ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ನವೆಂಬರ್ 2, 2017

ಆತ್ಮಸ್ಥೈರ್ಯ ಹೆಚ್ಚಿಸುವ ಶಿಕ್ಷಣ ಪದ್ಧತಿಯ ಅಗತ್ಯ


     ನಾನು ಆರ್ಥಿಕ ತಜ್ಞನೂ ಅಲ್ಲ, ಶಿಕ್ಷಣ ತಜ್ಞನೂ ಅಲ್ಲ. ಒಬ್ಬ ಸಾಮಾನ್ಯ ಪ್ರಜೆಯಾಗಿ ಶಿಕ್ಷಣಕ್ಕೂ, ಉದ್ಯೋಗಕ್ಕೂ ಇರವ ಸಂಬಂಧ, ಇಂದಿನ ನಿರುದ್ಯೋಗ ಸಮಸ್ಯೆ ಬಗ್ಗೆ ನನಗೆ ಅನ್ನಿಸಿದುದನ್ನು ಹಂಚಿಕೊಳ್ಳುತ್ತಿರುವೆ. 2012ರಲ್ಲಿ ಇದ್ದಂತೆ ಭಾರತದ ಜನಸಂಖ್ಯೆಯ ಶೇ. 65ರಷ್ಟು ಜನರು ಯುವಕರಾಗಿದ್ದು ಉದ್ಯೋಗ ಮಾಡುವ ವಯಸ್ಸಿನವರು. ಭಾರತ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಆರ್ಥಿಕ ಪ್ರಗತಿ ಸಾಧಿಸುತ್ತಿದ್ದರೂ, ಉದ್ಯೋಗಾಕಾಂಕ್ಷಿಗಳಿಗೆ ಸಾಕಷ್ಟು ಉದ್ಯೋಗ ಕಲ್ಪಿಸುವಲ್ಲಿ ಹಿಂದಿರುವುದಂತೂ ಸತ್ಯ. ಶೈಕ್ಷಣಿಕವಾಗಿಯೂ ಸಹ ಸಾಧಿತ ಪ್ರಗತಿ ಆಶಾದಾಯಕವಾಗಿಲ್ಲ. ವಿದ್ಯಾವಂತ ನಿರುದ್ಯೋಗಿಗಳಿಗಿಂತ ಅನಕ್ಷರಸ್ಥ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಸುಮಾರು ಶೇ. 30ರಿಂದ 35ರಷ್ಟು ವಿದ್ಯಾರ್ಥಿಗಳು ಪ್ರಾಥಮಿಕ ಶಾಲಾ ಹಂತದಲ್ಲಿಯೇ ವಿದ್ಯಾಭ್ಯಾಸ ಬಿಟ್ಟುಹೋಗುತ್ತಿರುವುದು ತಿಳಿದು ಬರುತ್ತದೆ. 
