿಯಾಗುತ್ತೇವೆ. ಏಕಾಂತದಲ್ಲಿ ಅಂತರಂಗ ಬಹಿರಂಗಗಳಿಗೆ ಹೊಂದಿಕೆಯಿರುತ್ತದೆ ಮತ್ತು ಅದರಿಂದಾಗಿ ಸಂತೋಷವಿರುತ್ತದೆ. ಸಾಧನೆಗೆ, ಧ್ಯಾನಕ್ಕೆ, ಮನನಕ್ಕೆ, ವಿಮರ್ಶೆಗೆ, ಹೇಗಿರಬೇಕೆಂದು ನಿರ್ಧರಿಸುವುದಕ್ಕೆ, ಉತ್ತಮ ರೀತಿಯಲ್ಲಿ ಮುಂದುವರೆಯುವುದಕ್ಕೆ ಏಕಾಂತದಲ್ಲಿ ಅವಕಾಶವಿದೆ. ಇತರರನ್ನು ಕೈಯಿಂದ ಮುಟ್ಟುವುದಕ್ಕೂ ಹೃದಯದಿಂದ ಮುಟ್ಟುವುದಕ್ಕೂ ವ್ಯತ್ಯಾಸ ತಿಳಿಯುವುದು ಏಕಾಂತದಲ್ಲೇ.
 -ಕ.ವೆಂ.ನಾಗರಾಜ್.
***************
ದಿನಾಂಕ 28.03.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಶುಕ್ರವಾರ, ಜೂನ್ 17, 2016

ಒಳ್ಳೆಯತನದ ಅಳತೆಗೋಲು


ರಸಭರಿತ ಫಲಮೂಲ ಕೊಂಬೆ ತಾನಲ್ಲ
ಫಲಸತ್ವ ಸಾಗಿಪ ಮಾರ್ಗ ತಾನಹುದು|
ಮಾಡಿದೆನೆನಬೇಡ ನಿನದೆನಬೇಡ
ಜಗವೃಕ್ಷರಸ ಹರಿವ ಕೊಂಬೆ ನೀ ಮೂಢ||
     ಕೊಂಬೆಯಲ್ಲಿ ಗೊಂಚಲು ಗೊಂಚಲಾಗಿ ಬಿಟ್ಟ ಫಲಗಳನ್ನು ಕಂಡು ಕೊಂಬೆ ತನ್ನಿಂದ ಈ ಫಲಗಳು ಎಂದು ಹೆಮ್ಮೆ ಪಡಬಹುದೇ? ಮರದ ಬೇರು, ವಿವಿಧ ಅಂಗಾಂಗಗಳು ನೆಲ, ಜಲ, ಗಾಳಿ, ಬೆಳಕುಗಳಿಂದ ಪಡೆದ  ಸತ್ವಗಳು ಕೊಂಬೆಯ ಮೂಲಕ ಸಾಗಿ ರೂಪಿತವಾದುದೇ ಫಲ. ಅದಕ್ಕೆ ಕೊಂಬೆಯೂ ಸಹಕಾರಿಯೇ ಹೊರತು ಅದೇ ಮೂಲವಲ್ಲ. ಅದೇ ರೀತಿ ನಾವು ಏನನ್ನು ಮಾಡಿದ್ದೇವೆ, ಸಾಧಿಸಿದ್ದೇವೆ ಎಂದು ಅಂದುಕೊಳ್ಳುತ್ತೀವೋ ಅದಕ್ಕೆ ನಾವೂ ಕಾರಣರು ಎಂದಷ್ಟೇ ಹೇಳಿಕೊಳ್ಳಬಹುದು. ನಾವೇ ಕಾರಣರು ಎಂದು ಹೇಳಲಾಗದು. ನಾವು ವಾಹಕಗಳಷ್ಟೆ. ಒಳ್ಳೆಯ ವಾಹಕಗಳಾಗಿದ್ದಲ್ಲಿ ಒಳ್ಳೆಯ ಫಲಗಳು, ಕೆಟ್ಟದಾಗಿದ್ದಲ್ಲಿ ಕೊಳೆತ, ಕೆಟ್ಟ ಫಲಗಳು ಗೋಚರಿಸುತ್ತವೆ.