     ಶಿಕ್ಷಣ ಅನ್ನುವುದು ವ್ಯಾಪಾರವಾಗಿರುವಾಗ ಇದರ ಆಮೂಲಾಗ್ರ ಬದಲಾವಣೆ ಮಾಡುವ ಅಗತ್ಯವಿದೆ. ಓದಬಯಸುವ ಎಲ್ಲರಿಗೂ ಓದುವ ಅವಕಾಶ ಜಾತಿ, ಮತ, ಪಂಥ, ಇತ್ಯಾದಿಗಳ ಹಂಗಿಲ್ಲದೆ ಸಿಗುವಂತಾಗಬೇಕು. ವೃತ್ತಿಪರ ಶಿಕ್ಷಣಗಳಾದ ಡಿಪ್ಲೊಮಾ, ಇಂಜನಿಯರಿಂಗ್, ವೈದ್ಯಕೀಯ ವಿಭಾಗಗಳಿಗೂ ಸಹ ಈಗಿರುವಂತೆ ಪ್ರಭಾವಿಗಳಿಗೆ, ಹಣ ಉಳ್ಳವರಿಗೆ ಮಾತ್ರ ಓದುವ ಅವಕಾಶ ಎಂಬ ಸ್ಥಿತಿ ತೊಲಗಿ, ಬಡವರೂ, ಆಸಕ್ತರೂ ಈ ವಿಷಯಗಳಲ್ಲಿ ಶಿಕ್ಷಣ ಪಡೆಯುವ ಸ್ಥಿತಿ ಬಂದರೆ ಅದು ಆದರ್ಶದ ಸ್ಥಿತಿಯಾಗುತ್ತದೆ. ಆದರೆ ಬಹುತೇಕ ರಾಜಕೀಯ ಪುಡಾರಿಗಳೇ ಶಿಕ್ಷಣ ಸಂಸ್ಥೆಗಳ ಒಡೆಯರಾಗಿದ್ದು ಇದಕ್ಕೆ ಅವಕಾಶ ಮಾಡಿಕೊಟ್ಟಾರೆಯೇ ಎಂಬುದು ಯಕ್ಷಪ್ರಶ್ನೆ. ಜಾತಿ ಆಧಾರಿತ ಅವೈಜ್ಞಾನಿಕ ಮೀಸಲಾತಿ ನೀತಿ ಸಹ ಪ್ರತಿಭೆಗೆ ಅಡ್ಡಗಾಲಾಗಿದೆ. ಜಾತಿ, ಮತ, ಪಂಥ, ಧರ್ಮದ ಹೆಸರಿನಲ್ಲಿ ಭೇದ ಮಾಡಬಾರದೆಂಬ ನಮ್ಮ ಪವಿತ್ರ ಸಂವಿಧಾನದ ಆಶಯಕ್ಕೂ ಇದು ವಿರುದ್ಧವಾಗಿದೆ. ಆರ್ಥಿಕ ಆಧಾರಿತ ಮೀಸಲಾತಿ ಸಮಾನತೆಗೆ ಪೋಷಕಕಾರಿಯಾಗಿದ್ದರೂ, ಜಾತಿ ಆಧಾರಿತ ರಾಜಕೀಯ ಮಾಡುವವರಿಗೆ ಇದು ಅಪಥ್ಯವೆನಿಸಿದೆ. 
     ವಿದ್ಯಾವಂತ ನಿರುದ್ಯೋಗಿಗಳು, ನಿರಕ್ಷರಸ್ಥ ಉದ್ಯೋಗರಹಿತರುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಣಾಮಕಾರಿ ರೀತಿ-ನೀತಿಗಳನ್ನು ರೂಪಿಸುವುದು ಮಹತ್ವದ್ದಾಗಿದೆ. ಕೇವಲ ಕಣ್ಣೊರೆಸುವ ಕ್ರಮಗಳು, ಅಲ್ಪಕಾಲಿಕ ಲಾಭ ನೀಡುವ ಯೋಜನೆಗಳು, ರಾಜಕೀಯ ಮುನ್ನಡೆಯ ಸಲುವಾಗಿ ಉಚಿತ ಸವಲತ್ತುಗಳನ್ನು ಒದಗಿಸುವ ಭಾಗ್ಯ ಯೋಜನೆಗಳು ಸಾರ್ವಜನಿಕರ ಹಣದ ದುರುಪಯೋಗ ಮಾಡುವುದಕ್ಕೇ ಸೀಮಿತವಾಗುತ್ತವೆ ಮತ್ತು ಇದರಿಂದಾಗಿ ದೀರ್ಘಕಾಲಿಕ ಪರಿಹಾರ ನೀಡುವ ಯೋಜನೆಗಳಿಗೆ ಹೊಡೆತ ಬೀಳುತ್ತವೆ. ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಉದ್ಯೋಗ ಭರವಸೆ ಯೋಜನೆ, ಕೂಲಿಗಾಗಿ ಕಾಳು ಮುಂತಾದ ಯೋಜನೆಗಳು ಸಮರ್ಪಕವಾಗಿ ಜಾರಿಗೊಳ್ಳುವಲ್ಲಿ ಸ್ವಹಿತಾಸಕ್ತ ರಾಜಕಾರಣಿಗಳು, ಗುತ್ತಿಗೆದಾರರುಗಳು ಮತ್ತು ಅಧಿಕಾರಿಗಳ ಕೂಟದ ಭ್ರಷ್ಠಾಚಾರವೂ ತೊಡಕಾಗಿದೆ. ಸುಳ್ಳು ಬಿಲ್ಲುಗಳು, ಸುಳ್ಳು ಕಾಮಗಾರಿಗಳು, ಯಂತ್ರಗಳನ್ನು ಬಳಸಿ ಕಾಮಗಾರಿಗಳನ್ನು ಮಾಡಿಸಿದ ಹಗರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಸುಯೋಗ್ಯ, ಭ್ರಷ್ಠಾಚಾರ ರಹಿತ ಆಡಳಿತ ಬರಬೇಕಾದರೆ ಜನರು ಜಾಗೃತರಾದರೆ ಮಾತ್ರ ಸಾಧ್ಯ.