     ಕಲ್ಮಶಭರಿತ ನೀರನ್ನು ಶುದ್ಧವಾದ ಪಾತ್ರೆಗೆ ಹಾಕಿದಾಕ್ಷಣ ನೀರು ಶುದ್ಧವಾಗುವುದಿಲ್ಲ. ಅದೇ ರೀತಿ ಶುದ್ಧವಾದ ನೀರನ್ನು ಕಲ್ಮಶಭರಿತ ಪಾತ್ರೆಗೆ ಹಾಕಿದರೆ ನೀರೂ ಅಶುದ್ಧವಾಗುತ್ತದೆ. ಆದ್ದರಿಂದ ನಾವು ಶುದ್ಧ ವಾಹಕಗಳಾಗಬೇಕೆಂದರೆ ಎಚ್ಚರಿಕೆಯಿಂದಿರಬೇಕು. ನಮ್ಮ ಆಹಾರ -ಅಂದರೆ, ಕೇವಲ ತಿನ್ನುವುದು, ಕುಡಿಯುವುದು ಮಾತ್ರ ಅಲ್ಲ ನೋಡುವುದು, ಕೇಳುವುದು, ಗ್ರಹಿಸುವುದು, ಇತ್ಯಾದಿಗಳೂ ಸೇರಿ- ಶುದ್ಧವಾಗಿರಬೇಕು. ಒಂದು ಉದಾಹರಣೆ ನೋಡೋಣ: ಸ್ನೇಹಿತರೊಬ್ಬರ ಮನೆಯಲ್ಲಿ ಮಾತನಾಡುತ್ತಿದ್ದಾಗ ಅವರ ೩ ವರ್ಷದ  ಚಿಕ್ಕ ಮಗು ಒಬ್ಬರು ಹಿರಿಯರನ್ನು ಕುರಿತು "ನೀನು ಪೆದ್ದ, ದಂಡ" ಎಂದಿತು. ಚಿಕ್ಕ ಮಗುವಿನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಹಿರಿಯರು ಯಾವುದೋ ಕಾರಣಕ್ಕೆ ಹೊರಗೆ ಹೋದಾಗ ಅಲ್ಲಿದ್ದ ಮಗುವಿನ ಸಂಬಂಧಿಯೊಬ್ಬರು  "ಮಗು  ಸರಿಯಾಗಿ ಹೇಳಿತು, ಅವರು ಮಾಡುವುದೂ ಹಾಗೆಯೇ, ಇರುವುದೂ ಹಾಗೆಯೇ"  ಎಂದರು.  ಅಲ್ಲೇ ಕುಳಿತಿದ್ದ ಮಗು ಖುಷಿಯಿಂದ ಇದನ್ನು ಕೇಳಿಸಿಕೊಂಡಿತು. ಹಿರಿಯರಿಗೂ ಆ  ಸಂಬಂಧಿಗೂ ಅಷ್ಟಾಗಿ ಸರಿಯಿರಲಿಲ್ಲ. ಅದು ಮಗುವಿನ ಮೂಲಕ ಹೊರಬಿತ್ತು ಅಷ್ಟೆ. ಅವರು ಹಿರಿಯರ ಬೆನ್ನ ಹಿಂದೆ ಯಾವಾಗಲೋ ಆಡಿದ ಮಾತುಗಳನ್ನು ಮಗು ಪುನರುಚ್ಛರಿಸಿತ್ತಷ್ಟೆ ಹೊರತು ಅದು ಮಗುವಿನ ಸ್ವಂತ ಮಾತಾಗಿರಲಿಲ್ಲ. ಈಗ ಅವರು ಆಡಿದ ಮಾತಿನಿಂದ ಮಗುವಿಗೆ ತಾನು ಮಾಡಿದ್ದು ಸರಿ ಎಂಬ ಶಹಭಾಸಗಿರಿ ಕೊಟ್ಟಂತಾಗಿ ಮುಂದೆ ಇಂತಹ ಮಾತುಗಳನ್ನು ಹೆಚ್ಚು ಹೆಚ್ಚಾಗಿ ಆಡಲು ಪ್ರೇರೇಪಿಸಿದಂತೆ ಆಯಿತು. ಕಲುಷಿತ ಭಾವನೆಯನ್ನು ವಾಹಕರಾಗಿ ಅವರು ಆ ಮಗುವಿಗೂ ಹರಿಸಿದ್ದರು. ಮಕ್ಕಳು ನಿಷ್ಕಲ್ಮಶವಾದ ಪಾತ್ರೆಯಿದ್ದಂತೆ. ಆ ಪಾತ್ರೆಗೆ ಕಲ್ಮಶಗಳನ್ನು ತುಂಬಬಾರದಲ್ಲವೇ?
     ಮನುಷ್ಯನ ಸ್ವಭಾವವೇ ವಿಚಿತ್ರ. ತನಗೆ ಬೇಕಾದವರ ಬಗ್ಗೆ ಯಾರಾದರೂ ಪ್ರಿಯವಾದ ವಿಷಯ ಹೇಳಿದರೆ ಅದಕ್ಕೆ ಮತ್ತಷ್ಟು ಒತ್ತುಕೊಟ್ಟು ಇನ್ನೊಬ್ಬರಿಗೆ ಹೇಳುತ್ತಾನೆ. ತನಗಾಗದವರ ಬಗ್ಗೆ ಒಳ್ಳೆಯ ಸಂಗತಿ ಕೇಳಿದರೆ ಅದನ್ನು ತಿರುಚಿ ಕೆಟ್ಟ ಅಭಿಪ್ರಾಯ ಸೇರಿಸಿ ಹೇಳುತ್ತಾನೆ. ಕೆಟ್ಟ ವಿಷಯ ಕೇಳಿದರಂತೂ ಸಂಭ್ರಮಿಸಿ ಎಲ್ಲರಿಗೂ ಹರಡುತ್ತಾನೆ. ಆತ್ಮೀಯರು ಸೀನಿದರೂ ಏನೋ ಆಯಿತೆಂದು ಕಳವಳ ಪಡುತ್ತಾರೆ. ಇಷ್ಟಪಡದವರು ಗಂಭೀರ ಕಾಯಿಲೆಯಿಂದ ನರಳುತ್ತಿದ್ದರೂ ಅವರಿಗೇನಾಗಿದೆ? ಇನ್ನೂ ಗಟ್ಟಿಗಡತವಾಗಿದ್ದಾರೆ. ಇನ್ನೂ ಎಷ್ಟು ಜನರನ್ನು ಹಾಳುಮಾಡಬೇಕೋ? ಎಂದು ಉದ್ಗರಿಸುತ್ತಾರೆ. ಸಂಬಂಧಗಳು ಹಾಳಾಗುವುದು ಇಂತಹ ನಡವಳಿಕೆಗಳಿಂದಲೇ.
     ಇನ್ನು ಕೆಲವರಿರುತ್ತಾರೆ. ಕೆಟ್ಟ ವಿಷಯ ಕೇಳಿದರೆ ಕೇಳಿಸಿಕೊಂಡು ಸುಮ್ಮನಾಗುತ್ತಾರೆಯೇ ಹೊರತು ಅದನ್ನು ಹರಡಲು ಹೋಗುವುದಿಲ್ಲ. ಒಳ್ಳೆಯ ವಿಷಯಗಳಿಗೆ ಸ್ಪಂದಿಸುತ್ತಾರೆ. ಇವರು ಒಳ್ಳೆಯ ವಾಹಕರು. ಜನ ಇವರ ಮಾತುಗಳಿಗೆ ಗೌರವ ಕೊಡುತ್ತಾರೆ. ಸಂಬಂಧಗಳು ಉಳಿಯುವುದು, ಬೆಳೆಯುವುದು ಇಂತಹವರಿಂದಲೇ! ಕುಟುಂಬದ ಮುಖ್ಯಸ್ಥ ಮುಖ್ಯ ವಾಹಕನಾದರೆ ಕುಟುಂಬದ ಸದಸ್ಯರುಗಳು ಉಪವಾಹಕಗಳಿದ್ದಂತೆ. ವಾಹಕ, ಉಪವಾಹಕಗಳಲ್ಲಿ ಯಾವುದೇ ಒಂದು ಸರಿಯಿಲ್ಲದಿದ್ದರೂ ಒಂದು ಘಟಕವಾಗಿ ಕುಟುಂಬಕ್ಕೇ ಕೆಟ್ಟ ಹೆಸರು ಬರುತ್ತದೆ. ಒಬ್ಬರಿದ್ದಂತೆ ಇನ್ನೊಬ್ಬರು ಇಲ್ಲದಿರುವುದರಿಂದ ಇದಕ್ಕೆ ಪರಿಹಾರ ಕಷ್ಟಸಾಧ್ಯ. ಬಂದದ್ದನ್ನು ಸ್ವೀಕರಿಸಿ ನಡೆಯುವುದೊಂದೇ ಉಳಿಯುವ ಮಾರ್ಗ. ಒಬ್ಬರ ಕಾರಣದಿಂದ ಕುಟುಂಬದ ಎಲ್ಲರಿಗೂ ಕೆಟ್ಟ ಹೆಸರು ಬರುವಂತಾಗುವುದು ಒಳ್ಳೆಯ ಲಕ್ಷಣವಂತೂ ಅಲ್ಲ. ನಾವು ಆಡುವ ಮಾತುಗಳು ಹೇಗಿರಬೇಕೆಂದು ಋಗ್ವೇದದ ಈ ಮಂತ್ರ ಹೇಳುತ್ತಿದೆ:
ಸಕ್ತುಮಿವ ತಿತಉನಾ ಪುನಂತೋ ಯತ್ರ ಧೀರಾ ಮನಸಾ ವಾಚಮಕ್ರತ |
ಅತ್ರಾ ಸಖಾಯಃ ಸಖ್ಯಾನಿ ಜಾನತೇ ಭದ್ರೈಷಾಂ ಲಕ್ಷ್ಮೀರ್ನಿಹಿತಾಧಿ ವಾಚಿ || (ಋಕ್. ೧೦.೭೧.೨.)
     ಜರಡಿಯಿಂದ ಹಿಟ್ಟನ್ನು ಶೋಧಿಸುವಂತೆ ಬುದ್ಧಿವಂತರು ಆಡುವ ಮಾತನ್ನು ಮನಸ್ಸಿನಲ್ಲಿ ಶೋಧಿಸಿ ಮಾತನಾಡುತ್ತಾರೆ. ಆಲೋಚಿಸಿ ಮಾತನಾಡುವವರಿಂದ ಜನರಲ್ಲಿ ಸ್ನೇಹಭಾವನೆ ಬೆಳೆಯುತ್ತದೆ. ಮನುಷ್ಯನ ನಿಜವಾದ ಸಂಪತ್ತು ಮಾತಿನಲ್ಲಿಯೇ ಅಡಗಿದೆ ಎಂಬುದು ಈ ಮಂತ್ರದ ಅರ್ಥ.
     ಒಳ್ಳೆಯತನದ ಅಳತೆಗೋಲು ನಮ್ಮಲ್ಲೇ ಇದೆ. ಕುಟುಂಬದ ಸದಸ್ಯರುಗಳ, ಬಂಧುಗಳ, ಸ್ನೇಹಿತರ ಪಟ್ಟಿ ಮಾಡೋಣ. ಆ ಹೆಸರುಗಳ ಮುಂದೆ ಎರಡು ಕಲಮುಗಳು ಇರಲಿ. ಒಂದು ಕಲಮಿನಲ್ಲಿ ನಮ್ಮ ದೃಷ್ಟಿಯಲ್ಲಿ  ಅವರು ಒಳ್ಳೆಯವರೋ, ಕೆಟ್ಟವರೋ ಎಂಬುದನ್ನು ದಾಖಲಿಸಿ, ಇನ್ನೊಂದಲ್ಲಿ ಅವರ ದೃಷ್ಟಿಯಲ್ಲಿ ನಾವು  ಒಳ್ಳೆಯವರೋ, ಕೆಟ್ಟವರೋ ಎಂಬುದನ್ನು ದಾಖಲಿಸೋಣ. ಆಶ್ಚರ್ಯವೆಂದರೆ ಸಾಮಾನ್ಯವಾಗಿ ಎರಡು ಕಲಮುಗಳ ವಿವರ ಒಂದೇ ಆಗಿರುತ್ತದೆ. ನಾವು ಒಳ್ಳೆಯವರೆಂದು ಹೇಳುವವರು ನಮ್ಮನ್ನೂ ಒಳ್ಳೆಯವರೆಂದು ಭಾವಿಸುವರು. ನಾವು ಕೆಟ್ಟವರೆನ್ನುವವರು ನಮ್ಮನ್ನು ಒಳ್ಳೆಯವರೆಂದು ಹೇಳಲಾರರು. ಕೊನೆಯಲ್ಲಿ ಎಷ್ಟು ಒಳ್ಳೆಯವರು ಮತ್ತು ಕೆಟ್ಟವರು ಎಂಬುದನ್ನು ಲೆಕ್ಕ ಹಾಕಿದಾಗ ಒಳ್ಳೆಯವರು ಎಂಬ ಸಂಖ್ಯೆ ಜಾಸ್ತಿ ಬಂದರೆ ನಾವು ಒಳ್ಳೆಯವರೇ. ಕೆಟ್ಟವರು ಎಂಬುದು ಹೆಚ್ಚಾಗಿದ್ದರೆ ತಿದ್ದಿಕೊಳ್ಳುವ, ಬದಲಾಗುವ ಅಗತ್ಯವಿದೆ ಎಂದೇ ಅರ್ಥ. ಈ ಜಗತ್ತು ಕನ್ನಡಿಯಿದ್ದಂತೆ. ಒಳ್ಳೆಯವರಿಗೆ ಒಳ್ಳೆಯದಾಗಿ, ಕೆಟ್ಟವರಿಗೆ ಕೆಟ್ಟದಾಗಿ ಕಾಣುತ್ತದೆ. ಕನ್ನಡಿಯ ಪ್ರತಿಬಿಂಬವೂ ಅಷ್ಟೆ. ನಾವು ಎಷ್ಟು ದೂರದಲ್ಲಿರುತ್ತೇವೋ ಪ್ರತಿಬಿಂಬವೂ ಅಷ್ಟೇ ದೂರದಲ್ಲಿರುತ್ತದೆ.