     ಸೀಮಿತ ಅವಕಾಶಗಳಿರುವಾಗ ತಮ್ಮ ಓದಿಗೆ ತಕ್ಕ ಉದ್ಯೋಗ ಎಲ್ಲರಿಗೂ ಸಿಗುತ್ತದೆಯೆಂದು ನಿರೀಕ್ಷಿಸಲಾಗದು. ಸಿಕ್ಕ ಸಣ್ಣ ಅವಕಾಶಗಳನ್ನು ಕೈಚೆಲ್ಲದೆ ತಮ್ಮ ಕಾಲಿನ ಮೇಲೆ ತಾವು ನಿಂತು ಮುಂದೆ ಹೆಚ್ಚಿನ ಅವಕಾಶಗಳಿಗಾಗಿ ಪ್ರಯತ್ನಿಸುವುದು ಒಳ್ಳೆಯದು. ಧೃಢ ವಿಶ್ವಾಸ, ಸತತ ಪ್ರಯತ್ನಗಳಿದ್ದರೆ ಎಂತಹವರೂ ಮುಂದೆ ಬರಲು ಅವಕಾಶ ಸಿಕ್ಕೇಸಿಗುತ್ತದೆ. ಅಂತರ್ಜಾಲ ಸಮುದಾಯ ತಾಣವೊಂದರಲ್ಲಿ ಓದಿದ ಸಂಗತಿ ಪ್ರೇರಕವಾಗಿದೆ. ಅವನೊಬ್ಬ ಬಡತನದ ಕುಟುಂಬದಿಂದ ಬಂದಿದ್ದ ವ್ಯಕ್ತಿ. ಹೊಟ್ಟೆಯ ಪಾಡಿಗೆ ನಗರದ ಒಂದು ದೊಡ್ಡ ಹೋಟೆಲಿನಲ್ಲಿ ಸಪ್ಲೈಯರ್ ಕೆಲಸಕ್ಕೆ ಸೇರಿಕೊಂಡ. ಅವನಿಗೆ ಗಿರಾಕಿಗಳೊಂದಿಗೆ ಇಂಗ್ಲಿಷಿನಲ್ಲಿ ಮಾತನಾಡಲು ಬರುತ್ತಿರಲಿಲ್ಲವೆಂಬ ಕಾರಣಕ್ಕೆ ಸ್ವಲ್ಪ ದಿನಗಳಲ್ಲೇ ಮಾಲಿಕ ಅವನನ್ನು ಕೆಲಸದಿಂದ ತೆಗೆದು ಹಾಕಿದ. ಎದೆಗುಂದದ ಆತ ತನ್ನ ಗುಡಿಸಲಿನಂತಹ ಮನೆಯಲ್ಲಿಯೇ ತಿಂಡಿಗಳನ್ನು ತಯಾರಿಸಿ ಮಾರಲು ಪ್ರಾರಂಭಿಸಿದ. ರುಚಿಯಾದ ತಯಾರಿಕೆ, ನಗುಮುಖದ ಸೇವೆಯಿಂದ ಬರುವ ಜನರ ಸಂಖ್ಯೆ ಏರುತ್ತಾ ಹೋಯಿತು. ಸಹಾಯಕ್ಕೆ ಇಬ್ಬರು, ಮೂವರು ಸಹಾಯಕರನ್ನೂ ನೇಮಿಸಿಕೊಂಡ. ಒಂದೇ ವರ್ಷದಲ್ಲಿ ಇದ್ದ ಕಟ್ಟಡವನ್ನು ಅಭಿವೃದ್ಧಿಗೊಳಿಸಿದ. ಮತ್ತಷ್ಟು ಜನರನ್ನು