     ಈ ಬದುಕು ಮೂರುದಿನದ್ದು ಎಂದು ಗೊತ್ತಿದ್ದರೂ ಚಿರಂಜೀವಿಗಳು ಎಂಬಂತೆ ವರ್ತಿಸುತ್ತೇವೆ. ಇತರರ ಬಗ್ಗೆ ಅವನು ಏಕೆ ಹಾಗಾಡುತ್ತಾನೆ? ಹೋಗುವಾಗ ಎಲ್ಲಾ ಹೊತ್ತುಕೊಂಡು ಹೋಗುತ್ತಾನಾ? ಎಂದು ಹೇಳುವ ನಾವು ಅದೇ ತತ್ವವನ್ನು ನಮಗೆ ಅನ್ವಯಿಸಿಕೊಳ್ಳುತ್ತೇವೆಯೇ? ಜೀವನ ಪೂರ್ತಿ ಉತ್ತಮ ರೀತಿಯಲ್ಲಿ ಬಾಳಲು ಸಿದ್ಧತೆ ಮಾಡಿಕೊಳ್ಳುವುದರಲ್ಲಿಯೇ ಕಳೆಯುವ ನಾವು ಉತ್ತಮವಾಗಿ ಬಾಳುವುದಿಲ್ಲ ಎಂಬುದು ವಿಪರ್ಯಾಸದ ಸಂಗತಿ.
     ಸಂಬಂಧಗಳಲ್ಲಿ ಬರುವ ದೊಡ್ಡ ಸವಾಲೆಂದರೆ  ಏನನ್ನಾದರೂ ಪಡೆಯುವ ಸಲುವಾಗಿಯೇ ಸಂಬಂಧಗಳನ್ನು  ಹೆಚ್ಚಿನವರು ಬೆಳೆಸುವುದೇ ಆಗಿದೆ. ಅವರು ಇತರರು ತಮಗೆ ಒಳಿತು ಮಾಡಲಿ ಎಂದು ಬಯಸಿ ಸಂಬಂಧ ಬೆಳೆಸುತ್ತಾರೆ. ಸಂಬಂಧಗಳು ಏನನ್ನಾದರೂ ಕೊಡುವ ಸಲುವಾಗಿ, ಪಡೆಯುವ ಸಲುವಾಗಿ ಅಲ್ಲ ಎಂದುಕೊಂಡರೆ ಸಂಬಂಧಗಳು ಉಳಿಯುತ್ತವೆ, ಬೆಳೆಯುತ್ತವೆ.  ಬರ್ನಾರ್ಡ್ ಶಾ ಹೇಳಿದಂತೆ ಸಾಯುವ ಮುನ್ನ ನಮ್ಮಲ್ಲಿರುವ ಒಳ್ಳೆಯದನ್ನೆಲ್ಲಾ ಕೊಟ್ಟುಬಿಡೋಣ. ಸಂತೋಷ ಹಂಚಿಕೊಳ್ಳೋಣ; ಅದು ದ್ವಿಗುಣಗೊಳ್ಳುತ್ತದೆ. ದುಃಖವನ್ನೂ ಹಂಚಿಕೊಳ್ಳೋಣ; ಅದು ಅರ್ಧ ಕಡಿಮೆಯಾಗುತ್ತದೆ.
 -ಕ.ವೆಂ.ನಾಗರಾಜ್.
***************
ದಿನಾಂಕ 07-03-2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:



ಗುರುವಾರ, ಜೂನ್ 2, 2016

ಮುಪ್ಪು ಶಾಪವಾಗದಿರಲಿ - 3


    ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿದ್ದ ನಿವಾಸಿಗಳೊಂದಿಗೆ ಮಾತನಾಡಿದಾಗ, ಕುಟುಂಬದವರೊಡನೆ ಇದ್ದರೂ ಖಿನ್ನತೆಯಿಂದ ಬಳಲುತ್ತಿರುವ ಹಲವು ವೃದ್ಧರನ್ನು ಮಾತನಾಡಿಸಿದಾಗ ಆದ ಮನಕಲಕುವ ಅನುಭವಗಳನ್ನು ಹಂಚಿಕೊಂಡರೆ ಅದೊಂದು ದೀರ್ಘ ಲೇಖನವೇ ಆಗುತ್ತದೆ. ಹಾಗೆಂದು ಅವರ ಕಥೆಗಳು ಹೊಸವನಲ್ಲ, ನಮ್ಮ-ನಿಮ್ಮ ಸುತ್ತಲಿನಲ್ಲೇ ಕಾಣುವಂತಹುದು!  ನೋಡುವ ಕಣ್ಣುಗಳಿರಬೇಕು, ಮಿಡಿಯುವ ಹೃದಯಗಳಿರಬೇಕಷ್ಟೇ! ಎಲ್ಲಾ ವೃದ್ಧರುಗಳೂ ಹೀಗೆಯೇ ಬಳಲುತ್ತಾರೆ ಎಂದು ಹೇಳಲಾಗದು. ಪ್ರತಿಯೊಂದಕ್ಕೂ ಅಪವಾದಗಳಿದ್ದು, ಸುಖ-ಸಂತೋಷಗಳಿಂದ, ಮಕ್ಕಳು, ಬಂಧುಗಳಿಂದ ಪ್ರೀತಿ, ವಿಶ್ವಾಸ ಪಡೆಯುವ ಭಾಗ್ಯವಿರುವವರೂ ಇರುತ್ತಾರೆ. ಆದರೆ ಹತ್ತರಲ್ಲಿ ಆರು ಕುಟುಂಬಗಳಲ್ಲಿ ಭಾಗ್ಯವಂಚಿತರೇ ಇರುತ್ತಾರೆಂಬುದು ವಾಸ್ತವವಾಗಿದೆ. ವೃದ್ಧರ ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ಹೀಗೆ ಪಟ್ಟಿ ಮಾಡಬಹುದು:
೧. ಆರ್ಥಿಕ ಸಮಸ್ಯೆ,
೨. ಆಶ್ರಯದ ಸಮಸ್ಯೆ,
೩. ಆರೋಗ್ಯದ ಸಮಸ್ಯೆ,
೪. ಪ್ರೀತಿಯ ಕೊರತೆ ಅಥವ ಭಾವನಾತ್ಮಕ ಆಧಾರದ ಕೊರತೆ.