ನೇಮಿಸಿಕೊಂಡು ಕೇಟರಿಂಗ್ ವ್ಯವಸ್ಥೆ, ಚಪಾತಿಗಳನ್ನು ಸಿದ್ಧಪಡಿಸಿ ಇತರ ಹೋಟೆಲುಗಳು, ವಸತಿ ಗೃಹಗಳು ಇತ್ಯಾದಿಗಳೆಡೆಗೆ ಒದಗಿಸುವ ಕೆಲಸವೂ ಆರಂಭವಾಯಿತು. ನೋಡ ನೋಡುತ್ತಿದ್ದಂತೆ ಆತ ದೊಡ್ಡ ಕುಳವಾಗಿ ಬೆಳೆದ. ಆದರೆ, ಅವನು ಬೆಳೆಯುವುದಕ್ಕೆ ಕಾರಣವಾದ ಸೌಜನ್ಯದ ನಡವಳಿಕೆಯನ್ನು ಅವನು ಬಿಡಲಿಲ್ಲ. ಈಗ ಅವನು ಒಂದು ಪ್ರತಿಷ್ಠಿತ ಐದು ನಕ್ಷತ್ರದ ಹೋಟೆಲ್ ಸಮುಚ್ಛಯದ ಒಡೆಯ. ಆತನಿಗೆ ಇಂಗ್ಲಿಷ್ ಮಾತನಾಡಲು ಬರದಿದ್ದ ಬಗ್ಗೆ ಆಶ್ಚರ್ಯಗೊಂಡ ಒಬ್ಬರು, ನಿಮಗೆ ಇಂಗ್ಲಿಷ್ ಬರದಿದ್ದರೂ ಇಷ್ಟೊಂದು ಮುಂದುವರೆದಿದ್ದೀರಿ. ಇಂಗ್ಲಿಷ್ ಬಂದಿದ್ದರೆ ಇನ್ನೇನು ಆಗಿರುತ್ತಿದ್ದಿರೋ ಎಂದು ಉದ್ಗರಿಸಿದ್ದರು. ಈ ಮಾತಿಗೆ ಆತ ಪ್ರತಿಕ್ರಿಯಿಸಿದ್ದು ಹೀಗೆ: ನನಗೆ ಇಂಗ್ಲಿಷ್ ಬರುತ್ತಿದ್ದರೆ ಬಹುಷಃ ಇದೇ ಹೋಟೆಲಿನಲ್ಲಿ ಲೆಕ್ಕ ಬರೆದುಕೊಂಡು ಇರುತ್ತಿದ್ದೆನೇನೋ! ಒಬ್ಬ ಶ್ರೇಷ್ಠ ವಿಜ್ಞಾನಿಯಾಗಿ, ಭಾರತದ ರಾಷ್ಟ್ರಪತಿಯೂ ಆಗಿದ್ದ ಡಾ. ಅಬ್ದುಲ್ ಕಲಾಂ ಆಜಾದರು ಚಿಕ್ಕಂದಿನಲ್ಲಿ ಮನೆ ಮನೆಗೆ ವೃತ್ತಪತ್ರಿಕೆ ಹಾಕುವ ಕೆಲಸವನ್ನೂ ಮಾಡಿದ್ದವರು. ಇಂತಹವರ ಅನೇಕ ಉದಾಹರಣೆಗಳು ಕಾಣಸಿಗುತ್ತವೆ. ಯಾವ ಕೆಲಸವೂ ಚಿಕ್ಕದಲ್ಲ. ಮನಸ್ಸಿದ್ದರೆ ಮಾರ್ಗವಿದೆ ಎಂಬುದು ಸುಳ್ಳಲ್ಲ.