     ದುಡಿದರೆ ಮಾತ್ರ ಅನ್ನ ಎಂಬ ಸ್ಥಿತಿಯಲ್ಲಿದ್ದವರು ವೃದ್ಧರಾದಾಗ ಇನ್ನೊಬ್ಬರ ಆಶ್ರಯದಲ್ಲಿ ಬಾಳಬೇಕಾಗಿ ಬಂದಾಗ ಅವರುಗಳು ಪಡುವ ಪಾಡು ಅವರಿಗೆ ಮಾತ್ರ ಗೊತ್ತಾಗಲು ಸಾಧ್ಯ. ಹಣ, ಆಸ್ತಿಯಿದ್ದವರೂ ಸಹ ಶಕ್ತಿಗುಂದಿದ ಸ್ಥಿತಿಯಲ್ಲಿ ಅನಾಥ ಸ್ಥಿತಿಯಲ್ಲಿ ಪಾಡುಪಡುವ ಉದಾಹರಣೆಗಳೂ ಇವೆ. ಅವರ ಮಕ್ಕಳು, ಸಂಬಂಧಿಗಳು ಅವರ ಹಣ ಮತ್ತು ಆಸ್ತಿಗಳ ಅನಧಿಕೃತ ಒಡೆಯರಾಗಿಬಿಡುತ್ತಾರೆ! ಆರೋಗ್ಯದ ಸಮಸ್ಯೆಗಳು ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಕಾಡುವ ಸಮಸ್ಯೆಯೆಂದರೆ ಭಾವನಾತ್ಮಕ ಬೆಂಬಲದ ಕೊರತೆ! ತಮಗೆ ಏನೂ ಬೇಡ, ಪ್ರೀತಿಯ ಎರಡು ಮಾತುಗಳು ಸಾಕು ಎಂದು ಹಂಬಲಿಸುವ ಜೀವಗಳು ಕೊರಗಿನಲ್ಲೇ ಅಂತ್ಯ ಕಾಣುತ್ತವೆ ಎಂಬುದು ನೋವು ತರುತ್ತದೆ. ವೃದ್ಧಾಶ್ರಮದ ನಿವಾಸಿಗಳಲ್ಲಿ ಹೆಚ್ಚಿನವರು ಸೊಸೆಯರ ವಿರುದ್ಧ ದೂರಿದ್ದರು. ಗಂಡ-ಹೆಂಡತಿಯರಲ್ಲಿ ಜಗಳಗಳಾದಾಗ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದಾರೆಂದು ದೂರು ಸಲ್ಲಿಸಿ ಪೋಲಿಸ್ ಠಾಣೆ, ನ್ಯಾಯಾಲಯಗಳ ಮೆಟ್ಟಲು ಹತ್ತಬೇಕಾಗಿ ಬಂದ ಅತ್ತೆ-ಮಾವಂದಿರು, ಹಿರಿಯ ಅಧಿಕಾರಿಯಾಗಿದ್ದು ಮನೆಯಲ್ಲಿ ತಾತ್ಸಾರ, ಅವಮಾನಗಳಿಗೆ ಒಳಗಾಗಿ ವೃದ್ಧಾಶ್ರಮ ಸೇರಿದ್ದವರು, ಇದ್ದ ಒಬ್ಬಳೇ ಮಗಳು ಮತ್ತು ಅಳಿಯ ಸೇರಿಕೊಂಡು ಮೋಸದಿಂದ ಹಣವನ್ನು ಮತ್ತು ಜಮೀನನನ್ನು ಲಪಟಾಯಿಸಿ ಹೊರಗಟ್ಟಲ್ಪಟ್ಟ ಮುದುಕಿ, ಮಕ್ಕಳಾಗಲೀ, ಬಂಧುಗಳಾಗಲೀ ಇರದೆ ಅನಿವಾರ್ಯವಾಗಿ ಬಂದವರು, ಹೊಂದಿಕೊಳ್ಳದೆ ಜಗಳವಾಡಿಕೊಂಡು ಬಂದವರು ಅಥವ ಹೊರದಬ್ಬಲ್ಪಟ್ಟವರು, ಹೀಗೆ ಅನೇಕ ರೀತಿಯ ಹಿರಿಯ ಜೀವಗಳು ಅಲ್ಲಿದ್ದವು. ಒಬ್ಬೊಬ್ಬರದು ಒಂದೊಂದು ಸಮಸ್ಯೆಯಾದರೂ, ಎಲ್ಲರ ಸಾಮಾನ್ಯವಾದ ಸಮಸ್ಯೆಯೆಂದರೆ ಕೊನೆಗಾಲದಲ್ಲಿ ತಮ್ಮವರು ತಮಗೆ ಪ್ರೀತಿ ತೋರಿಸುತ್ತಿಲ್ಲವಲ್ಲಾ ಎಂಬುದೇ! ಬೇಸಿಗೆಯ ತಾಪದಿಂದ ಬಾಯಾರಿ ಬಳಲಿ ಬೆಂಡಾದವರು ನೀರಿಗೆ ಹಂಬಲಿಸುವಂತೆ ಅವರು ಪ್ರೀತಿಯ ಎರಡು ಮಾತುಗಳಿಗಾಗಿ ಹಂಬಲಿಸುತ್ತಿದ್ದಾರೆ ಎಂಬ ಅರಿವು ಸಂಬಂಧಿಸಿದವರಿಗೆ ಬಂದರೆ ಅವರ ಪುಣ್ಯ!