     ಮೇಲಿನ ಪ್ಯಾರಾದಲ್ಲಿ ಹೇಳಿದಂತಹ ವ್ಯಕ್ತಿಗಳ ಮನೋಭಾವ ಎಲ್ಲರಲ್ಲೂ ಬರಬೇಕಾದರೆ ಅದಕ್ಕೆ ತಕ್ಕಂತಹ ಶಿಕ್ಷಣ ಪದ್ಧತಿಯಿಂದ ಮಾತ್ರ ಸಾಧ್ಯ. ವೇದಕಾಲದಲ್ಲಿ ಇದ್ದಂತಹ ಶಿಕ್ಷಣ ಪದ್ಧತಿಯ ಸ್ವರೂಪವನ್ನು ಇಂದಿನ ಕಾಲಮಾನಕ್ಕೆ ತಕ್ಕಂತೆ ಸೂಕ್ತವಾಗಿ ರೂಪಿಸುವುದಾದರೆ ಇದು ಅಸಾಧ್ಯದ ಕೆಲಸವೇನಲ್ಲ. ವೇದೋತ್ತರ ಕಾಲದಲ್ಲಿ ಶಿಥಿಲಗೊಂಡರೂ ಉಳಿದುಕೊಂಡು ಬಂದಿದ್ದ ಈ ವ್ಯವಸ್ಥೆ ಸಂಪೂರ್ಣ ನಾಶ ಮಾಡಿದ್ದು ಬ್ರಿಟಿಷರು. ಅದರೊಂದಿಗೆ ಗುಮಾಸ್ತರು, ಗುಲಾಮರನ್ನು ತಯಾರಿಸುವ ಕಾರ್ಖಾನೆಗಳಾಗಿ ಶಾಲೆಗಳು ರೂಪಿತವಾದವು. ಮಕ್ಕಳು ತಿರುಚಿದ ಇತಿಹಾಸವನ್ನು ಕಲಿಯುತ್ತಿದ್ದಾರೆ. ಬರುಬರುತ್ತಾ ಮೌಲ್ಯವರ್ಧನೆಗೆ, ವ್ಯಕ್ತಿತ್ವ ವಿಕಸನಕ್ಕೆ ನೀಡುತ್ತಿದ್ದ ಮಹತ್ವವನ್ನೂ ವ್ಯವಸ್ಥಿತವಾಗಿ ಹಾಳುಗೆಡವುವ ಕೆಲಸ ಪಟ್ಟಭದ್ರರಿಂದ ಆಗುತ್ತಿದೆ. ವೇದಕಾಲದಲ್ಲಿ ಮಕ್ಕಳಿಗೆ ಎಂಟು ವರ್ಷಗಳಾದಾಗ ಅವರಿಗೆ ಉಪನಯನ ಸಂಸ್ಕಾರ ನೀಡಿ ಗುರುಕುಲಕ್ಕೆ ಕಳಿಸಿಕೊಡಲಾಗುತ್ತಿತ್ತು. ಎಲ್ಲಾ ಗಂಡು ಮತ್ತು ಹೆಣ್ಣು ಮಕ್ಕಳಿಗೂ ಈ ಸಂಸ್ಕಾರ ನೀಡಲಾಗುತ್ತಿತ್ತು. ಆಗ ಈಗಿನಂತೆ ಹುಟ್ಟಿನ ಆಧಾರದ ಜಾತಿಗಳಿರಲಿಲ್ಲ. ಎಲ್ಲಾ ಮಕ್ಕಳು, ಅವರು ಸಾಮಾನ್ಯರ ಮಕ್ಕಳಾಗಲೀ, ರಾಜಮನೆತನದವರಾಗಲೀ, ಶ್ರೀಮಂತರಾಗಿರಲಿ, ಆಶ್ರಮದ ನಿಯಮಗಳನ್ನು ಸಮಾನವಾಗಿ ತಪ್ಪದೆ ಪಾಲಿಸಬೇಕಾಗುತ್ತಿತ್ತು. ಆಶ್ರಮಕ್ಕೆ ಬೇಕಾದ ನೀರು