     ಸರ್ಕಾರದ ವಿಧವಾ ವೇತನ, ವೃದ್ಧಾಪ್ಯ ವೇತನ, ಸಂಧ್ಯಾಸುರಕ್ಷಾ ಮುಂತಾದ ಯೋಜನೆಗಳು ಹಲವರಿಗೆ ಉಪಕಾರಿಯಾಗಿವೆ. ಆದರೆ ಈ ಸೌಲಭ್ಯ ನಿಜವಾಗಿ ಸಿಗಬೇಕಾದ ಎಲ್ಲರಿಗೂ ಸಿಕ್ಕಿದೆಯೇ ಎಂಬುದು ಪ್ರಶ್ನಾರ್ಹ. ಅರ್ಹತೆಯಿದ್ದವರಿಗೆ ಕಛೇರಿಗೆ ಅಲೆದಾಡಿ ಸೌಲಭ್ಯ ಪಡೆಯಲೂ ಆಗದು. ಈ ಸೌಲಭ್ಯಗಳನ್ನು ಅನುಕೂಲಸ್ಥರೇ ದುರುಪಯೋಗಪಡಿಸಿಕೊಂಡ ಪ್ರಕರಣಗಳಿಗೆ ಕೊರತೆಯಿಲ್ಲ. ಸಾಮಾಜಿಕ ಕಳಕಳಿಯುಳ್ಳ ಅಧಿಕಾರಿಗಳಿದ್ದರೆ ಹಲವು ಹಿರಿಯ ಜೀವಗಳಿಗೆ ಆಸರೆ ಸಿಗುತ್ತದೆ. ಇಲ್ಲದಿದ್ದರೆ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳಬಲ್ಲವರಿಗೆ ಸೌಲಭ್ಯಗಳು ಸಿಕ್ಕೀತು. ಧಾರ್ಮಿಕ ಸಂಸ್ಥೆಗಳು, ಸಾಮಾಜಿಕ ಸಂಸ್ಥೆಗಳು ನಡೆಸುವ ವೃದ್ಧಾಶ್ರಮಗಳಲ್ಲೂ ಇಲ್ಲವೂ ಸರಿಯಾಗಿ ನಿರ್ವಹಿಸಲ್ಪಡುತ್ತವೆ ಎಂದೇನೂ ಇಲ್ಲ. ಹಣ ಪಡೆದು ಸೌಲಭ್ಯ ಒದಗಿಸುವ ಮತ್ತು ಹಣ ಮಾಡುವ ಸಲುವಾಗಿಯೇ ಇರುವ ವ್ಯಾವಹಾರಿಕ ಆಶ್ರಯತಾಣಗಳೂ ಇವೆ. ವಿಚಾರಿಸುವವರಿಲ್ಲ, ವಾರಸುದಾರರಿಲ್ಲ ಎಂಬಂತಹ ಪ್ರಕರಣಗಳಲ್ಲಿ ಶೋಷಣೆ ಸಾಮಾನ್ಯದ ಸಂಗತಿ. ಚೆನ್ನಾಗಿ ನಿರ್ವಹಿಸಲ್ಪಡುತ್ತಿರುವ ಸಂಸ್ಥೆಗಳನ್ನೂ ಸಂಶಯದಿಂದ ನೋಡುವಂತೆ ಇಂತಹವರು ಮಾಡುತ್ತಾರೆ. ಬೆರಳೆಣಿಕೆಯಷ್ಟು ಸಂಸ್ಥೆಗಳು ಉತ್ತಮ ರೀತಿಯಲ್ಲಿ ವೃದ್ಧರ ಆರೈಕೆಯನ್ನು ಮಾಡುತ್ತಿದ್ದು, ಅವುಗಳಲ್ಲಿ ಹಾಸನದ ಚೈತನ್ಯ ವೃದ್ಧಾಶ್ರಮವೂ ಒಂದಾಗಿರುವುದು ಹೆಮ್ಮೆಯ ವಿಷಯವಾಗಿದೆ. ಇದಕ್ಕಾಗಿ ಡಾ. ಗುರುರಾಜ ಹೆಬ್ಬಾರರು ಮತ್ತು ಅವರ ಎಲ್ಲಾ ಸಹಕಾರಿಗಳೂ ಅಭಿನಂದನಾರ್ಹರಾಗಿದ್ದಾರೆ.
     ಪೋಷಕರ ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ನಿರ್ವಹಣಾ ಕಾಯದೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದಿದ್ದು ಅದರ ಪ್ರಕಾರ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳಿಗೆ ಮೂರು ತಿಂಗಳುಗಳವರೆಗೆ ಜೈಲು ಶಿಕ್ಷೆ ಅಥವ ದಂಡ ವಿಧಿಸಲು ಅವಕಾಶವಿದೆ. ಆದರೆ, ತಮ್ಮ ತೊಂದರೆಗಳ ಕುರಿತು ದೂರು ನೀಡುವುದಿರಲಿ, ಆಪ್ತರ ಬಳಿ ಕಷ್ಟ ಹಂಚಿಕೊಳ್ಳಲೂ ಹಿಂಜರಿಯುವವರ ಸಂಖ್ಯೆಯೇ ಹೆಚ್ಚಿದೆ. ಹೀಗೆ ಕಷ್ಟ-ಸುಖ ಹಂಚಿಕೊಂಡದ್ದೇ ನೆಪವಾಗಿ ಮತ್ತಷ್ಟು ದೂಷಣೆ, ಹಿಂಸೆಗಳಿಗೆ ಒಳಗಾಗುವ ಭಯ ಅವರನ್ನು ಕಾಡುತ್ತದೆ.