ಒದಗಿಸುವುದು, ಉರುವಲು, ಸಮಿತ್ತುಗಳನ್ನು ತರುವುದು, ಇತ್ಯಾದಿ ದೈಹಿಕಶ್ರಮದ ಕೆಲಸಗಳನ್ನು ಎಲ್ಲರೂ ಮಾಡಬೇಕಾಗಿದ್ದಿತು. ಆಶ್ರಮಕ್ಕೆ ಬೇಕಾದ ಸವಲತ್ತುಗಳನ್ನು ಗೃಹಸ್ಥರು ತಮ್ಮ ಜವಾಬ್ದಾರಿಯೆಂಬಂತೆ ಒದಗಿಸುತ್ತಿದ್ದರು. ಸಿರಿವಂತರ ಮಕ್ಕಳೂ ಸಹ ಭಿಕ್ಷಾಟನೆಯಿಂದ ತಮ್ಮ ಮತ್ತು ಆಶ್ರಮವಾಸಿಗಳ ದೈನಿಕ ಅಗತ್ಯತೆಯನ್ನು ಒದಗಿಸಿಕೊಳ್ಳಬೇಕಿದ್ದಿತು. ಆಶ್ರಮದಲ್ಲಿ ಶಾಸ್ತ್ರ ವಿದ್ಯೆಯಲ್ಲದೆ, ಶಸ್ತ್ರವಿದ್ಯೆ, ವ್ಯಾಕರಣ, ಜೋತಿಷ್ಯ, ಗಣಿತ, ಇತಿಹಾಸ ಇತ್ಯಾದಿಗಳನ್ನೂ ಗುರುಗಳು ಹೇಳಿಕೊಡುತ್ತಿದ್ದರು. ಶಿಷ್ಯರು ವಿದ್ಯಾಭ್ಯಾಸ ಮುಗಿಯುವವರೆಗೂ ಗುರುಗಳ ಜೊತೆಯಲ್ಲಿಯೇ ಆಶ್ರಮದಲ್ಲಿದ್ದು ಪಾಂಡಿತ್ಯ ಗಳಿಸಿದ ನಂತರ ಗುರುಗಳ ಆಶೀರ್ವಾದದೊಂದಿಗೆ ಹಿಂತಿರುಗುತ್ತಿದ್ದರು. ಹೀಗೆ ಬಂದವರು ಆತ್ಮಸ್ಥೈರ್ಯ, ಧೃಢವಿಶ್ವಾಸಗಳನ್ನು ಮೈಗೂಡಿಸಿಕೊಂಡು ಸತ್ಪ್ರಜೆಯಾಗಿ ಬಾಳಲು ಶಕ್ತರಾಗಿರುತ್ತಿದ್ದರು. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮೌಲ್ಯ ವರ್ಧಿಸುವ, ಆತ್ಮಸ್ಥೈರ್ಯ ಹೆಚ್ಚಿಸುವ ಅಂಶಗಳ ಕೊರತೆ ಎದ್ದುಕಾಣುತ್ತದೆ. ಇವನ್ನು  ಒಳಗೊಂಡಂತೆ ಸೂಕ್ತ ಶಿಕ್ಷಣ ಪದ್ಧತಿ ಜಾರಿಗೆ ಬರಲೆಂಬ ಆಶಯ ಇಟ್ಟುಕೊಳ್ಳಬಹುದಷ್ಟೆ. ಜ್ಞಾನವಂತರು ಮತ್ತು ಆಡಳಿತಗಾರರ ಸಮ್ಮಿಲಿತ ಧೃಢಸಂಕಲ್ಪ ಮಾತ್ರ ಇದನ್ನು ಸಾಕಾರಗೊಳಿಸಲು ಸಾಧ್ಯ. 
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