     ಇಂದಿನ ಯುವಪೀಳಿಗೆಯ ಮನೋಭಾವ ಬದಲಾಗಬೇಕಿದೆ. ನೈತಿಕ ಮೌಲ್ಯಗಳಿಗೆ ಬೆಲೆ ಕೊಡದ ಶಿಕ್ಷಣ ಪದ್ಧತಿ ಈ ಸಮಸ್ಯೆಯ ಮೂಲಕಾರಣವಾಗಿದೆ. ಮದುವೆ ಆದ ತಕ್ಷಣ ಹಿರಿಯರನ್ನು ಬಿಟ್ಟು ಪ್ರತ್ಯೇಕವಾಗಿ ಬೇರೆ ವಾಸಿಸುವವರ ಸಂಖ್ಯೆ ಹೆಚ್ಚುತ್ತಿದೆ. ಮದುವೆ ಆಗಬೇಕಾದರೆ ಲಗ್ಗೇಜುಗಳಿರಬಾರದು, ದಂಡ-ಪಿಂಡಗಳಿರಬಾರದು ಎಂದು ಷರತ್ತು ವಿಧಿಸುವುದನ್ನು ಕೇಳಿದ್ದೇವೆ. ತಾವೂ ಸಹ ಮುಂದೊಮ್ಮೆ ಲಗೇಜುಗಳಾಗುತ್ತೇವೆ, ದಂಡ-ಪಿಂಡಗಳಾಗುತ್ತೇವೆ; ಇಂತಹ ದಂಡ-ಪಿಂಡಗಳಿಂದಲೇ ತಾವು ಈಗ ಇರುವ ಉತ್ತಮ ಸ್ಥಿತಿಗೆ ಬಂದದ್ದು ಎಂಬುದನ್ನು ಈ ಮಹಾನ್ ಪಿಂಡಗಳು ಮರೆತುಬಿಟ್ಟಿರುತ್ತವೆ! ಇನ್ನು ೨೫ ವರ್ಷಗಳಲ್ಲಿ ಭಾರತದ ಮೂರನೆಯ ಎರಡರಷ್ಟು ಸಂಖ್ಯೆಯ ಜನರು ವೃದ್ಧರಾಗಿರುತ್ತಾರೆ ಎಂಬುದನ್ನು ಈಗ ಹಿರಿಯರನ್ನು ಕಡೆಗಣಿಸಿರುವ, ಮುಂದೆ ವೃದ್ಧರಾಗಲಿರುವ ಯುವಸಮೂಹ ಮರೆಯಬಾರದು.
     ಬರೆದಷ್ಟೂ ಮುಗಿಯದಷ್ಟು ಸಮಸ್ಯೆಗಳ ಸರಮಾಲೆಯೇ ಕಂಡುಬರುತ್ತದೆ. ಸಮಸ್ಯೆಯ ಪರಿಹಾರೋಪಾಯಗಳನ್ನು ಹೀಗೆ ಪಟ್ಟಿ ಮಾಡಬಹುದೆಂದೆನಿಸುತ್ತದೆ:
೧. ನೈತಿಕ ಮೌಲ್ಯಗಳಿಗೆ ಮಹತ್ವ ಕೊಡುವ ಶಿಕ್ಷಣ ಪದ್ಧತಿ ಅಳವಡಿಸಬೇಕು;
೨. ಸರ್ಕಾರದಿಂದ ವೃದ್ಧರಿಗೆ ಸಿಗುವ ಸೌಲಭ್ಯಗಳು ಸರಿಯಾಗಿ ಸಿಗುವಂತೆ ಸರ್ಕಾರ ಮತ್ತು ಸಮಾಜಕಾರ್ಯದಲ್ಲಿ ತೊಡಗಿರುವ ಸೇವಾಸಂಸ್ಥೆಗಳು ನೋಡಿಕೊಳ್ಳಬೇಕು; ಪೋಷಕರ ಬಗ್ಗೆ ನಿರ್ಲಕ್ಷ್ಯ ವಹಿಸುವ ಮಕ್ಕಳ ವಿರುದ್ಧ ಕ್ರಮ ಜರುಗುವಂತೆ ನೋಡಿಕೊಳ್ಳಬೇಕು;
೩. ಕೌಟುಂಬಿಕ ಸಲಹಾ ಕೇಂದ್ರಗಳಲ್ಲಿ ಸರ್ಕಾರ ಮತ್ತು ಸೇವಾ ಸಂಸ್ಥೆಗಳು ವೃದ್ಧರ ಕುರಿತ ಸಮಸ್ಯೆಗಳಿಗೆ ಆದ್ಯತೆ ಸಿಗುವಂತೆ ಮಾಡಬೇಕು. ಈಗ ಗಂಡ-ಹೆಂಡಿರ ಸಮಸ್ಯೆಗಳ ಕುರಿತು ಮಾತ್ರ ಹೆಚ್ಚು ಗಮನ ಸಿಗುತ್ತಿದೆ:
೪. ವೃದ್ಧರಿಗಾಗಿಯೇ ಪ್ರತ್ಯೇಕವಾಗಿ ಉಪನ್ಯಾಸ ಕೇಂದ್ರಗಳು, ಸಲಹಾ ಕೇಂದ್ರಗಳು, ಭಜನಾಕೇಂದ್ರಗಳು, ಮನರಂಜನಾ ಚಟುವಟಿಕೆಗಳನ್ನು ಪ್ರತಿನಿತ್ಯ ನಡೆಯುವಂತೆ ನೋಡಿಕೊಂಡರೆ ಅವರಲ್ಲಿ ಒಂಟಿತನದ ಭಾವನೆ ದೂರ ಮಾಡಲು ಅನುಕೂಲವಾಗುತ್ತದೆ. ಚಿಕ್ಕ ಮಕ್ಕಳ ಸಲುವಾಗಿ ನಡೆಸಲಾಗುತ್ತಿರುವ ಡೇ ಕೇರ್ಗಳನ್ನು ಗಮನ ಅಗತ್ಯವಿರುವ ಹಿರಿಯರ ಸಲುವಾಗಿಯೂ ನಡೆಸುವ ಬಗ್ಗೆ ಚಿಂತಿಸಬೆಕು;
೫. ಟಿ.ಆರ್.ಪಿ. ಸಲುವಾಗಿ ಸ್ವೇಚ್ಛಾಚಾರದ ನಡವಳಿಕೆಗಳಿಗೆ ಪ್ರೋತ್ಸಾಹ ಕೊಡುತ್ತಿರುವ, ಸಾಮಾಜಿಕ, ಕೌಟುಂಬಿಕ ಸಂಬಂಧಗಳನ್ನು ಹಾಳುಗೆಡವುವ ಕಾರ್ಯಕ್ರಮಗಳು, ಧಾರಾವಾಹಿಗಳಿಗೆ ಆದ್ಯತೆ ಕೊಡುತ್ತಿರುವ ಮಾಧ್ಯಮಗಳು ಯುವ ಸಮೂಹವನ್ನು ಹಿರಿಯರನ್ನು ಗೌರವಿಸುವಂತೆ ಮಾಡುವ ಕರ್ಯಕ್ರಮಗಳನ್ನು ಬಿತ್ತರಿಸಬೇಕು;
೫. ವೃದ್ಧರ ಅನುಭವ ಮತ್ತು ಸೇವೆಯನ್ನು ಸಮುದಾಯದ ಒಳಿತಿಗೆ ಬಳಸಿಕೊಳ್ಳಲು ಒತ್ತು ಕೊಡಬೇಕು;
೬. ಪೂರಕವಾದ ಇಂತಹ ಇತರ ಕಾರ್ಯಕ್ರಮಗಳನ್ನು ಸಾಮಾಜಿಕ, ಧಾರ್ಮಿಕ ಮುಖಂಡರುಗಳು, ರಾಜಕೀಯ ದುರೀಣರು, ಸೇವಾಸಂಸ್ಥೆಗಳವರು ಚಿಂತಿಸಿ ರೂಪಿಸಿ ಚಾಲನೆ ಕೊಡಬೇಕು.
     ಮುಗಿಸುವ ಮುನ್ನ, ಒಂದು ಮಾತು: ಒಬ್ಬ ಅಶಕ್ತ ವೃದ್ಧನೋ. ವೃದ್ಧೆಯೋ ರಸ್ತೆಯನ್ನು ತಡವರಿಸುತ್ತಾ ದಾಟುತ್ತಿರುವಾಗ, ಅಲ್ಲಿ ಚಲಿಸುವ ಬೈಕ್ ಸವಾರನೋ, ಆಟೋ ಚಾಲಕನೋ ಏಯ್, ಮುದುಕಾ, ಸಾಯುವುದಕ್ಕೆ ಏಕೆ ಬರುತ್ತೀಯಾ? ತೆಪ್ಪನೆ ಮನೆಯಲ್ಲಿ ಬಿದ್ದಿರಬಾರದೇ? ಎಂದು ಗದರಿಸುತ್ತಾನೆ. ಬದಲಾಗಿ ವಾಹನ ಚಾಲಕರು ವೃದ್ಧರು ದಾಟುವವರೆಗೆ ತಾಳ್ಮೆಯಿಂದ ಇದ್ದರೆ, ಅಕ್ಕಪಕ್ಕದವರು ಅವರನ್ನು ರಸ್ತೆ ದಾಟಿಸಲು ನೆರವಾದರೆ ಎಷ್ಟು ಚೆನ್ನಾಗಿರುತ್ತದೆ! ಸಹಾಯ ಮಾಡಿದವರೆಡೆಗೆ ವೃದ್ಧರು ಬೀರಬಹುದಾದ ಕೃತಜ್ಞತೆಯ ನೋಟಕ್ಕಿಂತ ಹೆಚ್ಚಿನ ಪುಣ್ಯದ ಸಂಪಾದನೆ ಏನಿರುತ್ತದೆ? ಯುವ ಸಮೂಹವೇ, ನಿಮ್ಮ ಈಗಿನ ಹಮ್ಮು-ಬಿಮ್ಮುಗಳಿಗೆ ನಿಮ್ಮ ಹಿರಿಯರ ತ್ಯಾಗ, ಸೇವೆಗಳೇ ಕಾರಣವೆಂಬುದನ್ನು ಮರೆಯದಿರಿ, ಅವರನ್ನು ಕಡೆಗಣಿಸದಿರಿ. ಅದರಲ್ಲೂ ಅವರಿಗೆ ನಿಮ್ಮ ಸಹಾಯ, ನೆರವು ಅಗತ್ಯವಿರುವಾಗ ಕನಿಷ್ಠ ಬೊಗಸೆಯಷ್ಟು ಪ್ರೀತಿಯ ಮಾತುಗಳನ್ನಾದರೂ ಆಡಿರಿ. ಪ್ರತಿಯಾಗಿ ಬೆಟ್ಟದಷ್ಟು ಪ್ರೀತಿ ಪಡೆಯಿರಿ. ದೇವರು ಮೆಚ್ಚುವ ಕಾರ್ಯವೆಂದರೆ ಇದೇ ಆಗಿದೆ.
-ಕ.ವೆಂ.ನಾಗರಾಜ್.
***************
ದಿನಾಂಕ 29-02-2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: